ಬಿಜೆಪಿಯನ್ನು ಮನೆಗೆ ಕಳಿಸುವ ಮೂಲಕ ತಕ್ಕ ಉತ್ತರ: ಸುಧೀರ್ ಕುಮಾರ್ ಮುರೋಳಿ

ಕುಂದಾಪುರ : ಕಾಂಗ್ರೆಸ್ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆಯೇ ಹೊರತು ಜನರ ಭಾವನೆಗಳ ಜೊತೆ ಆಟವಾಡುತ್ತಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಇಂದು ಕ್ಷೇತ್ರವನ್ನೇ ಮರೆತು ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಆರೋಪಿಸಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ ಹೆಗ್ಡೆ ಅವರ ನಾಮಪತ್ರ ಸಲ್ಲಿಕೆಗೆ ಮೊದಲು ಕುಂದಾಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರಕಾರ ನಿಷ್ಕ್ರೀಯವಾಗಿದೆ. ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳಿಗೆ ಸರಕಾರದ ಬಳಿ ಉತ್ತರವಿಲ್ಲ. ಡಿಸೇಲ್- ಪೆಟ್ರೋಲ್ ದರದ ಬಗ್ಗೆ ಕೇಳಿದರೆ ಉರಿಗೌಡ, ನಂಜೇಗೌಡ ಎಂದು ಮಾತನಾಡುತ್ತಾರೆ. ನಮಗೆ ಯಾವ ಉರಿ-ನಂಜು ನಮಗೆ ಬೇಕಿಲ್ಲ. ಕಾಂಗ್ರೆಸ್ ನಲ್ಲಿ ದೀಪ ಹೆಚ್ಚುವ ಸಂಸ್ಕೃತಿ ಇದೆಯೇ ಹೊರತು ಬೆಂಕಿ ಹೆಚ್ಚುವ ಪ್ರವೃತ್ತಿಯಿಲ್ಲ. ಬಿಜೆಪಿ ಹೊತ್ತಿಸಿದ ಕೋಮುದ್ವೇಷದಿಂದ ಹಲವು ಕೊಲೆಗಳು ನಡೆದಿದೆ. ಸಿಎಂ ಇದನ್ನು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಈ ಬಾರಿ ಬಿಜೆಪಿ ಸರಕಾರವನ್ನು ಮನೆಗೆ ಕಳಿಸುವ ಮೂಲಕ ತಕ್ಕ ಉತ್ತರ ಜನರು ನೀಡುತ್ತಾರೆ ಎಂದರು.
ಕಾರ್ಯಕ್ರಮವನ್ನು ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಉದ್ಘಾಟಿಸಿ ದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಅಭ್ಯರ್ಥಿ ಮೊಳಹಳ್ಳಿ ದಿನೇಶ ಹೆಗ್ಡೆ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಶೆಟ್ಟಿ ಗುಡಿಬೆಟ್ಟು, ಮಹಿಳಾ ಕಾಂಗ್ರೆಸ್ನ ದೇವಕಿ ಸಣ್ಣಯ್ಯ, ರೇಖಾ ಸುವರ್ಣ ಪ್ರಮುಖರಾದ ಅಶೋಕ್ ಪೂಜಾರಿ ಬೀಜಾಡಿ, ಹಿರಿಯಣ್ಣ ಚಾತ್ರಬೆಟ್ಟು, ಕೃಷ್ಣದೇವ ಕಾರಂತ, ವಂಡಬಳ್ಳಿ ಜಯರಾಮ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ವಂಡ್ಸೆ, ಪ್ರಕಾಶ್ಚಂದ್ರ ಶೆಟ್ಟಿ, ದೇವಾನಂದ ಶೆಟ್ಟಿ, ಸದಾನಂದ ಶೆಟ್ಟಿ, ದಿನೇಶ ಪುತ್ರನ್, ಹರೀಶ ಕಿಣಿ, ಬೆಳ್ವೆ ಸತೀಶ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿ ದರು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ವಂದಿಸಿದರು. ವಿನೋದ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.