ಈಗ ಧರ್ಮ ಸೋತಿದೆ, ಜಾತಿ ಮಾತಾಡುತ್ತಿದೆ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ಮಂಗಳೂರು ವಿವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ

ಕೊಣಾಜೆ: ನಿಜವಾದ ಧರ್ಮ ಶ್ರಮಸಂಸ್ಕೃತಿ, ಸಾಕ್ಷಾತ್ಕಾರದ ಕಡೆಗೆ ಕೊಂಡೊಯ್ಯುತ್ತದೆ. ಆದರೆ ಈಗ ಧರ್ಮ ಸೋತಿದೆ, ಜಾತಿ ಮಾತಾಡುತ್ತಿದೆ. ಜಾತಿ ಮಾತಾಡಿದರೆ ಪ್ರಜಾಪ್ರಭುತ್ವ ಸೋಲುತ್ತದೆ. ದೇಶದ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವುದೇ ನಿಜವಾದ ʼರಾಷ್ಟ್ರೀಯತೆ. ಭ್ರಮೆಯಲ್ಲಿದ್ದು ʼನಾನು ಜೊತೆಗಿದ್ದೇವೆʼ ಎಂದು ತೋರಿಸಿಕೊಳ್ಳುವುದಲ್ಲ. ಕಾಲ್ಪನಿಕ ಜಗತ್ತನ್ನು ಬಿಟ್ಟು ಮಾತನಾಡಿಸುವುದನ್ನು, ಪ್ರಶ್ನಿಸುವುದನ್ನು ಸಂವಿಧಾನ ನಮಗೆ ಕಲಿಸಿದೆ,” ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಾ. ಬಿ ಆರ್ ಅಂಬೇಡ್ಕರ್ ಅವರ 132 ನೇ ಜನ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್ .ಅಂಬೇಡ್ಕರ್ ಅವರು ಕಾಯಕ ಸಿದ್ದಾಂತವನ್ನು ಪ್ರತಿಪಾದಿಸಿ, ಶ್ರಮಸಂಸ್ಕೃತಿಯ ಮೂಲಕ ದೇಶವನ್ನು ಕಟ್ಟುವ ಪ್ರಯತ್ನ ಮಾಡಿದವರು. ಕಾಯಕ ಸಿದ್ಧಾಂತಗಳನ್ನು ಧಾರ್ಮಿಕ ಹಿನ್ನೆಲೆಯಿಂದ ಜಾತೀಕರಣ ಗೊಳಿಸಿದವರ ವಿರುದ್ಧ ಹೋರಾಡಿದವರು ಅಂಬೇಡ್ಕರ್. ಅವರನ್ನು ಅರಿತುಕೊಂಡಾಗ ಮಾತ್ರ ʼಭಾರತʼ, ʼಭಾರತೀಯತೆʼ ಅರ್ಥವಾಗುತ್ತದೆ. ಭಾರತ ಅರ್ಥವಾದಾಗ ಮಾತ್ರ ದೇಶದ ನಿಜವಾದ ಬದಲಾವಣೆ ಸಾಧ್ಯ. ಗೌತಮ ಬುದ್ಧ, ಬಸವಣ್ಣ, ಅಂಬೇಡ್ಕರರ ʼಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲುʼ ಎಂಬ ಕನಸು ನಿಜವಾಗುತ್ತದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್ ಯಡಪಡಿತ್ತಾಯ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಂಬೇಡ್ಕರ್ ತತ್ವ ಪಾಲನೆಯಲ್ಲಿ ನಮ್ಮ ನಡೆ ಮತ್ತು ನುಡಿಯಲ್ಲಿ ಸಾಮ್ಯತೆಯಿರಬೇಕು. ಸಂವಿಧಾನದ ಕುರಿತು ಮಾತನಾಡುವುದಲ್ಲ, ಅದರ ಜಾರಿಯೂ ಪರಿಣಾಮಕಾರಿಯಾಗಬೇಕು. ನಮ್ಮ ಮನಃಸ್ಥಿತಿ ಬದಲಾಗಿ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ. “ಅಂಬೇಡ್ಕರ್ ಮತ್ತು ಅವರ ಕೃತಿಗಳು ಅಲಂಕಾರಿಕ ವಸ್ತುಗಳಾಗಬಾರದು ಎಂದರು.
ಕುಲಸಚಿವ (ಪರೀಕ್ಷಾಂಗ) ಡಾ. ರಾಜು ಕೃಷ್ಣ ಚಲನ್ನವರ್, ಹಣಕಾಸು ಅಧಿಕಾರಿ ಪ್ರೊ. ವೈ ಸಂಗಪ್ಪ ಮೊದಲಾದವರು ಉಪಸ್ಥಿತರಿದ್ದರು. ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಘಟಕದ ವಿಶೇಷಾಧಿಕಾರಿ ಡಾ. ನರಸಿಂಹಯ್ಯ ಎನ್ ವಂದಿಸಿದರು. ಡಾ.ಯಶಸ್ವಿನಿ ಬಿ ಮತ್ತು ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಭಾಗವಾಗಿ ಬೆಂಗಳೂರಿನ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ (ರಿ.)ದ ಕಲಾವಿದರು "ಅಂಬೇಡ್ಕರ್ "ಸಾಮಾಜಿಕ ನಾಟಕವನ್ನು ಪ್ರಸ್ತುತಪಡಿಸಿದರು. ಸಭಾ ಕಾರ್ಯಕ್ರಮದ ಮೊದಲು ವಿಜ್ಞಾನ ಸಂಕೀರ್ಣದ ಬಳಿ ಇತ್ತೀಚೆಗೆ ಪ್ರತಿಷ್ಠಾಪಿಸಲಾದ ಡಾ. ಬಿ ಆರ್ ಅಂಬೇಡ್ಕರ್ ಅವರ ನೂತನ ಕಂಚಿನ ಪ್ರತಿಮೆಗೆ ಗಣ್ಯರು ಪುಷ್ಪಾರ್ಚನೆ ಮಾಡಲಾಯಿತು.