ಕೇರಳದ ಕೆಲ ಭಾಗಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಮಿಲ್ಮಾ ಆಕ್ಷೇಪ

ತಿರುವನಂತಪುರಂ: ಕೆಲ ರಾಜ್ಯ ಹಾಲು ಮಾರಾಟ ಫೆಡರೇಶನ್‌ಗಳು ತಮ್ಮ ರಾಜ್ಯಗಳ ಹೊರಗಿನ ಮಾರುಕಟ್ಟೆಗಳಿಗೆ ಆಕ್ರಮಣಕಾರಿಯಾಗಿ ಪ್ರವೇಶಿಸುವ ಪ್ರವೃತ್ತಿಯು ʻನೀತಿಗೆ ವಿರುದ್ಧವಾಗಿದೆʼ ಎಂದು ಮಿಲ್ಮಾ ಬ್ರ್ಯಾಂಡ್ ಉತ್ಪನ್ನಗಳನ್ನು ತಯಾರಿಸುವ ಕೇರಳ ಸಹಕಾರಿ ಹಾಲು ಮಾರುಕಟ್ಟೆ ಫಡರೇಶನ್ ಹೇಳಿದೆ.
ಕೇರಳದ ಕೆಲ ಭಾಗಗಳಲ್ಲಿ ತನ್ನ ಮಳಿಗೆಗಳನ್ನು ತೆರೆದು ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕರ್ನಾಟಕ ಹಾಲು ಫೆಡರೇಶನ್ (ಕೆಎಂಎಫ್) ಕ್ರಮವನ್ನು ಕೇರಳದ ಹಾಲು ಫೆಡರೇಶನ್ ಟೀಕಿಸಿದೆ. ಇದು ದೇಶದ ಹೈನೋದ್ಯಮ ಅವಲಂಬಿತವಾಗಿರುವ ಸಹಕಾರ ತತ್ವಗಳ ಉಲ್ಲಂಘನೆಯಾಗಿದೆ ಹಾಗೂ ಹೈನೋದ್ಯಮದ ಹರಿಕಾರರಾದ ತ್ರಿಭುವನದಾಸ್ ಪಟೇಲ್ ಮತ್ತು ಡಾ ವರ್ಗೀಸ್ ಕುರಿಯನ್ ಅವರ ತತ್ವಗಳಿಗೆ ವಿರುದ್ಧವಾಗಿದೆ ಎಂದು ಮಿಲ್ಮಾ ಅಧ್ಯಕ್ಷ ಕೆ ಎಸ್ ಮಣಿ ಹೇಳಿದ್ದಾರೆ.
ಅಮುಲ್ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುವ ಕುರಿತು ಕೆಎಂಎಫ್ ಆಕ್ಷೇಪವನ್ನೂ ಅವರು ಉಲ್ಲೇಖಿಸಿದರು. "ಅಮುಲ್‌ಗೆ ಆಕ್ಷೇಪಿಸುವ ಕೆಎಂಎಫ್, ತನ್ನ ಮಳಿಗೆಗಳನ್ನು ಕೇರಳದ ಕೆಲ ಭಾಗಗಳಲ್ಲಿ ತೆರೆದು ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದನ್ನು ಹೇಗೆ ಸಮರ್ಥಿಸಬಹುದು?" ಎಂದು ಪ್ರಶ್ನಿಸಿದ ಅವರು ಈ ರೀತಿಯ ಪ್ರವೃತ್ತಿ ರಾಜ್ಯಗಳ ನಡುವೆ ಅನಾರೋಗ್ಯಕರ ಸ್ಪರ್ಧೆಗೆ ಕಾರಣವಾಗುವುದು ಎಂದಿದ್ದಾರೆ.





