ಘಟಪ್ರಭಾ ಜಲಾಶಯದಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರು ನೀರುಪಾಲು

ಬೆಳಗಾವಿ, ಎ. 14: ಇಲ್ಲಿನ ಗೋಕಾಕ್ ತಾಲೂಕಿನ ಘಟಪ್ರಭಾ ಸಮೀಪದ ಧೂಪದಾಳ ಜಲಾಶಯದ ನೀರಿನಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಮೃತಪಟ್ಟವರನ್ನು ಉತ್ತರಕನ್ನಡ ಜಿಲ್ಲೆಯ ಸಮೀಪದ ಮುಂಡಗೋಡ ತಾಲೂಕಿನ ಸಿರಿಗೆರೆ ಗ್ರಾಮದ ಸಂತೋಷ್ ಬಾಬು ಈಡಗ (19), ಅಜಯ ಬಾಬು ಜೋರೆ (19), ಕೃಷ್ಣ ಬಾಬು ಜೋರೆ (20), ಆನಂದ ವಿಟ್ಟು ಕೋಕಡೆ (20) ಎಂದು ಗುರುತಿಸಲಾಗಿದೆ.
ಮತ್ತೋರ್ವ ಯುವಕ ರಾಮಚಂದ್ರ ಕೋಕಡೆ (20) ಸ್ಥಿತಿ ಗಂಭೀರವಾಗಿದೆ. ವಿಠ್ಠಲ್ ಜಾನು ಕೋಕಡೆ (20) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರು ಮಂದಿಯೂ ಒಂದೇ ಊರಿನವರಾಗಿದ್ದು, ಎಲ್ಲರೂ ಘಟಪ್ರಭಾದ ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಎಲ್ಲರಿಗೂ ಈಜು ಬರುತ್ತಿದ್ದ ಕಾರಣ ಜಲಾಶಯಕ್ಕೆ ಇಳಿದರು. ಈಜುವ ವೇಳೆ ಆಳದಲ್ಲಿದ್ದ ಕೆಸರಿನಲ್ಲಿ ಸಿಲುಕಿ ಮೃತಪಟ್ಟರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಘಟಪ್ರಭಾ ಕೆಎಚ್‍ಐ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.





