ವರುಣಾದಲ್ಲಿ ಸಚಿವ ಸೋಮಣ್ಣಗೆ ಬಂಡಾಯದ ಬಿಸಿ: ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ರಾಜೀನಾಮೆ

ಮೈಸೂರು: ವಸತಿ ಸಚಿವ ಸೊಮಣ್ಣ ಕಣಕ್ಕಿಳಿದಿರುವ ಪ್ರತಿಷ್ಠಿತ ವರುಣಾ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷಕ್ಕಾಗಿ ದುಡಿದ ನನಗೆ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸದಿರುವ ಬಿಜೆಯ ವರಿಷ್ಠರ ನಡೆಯಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುತಿದ್ದೇನೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಸ್ಥಾಪನೆಗೊಂಡ 1980ರ ಮೇ.6 ರಿಂದಲೂ ಸಂಘ ಪರಿವಾರದ ಸ್ವಯಂಸೇವಕ ಕಾರ್ಯಕರ್ತನಾಗಿ ದುಡಿದಿದ್ದೇನೆ. ಕಳೆದ 2018 ರ ಚುನಾವಣೆಯಲ್ಲಿ ವರುಣದಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಅವಕಾಶ ಸಿಕ್ಕಿದ್ದರಿಂದ ವ್ಯಾಪಕ ವಿರೋಧ, ಕೊಲೆ ಬೆದರಿಕೆಯ ನಡುವೆಯೂ 37819 ಮತಗಳನ್ನು ಜನರು ನೀಡಿದ್ದಾರೆ. ಅವರೆಲ್ಲರಿಗೂ ಚಿರಋಣಿ ಯಾಗಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ತಲುಪಿದ್ದ ನನಗೆ ಧೈರ್ಯ ತುಂಬಿದ ಅಮಿತ್ ಷಾ ಅವರಿಗೂ ವಿದೇಯನಾಗಿರುತ್ತೇನೆ ಎಂದರು.
ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಿ ರಾಹುಲ್ ಗಾಂಧಿ ಸೇರಿದಂತೆ ಹೆಚ್.ಡಿ.ದೇವೇಗೌಡ್ರು, ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದ್ದೇನೆ ಹೊರತು ವೈಯುಕ್ತಿಯವಲ್ಲವಾದ್ದರಿಂದ ಅವರೆಲ್ಲರ ಕ್ಷಮೆ ಕೇಳುತ್ತೇನೆ ಎಂದು ಬಸವರಾಜು ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಹಿರಿಯ ಮುಖಂಡ ಕುಪ್ಯಾ ಮಹದೇವಯ್ಯ ಹಾಗೂ ಮುದ್ದುಕೃಷ್ಣ ಉಪಸ್ಥಿತರಿದ್ದರು.
ಟಿಕೆಟ್ ತಪ್ಪಿದ್ದಕ್ಕೆ ಬೇಸರ:
ವರುಣಾ ಕ್ಷೇತ್ರದಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಟಿಕೆಟ್ ನೀಡಿಕೆ ವಿಚಾರದಲ್ಲಿ ಕ್ಷೇತ್ರದ ನಿಕಟ ಪೂರ್ವ ಅಭ್ಯರ್ಥಿ ತೋಟದಪ್ಪ ಬಸವರಾಜು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.







