48 ವರ್ಷಗಳಿಂದ ರಮಝಾನ್ ಸಂಪ್ರದಾಯವನ್ನು ಮುಂದುವರಿಸಿದ ಉತ್ತರ ಪ್ರದೇಶದ ಹಿಂದೂ ಕುಟುಂಬ!
ಲಕ್ನೋ: ಪೂರ್ವ ಉತ್ತರ ಪ್ರದೇಶದ ಅಝಮ್ಗಡ ಜಿಲ್ಲೆಯ ಮುಬಾರಕ್ಪುರ ಪಟ್ಟಣದ ಕೌರಿಯಾ ಗ್ರಾಮದ ಗುಲಾಬ್ ಯಾದವ್ ಅವರು ತನ್ನದೇ ಆದ ಉದಾತ್ತ ರೀತಿಯಲ್ಲಿ ಪವಿತ್ರ ರಮಝಾನ ಮಾಸದಲ್ಲಿ ‘ರೋಝೆದಾರ (ಉಪವಾಸವನ್ನು ಮಾಡುವವರು)’ರಿಗೆ ಸೇವೆಯನ್ನು ಸಲ್ಲಿಸುವ ಮೂಲಕ ಪರಸ್ಪರ ಗೌರವದ ನಿದರ್ಶನವಾಗಿದ್ದಾರೆ.
ಉತ್ತರ ಪ್ರದೇಶದ ಗಂಗಾ-ಜಮುನಿ ಸಂಸ್ಕೃತಿಯ ಪಾಲಕನಂತೆ ತನ್ನ ತಂದೆ ಚಿರ್ಕಿತ್ ಯಾದವ 1975ರಲ್ಲಿ ಸ್ಥಾಪಿಸಿದ್ದ 48 ವರ್ಷಗಳಷ್ಟು ಹಳೆಯ ಸಂಪ್ರದಾಯವನ್ನು ಸ್ವಇಚ್ಛೆಯಿಂದ ಪಾಲಿಸುತ್ತಿರುವ ಗುಲಾಬ್ ಗೆ ಸಹಿಷ್ಣುತೆ ಮತ್ತು ಸೌಹಾರ್ದತೆ ಸಹಜವಾಗಿಯೇ ಮೈಗೂಡಿವೆ. ಪುತ್ರ ಅಭಿಷೇಕ್ ಜೊತೆಗೆ ತನ್ನ ತಂದೆಯ ಸಂಪ್ರದಾಯವನ್ನು ಹೆಮ್ಮೆಯಿಂದ ಮುಂದುವರಿಸುತ್ತಿರುವ ಗುಲಾಬ್ ‘ಸೆಹರಿ (ದಿನಪೂರ್ತಿ ಉಪವಾಸವನ್ನು ಕೈಗೊಳ್ಳುವ ಮೊದಲು ಆಹಾರ ಸೇವನೆ)’ಗಾಗಿ ತನ್ನ ಗ್ರಾಮದಲ್ಲಿ ವಾಸವಿರುವ ಎಲ್ಲ ಮುಸ್ಲಿಮರನ್ನು ಎಚ್ಚರಗೊಳಿಸುತ್ತಾರೆ ಎಂದು newindianexpress.com ವರದಿ ಮಾಡಿದೆ.
ಪವಿತ್ರ ರಮಝಾನ್ ಮಾಸದಲ್ಲಿ ಒಂದೂ ದಿನವೂ ತಪ್ಪದೆ ಈ ಪರಿಪಾಠವನ್ನು ಧಾರ್ಮಿಕವಾಗಿ ಆಚರಿಸುತ್ತಾರೆ. ಪ್ರತಿ ದಿನ ನಸುಕಿನ ಒಂದು ಗಂಟೆಯ ಸುಮಾರಿಗೆ ಒಂದು ಕೈಯಲ್ಲಿ ಲಾಠಿ ಮತ್ತು ಇನ್ನೊಂದು ಕೈಯಲ್ಲಿ ಲಾಟೀನು ಹಿಡಿದುಕೊಂಡು ಮನೆಯಿಂದ ಹೊರಬೀಳುವ ಅವರು ಮುಸ್ಲಿಮ್ ಕುಟುಂಬಗಳು ವಾಸವಾಗಿರುವ ಬಡಾವಣೆಗಳಿಗೆ ಭೇಟಿ ನೀಡುತ್ತಾರೆ.
ತಮ್ಮ ಗ್ರಾಮದಲ್ಲಿ ಕೆಲವೇ ಮುಸ್ಲಿಮ್ ಕುಟುಂಬಗಳು ಇರುವುದಲ್ಲ ಎಂದು ಕೌರಿಯಾ ಗ್ರಾಮಸ್ಥರೂ ಹೇಳುತ್ತಾರೆ. ಗ್ರಾಮದಲ್ಲಿ 200ಕ್ಕೂ ಅಧಿಕ ಮುಸ್ಲಿಮ್ ಕುಟುಂಬಗಳಿವೆ ಮತ್ತು ರೋಝೆದಾರರು ಸಮಯಕ್ಕೆ ಸರಿಯಾಗಿ ಸೆಹರಿ ಮಾಡಲು ಅವರನ್ನು ಎಚ್ಚರಿಸುವುದನ್ನು ತನ್ನ ಕರ್ತವ್ಯವೆಂದು ಪರಿಗಣಿಸಿರುವ ಯಾದವ ಪ್ರತಿ ದಿನ ಪ್ರತಿ ಮನೆಗೂ ತಪ್ಪದೇ ಭೇಟಿ ನೀಡುತ್ತಾರೆ.
ಗ್ರಾಮಸ್ಥರು ಹೇಳುವಂತೆ ಗುಲಾಬ್ ತನ್ನ ಕುಟುಂಬದ ಪೋಷಣೆಗಾಗಿ ಹೊರರಾಜ್ಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕನಾಗಿದ್ದಾರೆ. ಆದರೆ ರೋಝೆದಾರರ ಸೇವೆಗಾಗಿ ಪ್ರತಿ ವರ್ಷ ರಮಝಾನ್ ಮಾಸ ಆರಂಭವಾಗುವ ಮುನ್ನ ಅವರು ಗ್ರಾಮಕ್ಕೆ ಮರಳುತ್ತಾರೆ.
ಗುಲಾಬ್ ಪ್ರತಿದಿನ ನಸುಕಿನಲ್ಲಿ ಮುಸ್ಲಿಮ್ ಕುಟುಂಬಗಳ ಮನೆಬಾಗಿಲು ತಟ್ಟುತ್ತಾರೆ ಮತ್ತು ಅವರನ್ನು ಕರೆದು ಸೆಹರಿಗಾಗಿ ಏಳುವಂತೆ ಸೂಚಿಸುತ್ತಾರೆ. ಅವರು ಎಷ್ಟೊಂದು ಕರಾರುವಾಕ್ ಆಗಿದ್ದಾರೆಂದರೆ ರೋಝೆದಾರರಿಗೆ ಸೆಹರಿ ಸಮಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಎಂದು ಗ್ರಾಮಸ್ಥ ಹರಿ ಓಂ ಯಾದವ ಹೇಳಿದರು. ಮುಸ್ಲಿಮ್ ಕುಟುಂಬಗಳಿಂದ ತನಗಾಗಿ ಪ್ರಾರ್ಥನೆಗಳು ಮತ್ತು ಶುಭಾಶಯಗಳು ಗುಲಾಬ್ ರ ಅತ್ಯಂತ ದೊಡ್ಡ ಗಳಿಕೆಯಾಗಿದೆ ಎಂದು ಇನ್ನೋರ್ವ ಗ್ರಾಮಸ್ಥರು ತಿಳಿಸಿದರು.
ತಾನೇನೂ ಅಸಾಮಾನ್ಯವಾದುದನ್ನು ಮಾಡುತ್ತಿಲ್ಲ ಎನ್ನುವ ಗುಲಾಬ್ ತನ್ನ ತಂದೆ ಪ್ರಾರಂಭಿಸಿದ್ದ ಸಂಪ್ರದಾಯವು ಉಭಯ ಸಮುದಾಯಗಳನ್ನು ನಿಕಟವಾಗಿಸುತ್ತದೆ ಎಂದು ನಂಬಿದ್ದಾರೆ. ಗ್ರಾಮದಲ್ಲಿ ಶತಮಾನಗಳಿಂದಲೂ ಹಿಂದು ಮತ್ತು ಮುಸ್ಲಿಮರು ಅನ್ಯೋನ್ಯವಾಗಿ ಬಾಳುತ್ತಿದ್ದಾರೆ.
ತನ್ನ ಕೊನೆಯುಸಿರಿನವರೆಗೂ ಈ ಸಂಪ್ರದಾಯವನ್ನು ಮುಂದುವರಿಸಲು ಗುಲಾಬ್ ಬದ್ಧರಾಗಿದ್ದಾರೆ. ತನ್ನ ನಂತರ ಪುತ್ರ ಅಭಿಷೇಕ ಅದನ್ನು ಮುಂದುವರಿಸುತ್ತಾನೆ ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ಗುಲಾಬ್ ರ ದೃಢಸಂಕಲ್ಪವನ್ನು ಶ್ಲಾಘಿಸಿರುವ ಗ್ರಾಮಸ್ಥರು,ಒಮ್ಮೆ ಅವರು ಸೋದರಳಿಯನ ಮದುವೆಗೂ ಹಾಜರಾಗದೆ ತನ್ನ ರಮಝಾನ ಕರ್ತವ್ಯಕ್ಕೆ ಮರಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.