ಮಂಗಳೂರು: ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ

ಮಂಗಳೂರು: ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.
ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಅವರು ಅಂಬೇಡ್ಕರ್ ಸಂವಿಧಾನ ಶಿಲ್ಪಿ ಮಾತ್ರವಲ್ಲ, ದೇಶ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರೂ ಮತ್ತು ಮಹಾನ್ ತತ್ವಜ್ಞಾನಿಯೂ ಆಗಿದ್ದರು. ಬಾಬಾಸಾಹೇಬರ ಚಿಂತನೆಗಳು ಸಾರ್ವಕಾಲಿಕವಾಗಿದ್ದು, ಸ್ವತಂತ್ರ ಭಾರತದ ಮುನ್ನಡೆಗೆ ಅಂಬೇಡ್ಕರ್ ಅವರ ಕೊಡುಗೆ ಮಹತ್ತರವಾಗಿದೆ. ಭಾರತದ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಸರ್ವರಿಗೂ ಸಮಪಾಲು, ಸಮಬಾಳು ಪರಿಕಲ್ಪನೆಯಿಂದ ದೇಶದ ತುಳಿತಕ್ಕೊಳಗಾದ, ದಮನಿತ ಸಮುದಾಯಗಳಿಗೆ ಶ್ರೀರಕ್ಷೆ ಕೊಟ್ಟವರು. ಮನುಷ್ಯ ಮನುಷ್ಯರ ನಡುವಿನ ಶೋಷಣೆಯನ್ನು ಮುಕ್ತಗೊಳಿಸಲು ಬಾಬಾಸಾಹೇಬರ ದೂರದೃಷ್ಟಿಯನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಉಪಾಧ್ಯಕ್ಷರಾದ ಸಂತೋಷ್ ಆರ್.ಎಸ್, ಮುಖಂಡರಾದ ರಹಿಮಾನ್ ಅಡ್ಯಾರ್, ಇಸ್ಮಾಯಿಲ್ ಉಳ್ಳಾಲ, ರಿಯಾಜ್ ಎಲ್ಯರ್ ಪದವು, ಆದಂ ಬಜಾಲ್, ಆಸೀಫ್ ಬಾವ ಉರುಮನೆ, ಮುಜಾಫರ್ ಉಪಸ್ಥಿತರಿದ್ದರು.