ಭಾರತೀಯರ ಘನತೆ ಡಾ. ಅಂಬೇಡ್ಕರ್

‘‘ನಿನಗೆ ಗೌರವ ಸಿಗದ ಜಾಗದಲ್ಲಿ ನಿನ್ನ ಚಪ್ಪಲಿಯನ್ನೂ ಬಿಡಬೇಡ’’ ಎಂದು ಭೀಮಸಾಹೇಬರು ಹೇಳುತ್ತಾರೆ. ಸ್ವತಹ ಭೀಮ ಸಾಹೇಬರು ಅಂತಹ ಸ್ವಾಭಿಮಾನಿಯಾಗಿದ್ದರು ಮತ್ತು ಘನತೆಯಿಂದ ಬದುಕಿದ್ದರು. ಇದನ್ನೆಲ್ಲ ಯಾವುದೇ ಒಂದು ಸಮುದಾಯಕ್ಕೆ ಹೇಳಿದ್ದಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಹೇಳಿದ ಮಾತು ಎನ್ನುವುದನ್ನು ಮರೆಯದಿರೋಣ.
ಎಪ್ರಿಲ್ 14 ಡಾ.ಭೀಮ ಸಾಹೇಬ ಹುಟ್ಟಿದ ದಿನ ಮತ್ತು ನಾವೆಲ್ಲರೂ ಹುಟ್ಟಿದ ದಿನ ಕೂಡ ಹೌದು. ಈ ಸಾಲು ತುಂಬಾ ಭಾವನಾತ್ಮಕವಾಗಿ ಹೇಳಿದ, ಬರೆದ ಸಾಲುಗಳು. ನಿಜ ಅರ್ಥದಲ್ಲಿಯೂ ಕೂಡ ವಾಸ್ತವಿಕವಾಗಿ ಭೀಮ ಸಾಹೇಬರು ಈ ನೆಲದಲ್ಲಿ ಹುಟ್ಟಿದ್ದರಿಂದ ನಮ್ಮ ಹುಟ್ಟಿಗೆ ಸಾಕ್ಷಿ ಸಿಗುವಂತಾಯಿತು. ಈ ದಿನ ನಮಗೆಲ್ಲ ಮಹತ್ವದ ದಿನ. ಬದುಕು ಬೆಳಕಾದ ದಿನ ಕೂಡ. ಹೌದು ಆಕಸ್ಮಾತ್ ಭೀಮ ಸಾಹೇಬರು ಹುಟ್ಟದೇ ಇದ್ದಿದ್ದರೆ ನಾವೆಲ್ಲರೂ ಹೀಗೆ ಬರೆಯಲ್ಕಿಕೆ ಸಾಧ್ಯವಿತ್ತಾ? ಒಂದು ಘಳಿಗೆ ಯೋಚಿಸಿ ನೋಡಿ.
ಒಬ್ಬ ಜೀವಂತ ಮನುಷ್ಯ ತಾನು ನಡೆದ ಹೆಜ್ಜೆಗಳ ಗುರುತನ್ನು ತಾನೇ ಗುಡಿಸಿಕೊಂಡು ಹೋಗುವ, ಅಂದರೆ ತನ್ನ ಇರುವಿಕೆಯನ್ನು ತಾನೇ ಅಳಿಸಿಕೊಳ್ಳುವ, ಒಂದು ಕ್ರೂರ ಪದ್ಧತಿ ಇತ್ತು. ಅದು ಒಂದು ಧರ್ಮದ ಮೇಲೆ ಹೇರಿಕೆಯಾಗಿ ಒಬ್ಬ ಮನುಷ್ಯನ ಬದುಕನ್ನೇ ಬದುಕಿಲ್ಲದಂತೆ ಇಲ್ಲವಾಗಿಸುವುದನ್ನು ಜಗತ್ತಿನ ಶ್ರೇಷ್ಠ ಧರ್ಮವೆಂದು ಯಾವ ನಾಲಿಗೆಯಿಂದ ಹೇಳಲು ಸಾಧ್ಯ ಹೇಳಿ? ಇಂತಹ ನೂರಾರು ಸಾವಿರಾರು ಘಟನೆಗಳು ಶತಮಾನಗಳಿಂದ ನಡೆದಿದ್ದೂ ಇದೆ. ಇದೇ ಸಮಾಜದ ಸ್ಥಿತಿ ಎಂದು ನಂಬಿಸಿ ಇನ್ನಿಲ್ಲದಂತೆ ಜೀವ ಹತ್ಯೆಗಳನ್ನು ಮಾಡುತ್ತಾ ಇದು ಅವರ ಹಣೆಬರಹ ಎಂದು ನಂಬಿಸಿದ ಕಾಲ ಒಂದಿತ್ತು. ಇದೆಲ್ಲವನ್ನೂ ನೋಡಿ ಕೇಳಿ, ಓದಿ, ಅನುಭವಿಸಿ ಇದಕ್ಕೆ ಒಂದು ಸಣ್ಣ ಇರುವೆಯ ಪ್ರತೀಕಾರವನ್ನು ತೋರಿಸದೆ, ಖಂಡಿತ ಇದಕ್ಕೆಲ್ಲ ಪರಿಹಾರವಿದೆ. ಉತ್ತರವಿದೆ ಎಂದು ತನಗೆ ತಾನೇ ಮಾತನಾಡಿಕೊಳ್ಳುತ್ತಾ, ಸಹಿಸಿಕೊಳ್ಳುತ್ತಾ ಮುಗುಳ್ನಗುತ್ತಾ ಮತ್ತು ಇಂತಹವರ ಬಿಡುಗಡೆಗಾಗಿ, ವಿಮೋಚಕರಾಗಿ, ತನ್ನ ಬದುಕನ್ನು ಮುಡಿಪಾಗಿ ಇಟ್ಟವರು ಡಾ.ಭೀಮ ಸಾಹೇಬ ಅಂಬೇಡ್ಕರವರು.
ಕಳೆದ ಕೆಲವು ದಿನಗಳ ಹಿಂದೆ, ಈ ನಾಡಿನ ಪ್ರಸಿದ್ಧ ಕವಿಗಳು, ಚಿಂತಕರು, ದಲಿತ ಚಳವಳಿಯ ನೇತಾರರೂ ಆಗಿದ್ದ ಕೆ.ಬಿ.ಸಿದ್ದಯ್ಯ ಅವರ ‘ದಕ್ಲದೇವಿ ಕಾವ್ಯ’ ನಾಟಕ ನೋಡಿದೆ, ಇತ್ತೀಚಿನ ವರ್ಷಗಳಲ್ಲೇ ನಾನು ನೋಡಿದ ಒಂದು ಅದ್ಭುತ ಪ್ರಯೋಗ ಅದು. ಅದರಲ್ಲಿ ಒಂದು ಸಂಭಾಷಣೆ ಹೀಗಿದೆ ‘‘ಮಕ್ಕಳಾ ನಿಮಗೆ ನಮ್ಮ ಓದಪ್ಪನವರ ಕಥೆ ಗೊತ್ತಾ?’’ ಎಂದು ಕೇಳುತ್ತಾರೆ, ಅದಕ್ಕೆ ಮಕ್ಕಳು ‘‘ಗೊತ್ತಿಲ್ಲಪ್ಪ’’ ಎಂದು ಹೇಳುತ್ತವೆ. ಅದಕ್ಕೆ ಅಪ್ಪ ‘‘ಅದೇ ಕಣಪ್ಪ ಯಾವಾಗಲೂ ಓದ್ತಾನೇ ಇದ್ರಲ್ಲಪ್ಪ ಅವರೇ ಕಣಪ್ಪಾ ಓದಪ್ಪನವರು.’’ ನಾಟಕದ ಈ ಒಂದು ಸಾಲು ಭೀಮ ಸಾಹೇಬರ ಓದನ್ನು, ಜ್ಞಾನದ ಹಸಿವನ್ನು ಎಷ್ಟು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಇವರ ಹೆಸರನ್ನು ಹೇಳದಿದ್ದರೂ ಇದು ಭೀಮ ಸಾಹೇಬರ ಬಗ್ಗೆ ಹೇಳಿದ ಮಾತು ಎಂದು ತಿಳಿಯುತ್ತದೆ. ಇರಲಿ ನನಗೆ ಈ ಕ್ಷಣ ಒಂದು ವಿಷಯ ನೆನಪಿಗೆ ಬರುತ್ತದೆ. ಬಾಲ್ಯದಿಂದಲೂ ಇದುವರೆಗೆ ದೊಡ್ಡ ದೊಡ್ಡವರ ಅನೇಕ ಭಾಷಣಗಳನ್ನು ಕೇಳಿದ್ದೇನೆ (ವಿಶೇಷವಾಗಿ ದಲಿತ ಚಳವಳಿಯ ಹೊರತಾಗಿ) ಸ್ವಾತಂತ್ರ್ಯ ಪೂರ್ವದ ಮತ್ತು ನಂತರದ ದೊಡ್ಡ ನಾಯಕರ ಹೆಸರುಗಳ ಪಟ್ಟ್ಟಿಯನ್ನೇ ಭಾಷಣಗಳಲ್ಲಿ ಹೇಳುವಾಗ ಅಪ್ಪಿ ತಪ್ಪಿಯೂ ಡಾ. ಭೀಮ ಸಾಹೇಬರ ಹೆಸರು ಹೇಳಿದ್ದನ್ನು ನಾನು ಕೇಳಿಲ್ಲ. ಕೊನೆ ಪಕ್ಷ ತಳ ಸಮುದಾಯದ ಹೋರಾಟಗಾರ ಡಾ. ಭೀಮ ಸಾಹೇಬ ಅಂಬೇಡ್ಕರ್ ಎಂದು ಹೇಳಬಹುದಿತ್ತು. ಆದರೆ ಉಳಿದ ಸಮುದಾಯದವರು ತುಂಬ ಎಚ್ಚರದಿಂದ ಅವರ ಹೆಸರನ್ನೇ ಮರೆತು ಬಿಡುತ್ತಿದ್ದರು. ಆದರೆ ಕರ್ನಾಟಕದಲ್ಲಿ ದಲಿತ ಚಳವಳಿ ಅವರ ಹೆಸರು ಮತ್ತು ಭಾವಚಿತ್ರದೊಂದಿಗೆ ಅವರ ಆಶಯಗಳನ್ನು ಇಟ್ಟುಕೊಂಡು ಹೋರಾಟ ಕಟ್ಟಲು ಪ್ರಾರಂಭಿಸಿದಾಗ ಆಗ ಉಳಿದವರ ದೇಹ ಸಡಿಲಾಗಿ ಗಂಟಲು ಸರಿ ಮಾಡಿಕೊಂಡು ಅವರ ಬಗ್ಗೆ ಮಾತನಾಡಲಾರಂಭಿಸಿದರು. ಎಲ್ಲಿ ಅವರ ಹೆಸರು ಹೇಳಿದರೆ ನಾವು ಆ ಜನಾಂಗಕ್ಕೆ ಸೇರಿದವರು ಎಂದುಕೊಳ್ಳುತ್ತಾರೋ ಎನ್ನುವ ಭಯ ಅವರಿಗೆ ಕಾಡಿರಬೇಕು. ಆದರೆ ಭೀಮ ಸಾಹೇಬರು ನೊಂದವರ, ಶೋಷಿತರ, ಮಹಿಳೆಯರ ಬಗ್ಗೆ ಎಷ್ಟು ಗಂಭೀರವಾಗಿ ಚಿಂತಿಸಿದ್ದರು. ಅಷ್ಟೇ ಗಂಭೀರವಾಗಿ ಇಡೀ ಭಾರತಿಯರನ್ನೇ ಅಪಾರವಾಗಿ ಪ್ರೀತಿಸಿದ ಅಪ್ಪಟ ಭಾರತೀಯವನಾಗಿದ್ದರು ಎನ್ನುವುದನ್ನು ಮರೆಯಬಾರದು.
ಡಾ. ಭೀಮ ಸಾಹೇಬರು ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲವು ಕ್ಷಣಗಳಾದರೂ ಭೂಮಿಯಿಂದ ಸ್ವಲ್ಪವೇ ಮೇಲೆ ಜಿಗಿದಂತೆ ನಡೆದು ಹಗುರಾಗುವ ಸಂಭ್ರಮಗಳನ್ನು ಅನುಭವಿಸಬೇಕು ಎಂದು ಯೋಚಿಸುವ ಹೊತ್ತಿನಲ್ಲಿ ಒಂದು ಕೆಟ್ಟ ಸುದ್ದಿಯನ್ನು ಓದಿದೆ. ಅದು ತಮಿಳುನಾಡಿನ ಒಂದು ಗ್ರಾಮದಲ್ಲಿ ದಲಿತರು ಕುಡಿಯುವ ನೀರಿನ ಟ್ಯಾಂಕಿಗೆ ಮಲವನ್ನು ಸುರಿದಿದ್ದಾರೆ ಎಂಬುದು. ಈ ಅಮಾನುಷ ಕೃತ್ಯವನ್ನು ಖಂಡಿಸುತ್ತಲೇ ಹೀಗೆ ಸುರಿದವರ ತಲೆಯಲ್ಲಿ ಜಾತಿಯ ಕಸವನ್ನು ತುಂಬಿಕೊಂಡಿರುವಾಗ ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ ಹೇಳಿ? ನನಗೆ ಆಗಾಗ ನೆನಪಾಗುತ್ತದೆ ಭಾರತದಲ್ಲಿ ಪ್ರತೀ ದಿನವೂ ಅಸ್ಪಶ್ಯತೆ ಪ್ರಕಾಶಿಸುತ್ತಲೇ ಇರುತ್ತದೆ ಎಂದು. ಇಂತಹುದೇ ಇನ್ನೊಂದು ರೀತಿಯ ಘಟನೆ ನಮ್ಮ ಕರ್ನಾಟಕದಲ್ಲಿ ಮಹಿಳೆಯೊಬ್ಬಳು ನೀರಿನ ಟ್ಯಾಂಕ್ ಮುಟ್ಟಿದ್ದಕ್ಕೆ ಇಡೀ ಟ್ಯಾಂಕಿನ ನೀರನ್ನೇ ಹೊರ ಬಿಡಲಾಯಿತು ಮತ್ತು ಕೆಲವು ವರ್ಷಗಳ ಹಿಂದೆ ‘ಬೆಂಡಿಗೆರೆ’ಯಲ್ಲಿ ಮಲ ತಿನ್ನಿಸಿದ ಪ್ರಕರಣ ಮತ್ತು ಇತ್ತೀಚೆಗೆ ಮೂತ್ರ ನೆಕ್ಕಿಸಿದ ಘಟನೆಗಳು ಕರ್ನಾಟಕದಲ್ಲೇ ನಡೆದಿರುವುದು ನಮಗೆಲ್ಲ ತಿಳಿದಿರುವ ವಿಷಯವೇ. ಡಾ. ಭೀಮ ಸಾಹೇಬರು ಮಧ್ಯಪ್ರದೇಶದಲ್ಲಿ ನಡೆದಿದ್ದ ಇಂತಹದೊಂದು ಘಟನೆಯನ್ನು ತಮ್ಮ ಬರಹದ ಮೂಲಕ ದಾಖಲಿಸಿದ್ದಾರೆ. ಆ ಘಟನೆಯ ವಿವರ ಹೀಗಿದೆ.
ಭಾರತದ ಎಲ್ಲ ಹಳ್ಳಿಗಳಲ್ಲೂ ಉಳಿದ ಸಮುದಾಯದವರು (ನಾನು ಸವರ್ಣೀಯರೆಂದು ಬಳಸುವುದಿಲ್ಲ) ಮತ್ತು ತಳಸಮುದಾಯದವರು ಇರುವುದು ಸಾಮಾಜಿಕ ವ್ಯವಸ್ಥೆಯ ಒಂದು ಭಾಗವಾಗಿದೆ. ಈ ಉಳಿದ ಸಮುದಾಯದವರು ಆಗಾಗ ತೀರ್ಥ ಯಾತ್ರೆಗೆ ಹೋಗುವುದು ವಿಶೇಷವಾಗಿ ಕಾಶಿಯಾತ್ರೆಗೆ ಹೋಗಿ ಬಂದಾಗ, ಭಕ್ತಿ ಭಾವದಲ್ಲಿ ತಲ್ಲೀನರಾಗುತ್ತಿದ್ದುದನ್ನು ಗಮನಿಸುತ್ತಿದ್ದ ತಳಸಮುದಾಯಗಳು ‘‘ಭಕ್ತರಪ್ಪೊ ಭಕ್ತರು ನನ್ನ ಜನಗಳು’’ ಎಂದು ಕವಿ ಸಿದ್ಧಲಿಂಗಯ್ಯನವರು ಬರೆದ ಹಾಗೆ ಇವರಿಗೂ ಕಾಶಿಯಾತ್ರೆಗೆ ಹೋಗಿ ಬರುವ ಆಸೆಯಾಗುತ್ತದೆ. ಆದರೆ ಉಳಿದ ಸಮುದಾಯದ ಹಾಗೆ ಆರ್ಥಿಕವಾಗಿ ಸಬಲರಲ್ಲ. ಹೀಗಾಗಿ ಎಲ್ಲರೂ ಒಂದು ಕಡೆ ಕುಳಿತು ಮಾತನಾಡುತ್ತಿದ್ದಾಗ ಒಂದು ವಿಷಯ ಪ್ರಸ್ತಾಪವಾಗುತ್ತದೆ. ‘‘ನಾವೆಲ್ಲರೂ ಕಾಶಿಯಾತ್ರೆ ಮಾಡಲು ಸಾಧ್ಯವಾಗುತ್ತಿಲ್ಲ, ಬದಲಾಗಿ ನಾವೆಲ್ಲರೂ ಸೇರಿ ಒಬ್ಬರನ್ನು ಕಳಿಸಿ ಅವನು ಹೋಗಿ ಬಂದ ಮೇಲೆ ಆತನ ಕಣ್ಣಲ್ಲಿ ಆ ದೇವರನ್ನು ಕಾಣೋಣ ’’ ಎಂಬ ತೀರ್ಮಾನಕ್ಕೆ ಬರುತ್ತಾರೆ ಮತ್ತು ಹಾಗೇ ಮಾಡುತ್ತಾರೆ. ಕಾಶಿಯಾತ್ರೆಗೆ ಹೋಗಿ ಬಂದವರನ್ನು ನೋಡಿ ಇವರಿಗೆ ಆಗುವ ಸಂತೋಷಕ್ಕೆ ಪಾರವೇ ಇಲ್ಲ. ಸಡಗರದಿಂದ ಎಲ್ಲರೂ ಒಂದು ಕಡೆ ಸೇರಿ ಒಟ್ಟಿಗೆ ಕುಳಿತು ಊಟ ಮಾಡುವ ಸಿದ್ಧತೆ ಮಾಡಿಕೊಂಡು ಸಾಲಾಗಿ ಕುಳಿತು ಎಲೆ ಹಾಕಿ ಊಟದ ಪದಾರ್ಥಗಳನ್ನು ಬಡಿಸುತ್ತಾರೆ. ಇನ್ನೇನು ಊಟಕ್ಕೆ ಕೈ ಹಾಕಬೇಕು ಅನ್ನುವಷ್ಟರಲ್ಲಿ ಮರೆಯಲ್ಲಿ ಕಾದು ಕುಳಿತಿದ್ದ ಉಳಿದ ಸಮುದಾಯದ ಜನ ಮರದ ಎಲೆಗಳಿಗೆ ಕೊಂಬೆ, ರೆಂಬೆಗಳಿಗೆ ಮಲಸವರಿದ್ದನ್ನು ಊಟದ ಎಲೆಗಳಿಗೆ ಎರಚಿಕೊಂಡು ಮಿಂಚಿನಂತೆ ಮಾಯವಾಗಿ ಬಿಡುತ್ತಾರೆ. ಊಟಕ್ಕೆ ಕುಳಿತವರ ಮನಸ್ಥಿತಿ ಹೇಗಾಗಿರಬೇಡ. ಇದು ಈ ದೇಶದ ಶ್ರೇಷ್ಠ ಧರ್ಮದ ಮನಸ್ಥಿತಿಯೆಂದು ಅರ್ಥಮಾಡಿಕೊಳ್ಳಬೇಕು. ಈ ಘಟನೆ ಭೀಮ ಸಾಹೇಬರ ಗಮನಕ್ಕೆ ಬರುತ್ತದೆ. ತುಂಬ ನೊಂದುಕೊಂಡ ಭೀಮ ಸಾಹೇಬರು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾರೆ. ಆದರೆ ಎದೆಗುಂದದೆ ಎದುರಿಗೆ ಇದ್ದವರನ್ನು ಸಮಾಧಾನ ಮಾಡಿ ಕಳುಹಿಸಿ ಕೊಡುತ್ತಾರೆ. ಬಹುಶಃ ಇಂತಹ ನೂರಾರು ಘಟನೆಗಳನ್ನು ಕೇಳಿ ಮನನೊಂದು ‘‘ನಾನು ಹಿಂದೂ ಆಗಿ ಹುಟ್ಟಿರಬಹುದು ಆದರೆ ಹಿಂದೂ ಆಗಿ ಸಾಯಲಾರೆ’’ ಮತ್ತು ಇಂತಹ ಕ್ರೂರ ವ್ಯವಸ್ಥೆಯಲ್ಲಿ ಇಲ್ಲಿರಲು ಸಾಧ್ಯವೇ ಇಲ್ಲವೆಂದು ಪ್ರೀತಿ, ಕರುಣೆ, ಬ್ರಾತೃತ್ವ, ಸಹಬಾಳ್ವೆಯೇ ಭಾಗವಾಗಿದ್ದ ಬೌದ್ಧ ಧರ್ಮಕ್ಕೆ ‘ಮರಳಿ ಮನೆಗೆ’ ಎಂದು ಲಕ್ಷಾಂತರ ಜನರೊಂದಿಗೆ ಬೌದ್ಧರಾಗುತ್ತಾರೆ
ಈ ಹೊತ್ತು ಭೀಮ ಸಾಹೇಬರನ್ನು ಏನೆಲ್ಲ ಓದಿಕೊಂಡಿದ್ದೇವೆ ಎನ್ನುವುದಕ್ಕಿಂತ ಏನೆಲ್ಲ ಪಡೆದುಕೊಂಡು ಅದನ್ನು ನಮ್ಮ ನಡೆ ನುಡಿಯಲ್ಲಿ ಪಾಲಿಸುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ ಮತ್ತು ಬಾಬಾ ಸಾಹೇಬರ ಹುಟ್ಟು ಹಬ್ಬಕ್ಕೆ ನಾವು ಕೊಡಬಹುದಾದಂತಹ ನಿಜ ಕಾಣಿಕೆ ಆಗಿರುತ್ತದೆ. ಮನುಷ್ಯನಂತೆ ಬದುಕುವುದು ನಾಗರಿಕ ಸಮಾಜ ಅನ್ನಿಸುತ್ತದೆ. ಇದರ ಹೊರತಾಗಿ ಅವನ ನಡೆ ನುಡಿಗಳು ಅಮಾನುಷವಾಗಿದ್ದರೆ ಅದನ್ನು ಸರಿ ಮಾಡಿಕೊಳ್ಳಲಿಕ್ಕೆ ನೂರಾರು ಮಾರ್ಗಗಳು ಇವೆ. ‘‘ಒಳ್ಳೆಯದನ್ನೇ ಚಿಂತಿಸು, ಒಳ್ಳೆಯದೇ ಕಾಣುತ್ತದೆ’’ ಇದು ರಾಮಕೃಷ್ಣ ಪರಮಹಂಸರ ಮಾತು. ಎಲ್ಲಾ ಒಳ್ಳೆಯ ಆದರ್ಶಗಳು ಅದು ಬರೀ ಓದಿಕೊಳ್ಳುವುದಕ್ಕೆ ಅಲ್ಲ, ಭಾಷಣ ಮಾಡುವುದಕ್ಕೂ ಅಲ್ಲ, ಅದನ್ನು ನಮ್ಮ ಬದುಕಿಗೆ ಅಳವಡಿಕೆ ಮಾಡಿಕೊಂಡಾಗ ಮಾತ್ರ ಅರ್ಥಪೂರ್ಣವಾಗುತ್ತದೆ.
ಭೀಮ ಸಾಹೇಬರ ಬದುಕು, ಬರಹ, ಭಾಷಣ ಎಲ್ಲವೂ ಜನಪರವಾಗಿತ್ತು. ಮಾನವೀಯ ಅಂತಃಕರಣದಿಂದ ಕೂಡಿದ್ದಾಗಿತ್ತು. ಮಾನವ ಪ್ರೇಮ ಎಂಬುದು ಅವರ ಉಸಿರಾಗಿತ್ತು. ಎಲ್ಲರನ್ನೂ ಒಳಗೊಳ್ಳುವ ಗಾಳಿಯಲ್ಲಿ ಬೆರೆತ ಎಲ್ಲರ ಉಸಿರು ಎಲ್ಲರ ಮಾನ, ಪ್ರಾಣ ಕಾಪಾಡುವ ವಿವೇಕದ್ದಾಗಿರಬೇಕು ಎನ್ನುವುದು ಭೀಮಸಾಹೇಬರ ಆಶಯವಾಗಿತ್ತು. ಇದೆಲ್ಲ ನಮ್ಮ ಶ್ರೇಷ್ಠ ‘ಸಂವಿಧಾನ’ದಲ್ಲಿ ಅಡಕವಾಗಿದೆ ಎನ್ನುವುದು ನಮಗೆಲ್ಲ ತಿಳಿಯದ ವಿಷಯವೇನೂ ಅಲ್ಲ. ಒಬ್ಬ ಮನುಷ್ಯನ ಹುಟ್ಟಿಗೆ ಅರ್ಥ ಬರಬೇಕಾದರೆ ಇನ್ನೊಬ್ಬರಿಗೆ ತೊಂದರೆಯಾಗದಂತೆ, ನೋವು, ಅವಮಾನವಾಗದಂತೆ ಬದುಕುವುದು. ಇಂತಹುದನ್ನು ಈ ನೆಲದ ಮಹಾಪುರುಷರು ಮತ್ತೆ ಮತ್ತೆ ಹೇಳಿ ಹೋಗಿದ್ದಾರೆ. ಆದರೂ ಈ ಸಮಾಜ ಚಲಿಸದೆ ಜಡವಾಗಿ ನಿಂತಿದೆ. ಯಾವ ಧರ್ಮ-ದೇವರು ಹೇಳದ್ದನ್ನು ಪ್ರಕೃತಿ ಪ್ರತಿನಿತ್ಯ, ಪ್ರತಿಕ್ಷಣ ಪಾಠ ಹೇಳುತ್ತಲೇ ಇದೆ. ಆದರೆ ಈ ಮನುಷ್ಯ ಅದನ್ನು ಕೇಳಿಸಿಕೊಂಡಂತೆ ಕಾಣುತ್ತಿಲ್ಲ. ಬಾಬಾ ಸಾಹೇಬರನ್ನು ಓದುವುದು ಎಂದರೆ ಮನುಷ್ಯರಾಗುವುದು ಎಂದರ್ಥ. ಅದಕ್ಕೆ ಮೇಲೆ ಹೇಳಿದ ನಾಟಕದ ಒಂದು ಮಾತಿನಂತೆ ‘‘ನಮ್ಮ ಓದಪ್ಪನವರು ಅಂತ ಇದ್ರಲ್ಲ ಅವರ ಹಾಗೆ ಓದುತ್ತಾ, ಬರೆಯುತ್ತಾ, ಬೆಳೆಯುತ್ತಾ ಬಯಲಾಗಬೇಕು’’.
ಮನುಷ್ಯ ಘನತೆ ಮತ್ತು ಸ್ವಾಭಿಮಾನದಿಂದ ಬದುಕಬೇಕೆಂದು ಭೀಮ ಸಾಹೇಬರು ಮತ್ತೆ ಮತ್ತೆ ಹೇಳುತ್ತಿದ್ದರು. ಆತನಿಗೆ ಸಿಗುವ ಗೌರವದಿಂದ ಆತನ ಆತ್ಮವಿಶ್ವಾಸ ಹೆಚ್ಚುತ್ತದೆ. ಆದ್ದರಿಂದ ಎಲ್ಲರೂ ಗೌರವದಿಂದ ಬದುಕುವುದು ಒಂದು ಸಮಾಜದ ಸ್ವಾಸ್ಥ್ಯವನ್ನು ಗಟ್ಟಿಗೊಳಿಸುತ್ತದೆ. ಆದರೆ ಯಾಕೋ ಏನೋ ಉಳಿದ ಸಮುದಾಯದ ಕೆಲವರು ತಾವು ಮಾತ್ರ ಘನತೆ ಮತ್ತು ಗೌರವದಿಂದ ಬದುಕಬೇಕು. ಉಳಿದವರು ಹುಳ ಹುಪ್ಪಟೆಗಳಂತೆ ಅವರ ಕಾಲ ಕೆಳಗೆ ಬಿದ್ದಿರಬೇಕೆಂದು ಬಯಸುತ್ತಾರೆ. ಇದು ತಮಗೆ ಶತಮಾನಗಳಿಂದಲೂ ತಮ್ಮ ಜಾತಿಗೆ, ಧರ್ಮಕ್ಕೆ ಬಂದ ಬಳುವಳಿ ಎಂದು ಬೀಗುತ್ತಿದ್ದಾರೆ. ಪ್ರಜಾಪ್ರಭುತ್ವದ ಸಾರಾಂಶ ಜನರಿಂದ ಜನರಿಗಾಗಿ ಎನ್ನುವ ಸಮ ಸಮಾಜದ ಬದುಕು ಕಟ್ಟಿಕೊಳ್ಳುವುದು. ಆದರೆ ಹಳ್ಳಿಗಳು ಈಗಲೂ ಪ್ರಬಲ ಜಾತಿಗಳ ಕಪಿಮುಷ್ಟಿಯಿಂದ ನಲುಗುತ್ತಿವೆ. ಇವರು ಗೌರವವನ್ನು ನಿರೀಕ್ಷಿಸುತ್ತಾರೆ ಹೊರತು ಗೌರವ ಕೊಡುವುದಿಲ್ಲ. ತಾವು ಉನ್ನತ ಜಾತಿಯವರೆಂಬ ಅಹಂ ಈಗಲೂ ಅಲ್ಲಲ್ಲಿ ಕಂಡು ಬರುತ್ತದೆ. ಇದಕ್ಕೊಂದು ಉದಾಹರಣೆ ಎಂಬಂತೆ ನನ್ನದೇ ತರಗತಿಯಲ್ಲಿ ಓದುತ್ತಿದ್ದ ನನ್ನ ಸಹಪಾಠಿ ಅವನ ತಂದೆ-ತಾಯಿಯವರಿಗಿಂತ ವಯಸ್ಸಿನಲ್ಲಿ ದೊಡ್ಡವರಾದ ನನ್ನ ತಾಯಿಯನ್ನು ಹೆಸರಿಟ್ಟು ಏಕವಚನದಲ್ಲಿ ಕರೆದಾಗ ನನಗೆ ಗೊತ್ತಿಲ್ಲದೆ ಸಿಟ್ಟು ನೆತ್ತಿಗೇರಿ ಅವನ ಮೈಮೇಲೆ ಬಿದ್ದೆ. ತಕ್ಷಣವೇ ನನ್ನವ್ವ ನನ್ನನ್ನು ತಡೆದು ‘‘ಹೀಗೆಲ್ಲ ಮಾಡಬಾರದು ಅವರು ಏನು ಮಾತನಾಡಿದರೂ ನಡೆಯುತ್ತೆ’’ ಎಂದರು. ಅದಕ್ಕೆ ನಾನು ‘‘ನನ್ನ ವಯಸ್ಸಿನ ಅವರು ನಿಮ್ಮನ್ನು ಏಕವಚನದಲ್ಲಿ ಹೆಸರಿಡಿದು ಕರೆಯಬಹುದೇ’’ ಎಂದೆ. ಅದಕ್ಕೆ ಅವ್ವ ‘‘ಇಲ್ಲ ಮಗನೇ ಅವರ ಬುದ್ಧಿಮಟ್ಟವೇ ಅಷ್ಟು’’ ಎಂದರು. ಹೌದು ಈ ಬುದ್ಧಿಮಟ್ಟ ಬದಲಾಗುವುದು ಯಾವಾಗ?ಹೀಗೆ ಇನ್ನೂ ಎಷ್ಟು ವರ್ಷ ಅನಾಧಾರ ತೋರಿಸುತ್ತಾರೆ? ಜಗತ್ತು ತಂತ್ರಜ್ಞಾನ ಯುಗದಲ್ಲಿ ಇಷ್ಟು ಮುಂದುರಿದಿದೆ. ಇವರ ಮಾನಸಿಕ ದಾರಿದ್ರ್ಯದ ಪೊರೆ ಕಳಚಿಕೊಳ್ಳುವುದು ಯಾವಾಗ? ಉತ್ತರ ನಾಳೆ ಮತ್ತು ನಾಳೆ.
‘‘ನಿನಗೆ ಗೌರವ ಸಿಗದ ಜಾಗದಲ್ಲಿ ನಿನ್ನ ಚಪ್ಪಲಿಯನ್ನೂ ಬಿಡಬೇಡ’’ ಎಂದು ಭೀಮಸಾಹೇಬರು ಹೇಳುತ್ತಾರೆ. ಸ್ವತಹ ಭೀಮ ಸಾಹೇಬರು ಅಂತಹ ಸ್ವಾಭಿಮಾನಿಯಾಗಿದ್ದರು ಮತ್ತು ಘನತೆಯಿಂದ ಬದುಕಿದ್ದರು. ಇದನ್ನೆಲ್ಲ ಯಾವುದೇ ಒಂದು ಸಮುದಾಯಕ್ಕೆ ಹೇಳಿದ್ದಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಹೇಳಿದ ಮಾತು ಎನ್ನುವುದನ್ನು ಮರೆಯದಿರೋಣ.
ಭೀಮಸಾಹೇಬರ ಬದುಕು, ಬರಹ, ಚಿಂತನೆ, ಹೋರಾಟ ಸರ್ವ ಜನಾಂಗದಲ್ಲೂ ಮಿಳಿತವಾಗಿದೆ. ಅವರು ಬೇಕು ಬೇಡಗಳಿಗಿಂತ, ಇವರು ಗೊತ್ತು ಗೊತ್ತಿಲ್ಲ ಎನ್ನುವುದಕ್ಕಿಂತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರು ಮಾಡಿದ ಕೆಲಸಗಳಿಂದ ಭಾರತದ ಅಂತರಂಗವನ್ನು ಬೆಳಗಿದ ಭಾಗ್ಯ ವಿಧಾತರಾಗಿದ್ದಾರೆ ಅವರು. ಅವರನ್ನು ಯಾರೂ ಒಪ್ಪದೆ ಇರಲು ಕಾರಣಗಳೇ ಇಲ್ಲ. ಅವರು ಅಹಿಂಸಾವಾದಿಯಾಗಿ ಗಾಂಧೀಜಿಗಿಂತ ಒಂದು ಹೆಜ್ಜೆ ಮುಂದಿದ್ದರು. ಅವರು ಹುಟ್ಟಿದ ಸಮುದಾಯಕ್ಕೆ ಆದ ಗಾಯಗಳು, ಸಾವು, ನೋವು, ಸಂಕಟಗಳನ್ನು ಬರೆಯಲು ಈ ಭೂಮಿ ಸಾಕಾಗದು. ಆದರೆ ಈ ಎಲ್ಲವನ್ನು ಮೀರಿ ಸಹನೆ, ಕರುಣೆ, ಪ್ರೀತಿ, ಸಹಬಾಳ್ವೆ ಮತ್ತು ಭ್ರಾತೃತ್ವಕ್ಕಾಗಿ ತನ್ನ ಕೊನೆಯ ಉಸಿರಿರುವವರೆಗೂ ಮಿಡಿದಿದ್ದಾರೆ. ಈ ದೇಶಕ್ಕಾಗಿ, ಜನರಿಗಾಗಿ ತಂಗಾಳಿಯಾಗಿ ಬೀಸಿ ಹೋಗಿದ್ದಾರೆ. ಅವರನ್ನು ಸದಾ ಕಾಲ ನೆನೆಯುವುದು ಜನ್ಮ ಕೊಟ್ಟ ತಾಯಿಯನ್ನು ನೆನೆದಂತೆ. ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ, ಈ ದೇಶದ ದೊಡ್ಡ ವಿವೇಕ ಡಾ. ಭೀಮ ಸಾಹೇಬ ಅಂಬೇಡ್ಕರ್ ಅವರು ಈ ದೇಶದ ಎಲ್ಲರ ಅಂಬೇಡ್ಕರ್ ಎನ್ನುವುದನ್ನು ಮರೆಯದಿರೋಣ.







