ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್ ಬಣಗಳ ನಡುವಿನ ಭಿನ್ನಾಭಿಪ್ರಾಯ ಅಂತ್ಯಕ್ಕೆ ಕಮಲ್ ನಾಥ್ ಮಧ್ಯಸ್ಥಿಕೆ

ಹೊಸದಿಲ್ಲಿ: ರಾಜಸ್ಥಾನದಲ್ಲಿ ಪಂಜಾಬ್ ರೀತಿಯ ಸೋಲನ್ನು ತಪ್ಪಿಸಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ನಾಯಕತ್ವವು ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಹೋಗಲಾಡಿಸಲು ಮಧ್ಯಸ್ಥಿಕೆ ವಹಿಸುವಂತೆ ಮಾಡಿ ಶಾಂತಿ ಸೂತ್ರ ಕಂಡುಹಿಡಿಯುವ ಆಶಯದಲ್ಲಿದೆ ಎಂದು ಮೂಲಗಳು NDTV ಗೆ ತಿಳಿಸಿವೆ.
ಕಮಲ್ ನಾಥ್ ಅವರು ಗುರುವಾರ ದಿಲ್ಲಿಯಲ್ಲಿ ಪೈಲಟ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು. ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಗೆಹ್ಲೋಟ್‌ಗೆ ನೇರ ಸವಾಲು ಎಂಬಂತೆ ಪೈಲಟ್ ಅವರು ಹಿಂದಿನ ಬಿಜೆಪಿ ಸರಕಾರದ ನೇತೃತ್ವದ ಭ್ರಷ್ಟಾಚಾರದ ವಿರುದ್ಧ ಈ ವಾರ ಒಂದು ದಿನದ ಉಪವಾಸವನ್ನು ನಡೆಸಿದ್ದರು. ವಸುಂಧರಾ ರಾಜೆ ಸರಕಾರದ ಭ್ರಷ್ಟಾಚಾರ ಆರೋಪದ ವಿರುದ್ಧ ಕ್ರಮ ಕೈಗೊಳ್ಳಲು ತಮ್ಮದೇ ಪಕ್ಷದ ಸರಕಾರ ನಿಷ್ಕ್ರಿಯವಾಗಿದೆ ಎಂದು ಪೈಲಟ್ ಆರೋಪಿಸಿದರು.
ಕಾಂಗ್ರೆಸ್ ನಾಯಕತ್ವವು ಆರಂಭದಲ್ಲಿ ಗೆಹ್ಲೋಟ್ ಅವರನ್ನು ಬೆಂಬಲಿಸಿ ಎರಡು ಹೇಳಿಕೆಗಳನ್ನು ನೀಡಿದ್ದು, ಪೈಲಟ್ ಅವರ ಉಪವಾಸವನ್ನು "ಪಕ್ಷ ವಿರೋಧಿ ಚಟುವಟಿಕೆ" ಎಂದು ಕರೆದಿತ್ತು. ಇದೀಗ ತನ್ನ ನಿಲುವನ್ನು ಬದಲಿಸಿದೆ. ತಟಸ್ಥ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.
ದಿಲ್ಲಿಗೆ ಭೇಟಿ ನೀಡಿರುವ ಪೈಲಟ್ ಅವರು ಕಮಲ್ ನಾಥ್ ಹಾಗೂ ವೇಣುಗೋಪಾಲ್ ಅವರಿಗೆ ತಮ್ಮ ಕುಂದುಕೊರತೆಗಳನ್ನು ತಿಳಿಸಿದರು ಮತ್ತು ಪಕ್ಷದಿಂದ ನ್ಯಾಯಯುತವಾದ ಪರಿಹಾರವನ್ನು ಕೋರಿದರು ಎಂದು ಮೂಲಗಳು ತಿಳಿಸಿವೆ.







