ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರ ವಕೀಲ ಈಗ ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಾಧೀಶ !

ಹೊಸದಿಲ್ಲಿ: ಮೋದಿ ಉಪನಾಮೆ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಅಪೀಲಿನ ವಿಚಾರಣೆ ನಡೆಸುತ್ತಿರುವ ಸೂರತ್ ನ್ಯಾಯಾಲಯದ ನ್ಯಾಯಾಧೀಶ ರಾಬಿನ್ ಪೌಲ್ ಮೊಗೇರಾ ಅವರು 2006 ತುಳಸೀರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ವಕೀಲರಾಗಿದ್ದವರು ಎಂದು thewire.in ವರದಿ ಮಾಡಿದೆ.
ಮಾನನಷ್ಟ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ಪ್ರಕಟಿಸಿರುವ ಕೋರ್ಟ್ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿರುವ ಅಪೀಲು ನ್ಯಾಯಾಧೀಶ ಮೊಗೇರ ಅವರ ಮುಂದಿದೆ.
ರಾಬಿನ್ ಮೊಗೇರ ಅವರನ್ನು ಜನವರಿ 2018 ರಲ್ಲಿ ನ್ಯಾಯಾಧೀಶರಾಗಿ ನೇಮಕಗೊಳಿಸಲಾಗಿತ್ತು. ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ತುಳಸೀರಾಂ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮೊಗೇರ ಅವರು ಶಾ ಅವರನ್ನು ಪ್ರತಿನಿಧಿಸಿದ್ದರು. ಆಗ ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರ ವಕೀಲರಾಗಿ 2014ರ ತನಕ ಮೊಗೇರಾ ಸೇವೆ ಸಲ್ಲಿಸಿದ್ದರು. ಆಗ ಈ ಪ್ರಕರಣದ ವಿಚಾರಣೆಯನ್ನು ಮುಂಬೈಯ ಸಿಬಿಐ ನ್ಯಾಯಾಲಯ ನಡೆಸುತ್ತಿತ್ತು.
ನ್ಯಾಯಾಧೀಶ ಮೊಗೇರಾ ಅವರು ಸೂರತ್‌ನ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದಾರೆ. ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿರುವುದು ಹಾಗೂ ಅದರ ಬೆನ್ನಲ್ಲೇ ಅವರನ್ನು ಸಂಸದನ ಹುದ್ದೆಯಿಂದ ಅನರ್ಹಗೊಳಿಸಿರುವುದು ದ್ವೇಷದ ರಾಜಕೀಯ ಎಂದು ಕಾಂಗ್ರೆಸ್ ಈಗಾಗಲೇ ಆರೋಪಿಸಿದೆ.