ಅಪಘಾತದಲ್ಲಿ ಐರಿಶ್ ರ್‍ಯಾಲಿ ಚಾಲಕ ಕ್ರೇಗ್ ಬ್ರೀನ್ ಮೃತ್ಯು

ಝಗ್ರೆಬ್: ಕ್ರೊವೇಶಿಯಾದಲ್ಲಿ ನಡೆಯಲಿದ್ದ ವಿಶ್ವ ರ್‍ಯಾಲಿ ಚಾಂಪಿಯನ್‌ಶಿಪ್‌ಗೆ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪರೀಕ್ಷಾರ್ಥ ರೇಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಐರಿಶ್‌ನ ರ್‍ಯಾಲಿ ಚಾಲಕ ಕ್ರೇಗ್ ಬ್ರೀನ್ (Craig Breen) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕ್ರೇಗ್ ಬ್ರೀನ್ ಕ್ರೊವೇಶಿಯಾ ರ್ಯಾಲಿಯ ಪೂರ್ವಭಾವಿ ರೇಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹ್ಯುಂಡೈ ಮೋಟೊಸ್ಪೋರ್ಟ್ ಮಾಹಿತಿ ನೀಡಿದೆ. "ಘಟನೆಯಲ್ಲಿ ಸಹ ಚಾಲಕ ಜೇಮ್ಸ್ ಫುಲ್ಟನ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
2009ರಿಂದ ಹಲವಾರು ತಂಡಗಳ ಪರವಾಗಿ ಕ್ರೇಗ್ ಬ್ರೀನ್ ವಿಶ್ವ ರ್‍ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿಯ ವಿಶ್ವ ರ್‍ಯಾಲಿ ಚಾಂಪಿಯನ್‌ಶಿಪ್ ಕ್ರೊವೇಶಿಯಾದಲ್ಲಿ ಮುಂದಿನ ವಾರದಿಂದ ಪ್ರಾರಂಭಗೊಳ್ಳಲಿದೆ.
ಕ್ರೇಗ್ ಬ್ರೀನ್ ಮಾಜಿ ಐರಿಶ್ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್ ಒಬ್ಬರ ಪುತ್ರರಾಗಿದ್ದು, ಕಾರು ಚಾಲಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದರು. 2012ರಲ್ಲಿ ಇಟಲಿಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿ ಸಂದರ್ಭದಲ್ಲಿ ನಡೆದಿದ್ದ ಅಪಘಾತದಲ್ಲಿ ಅವರ ಸಹ ಚಾಲಕ ಗಾರೆತ್ ರಾಬರ್ಟ್ಸ್ ಮೃತಪಟ್ಟಿದ್ದರು.
"ಐರಿಶ್ ಮೋಟೊಸ್ಪೋರ್ಟ್ ಸಮುದಾಯವು ಈ ದುರ್ಘಟನೆಯ ಸುದ್ದಿಯಿಂದ ಆಘಾತಗೊಂಡಿದೆ. ಕ್ರೇಗ್ ಬ್ರೀನ್ ವಿಶ್ವ ದರ್ಜೆಯ ಚಾಲಕ ಮತ್ತು ವಿಶ್ವ ದರ್ಜೆಯ ವ್ಯಕ್ತಿಯಾಗಿದ್ದರು" ಎಂದು ಮೋಟೊಸ್ಪೋರ್ಟ್ ಐರ್ಲೆಂಡ್‌ನ ಅಧ್ಯಕ್ಷ ಹಾರ್ಪರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.