ವಿದ್ಯಾರ್ಥಿಗಳ ಮೂಲಕ ಸೌಹಾರ್ದದ ಸಂದೇಶ ರವಾನಿಸಬೇಕಿದೆ: ಡಾ. ಎನ್ ವಿನಯ ಹೆಗ್ಡೆ
ನಿಟ್ಟೆ ವಿವಿ - ಯೆನೆಪೋಯ ವಿವಿ - ಬಿಷಪ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಮಂಗಳೂರು, ಎ.14: ನಿಟ್ಟೆ ಮತ್ತು ಯೆನೆಪೋಯ ಡೀಮ್ಡ್ ವಿಶ್ವವಿದ್ಯಾನಿಲಯದ ವತಿಯಿಂದ ಶುಕ್ರವಾರ ನಿಟ್ಟೆ ವಿವಿ ಕ್ಯಾಂಪಸ್‌ನಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.
ನಿಟ್ಟೆ ವಿವಿಯ ಕುಲಾಧಿಪತಿ ಡಾ.ಎನ್. ವಿನಯ ಹೆಗ್ಡೆ, ಯೆನೆಪೋಯ ವಿವಿಯ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಹಾಗೂ ಮಂಗಳೂರು ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ ಅವರ ಸಹಭಾಗಿತ್ವದಲ್ಲಿ ನಡೆದ ಈ ಇಫ್ತಾರ್ ಕೂಟದಲ್ಲಿ ಸೌಹಾರ್ದದ ಸಂದೇಶ ಸಾರಲಾಯಿತು.
ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ನಿಟ್ಟೆ ವಿವಿಯ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ ಸೌಹಾರ್ದ ಸಂದೇಶ ಸಾರುವುದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಎಲ್ಲರೂ ಜೊತೆಗೂಡಿ ಸೌಹಾರ್ದದ ಸಂದೇಶ ಸಾರಿದರೆ ಮಾತ್ರ ಅದು ಅರ್ಥಪೂರ್ಣವಾಗಲಿದೆ. ಉಳ್ಳಾಲ-ದೇರಳಕಟ್ಟೆ-ಕೊಣಾಜೆ ಶೈಕ್ಷಣಿಕವಾಗಿ ಬಹಳಷ್ಟು ಮುಂದುವರಿಯುತ್ತಿದೆ. ದೇಶ ವಿದೇಶಗಳ ಸಾವಿರಾರು ಮಂದಿ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೆಲವು ಘಟನೆಯಿಂದ ಮಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಅದನ್ನು ತೊಡೆದು ಹಾಕಲು ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿ ಇಂತಹ ಸೌಹಾರ್ದದ ಕಾರ್ಯಕ್ರಮ ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ರಮಝಾನ್ ಉಪವಾಸವು ದೇಹಕ್ಕೆ ಮಾತ್ರ ಔಷಧಿಯಲ್ಲ. ಸಮಾಜಕ್ಕೂ ಔಷಧಿಯಾಗಿದೆ. ಎಲ್ಲರಿಗೂ ಅವರವರ ಧರ್ಮ ಮುಖ್ಯವಾಗಿದೆ. ನನ್ನದೇ ಧರ್ಮ ಶ್ರೇಷ್ಠ ಎಂಬ ಭಾವನೆ ಯಾರಲ್ಲೂ ಇರಬಾರದು. ಅದನ್ನು ತೊಡೆದು ಹಾಕಲು ಇಂತಹ ಸೌಹಾರ್ದ ಕಾರ್ಯಕ್ರಮಗಳ ಅಗತ್ಯವಿದೆ. ಪರಸ್ಪರ ಗೌರವಿಸಿಕೊಂಡು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಐಕ್ಯತೆಯ ಸಂದೇಶ ಸಾರಬೇಕಿದೆ ಎಂದರು.
ಮಂಗಳೂರು ಬಿಷಪ್ ಅತೀ ವಂದನೀಯ ಡಾ.ಪೀಟರ್ ಪೌಲ್ ಸಲ್ದಾನ ಮಾತನಾಡಿ, ಎಲ್ಲಾ ಧರ್ಮಗಳ ತಳಹದಿಯು ಸಹೋದರತ್ವವಾಗಿದೆ. ರಮಝಾನ್ ಉಪವಾಸದ ಮೂಲಕ ಮುಸ್ಲಿಮರ ತ್ಯಾಗ, ಸಹನೆ, ಸ್ವಯಂ ನಿಯಂತ್ರಣಾ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ದೇಹ, ಮನಸ್ಸಿನ ನಿಯಂತ್ರಣ ಮಾತ್ರವಲ್ಲ ಹೊಸ ಉತ್ಸಾಹವನ್ನೂ ಉಪವಾಸ ನೀಡುತ್ತದೆ ಎಂದರು.
ಇಫ್ತಾರ್ ಆಚರಣೆಯು ಉಪವಾಸದ ಒಂದು ಪ್ರಮುಖ ಘಟ್ಟವಾಗಿದೆ. ಸಂಭ್ರಮದ ವಾತಾವರಣ ಕೂಡ ಇದರಲ್ಲಿ ಅಡಗಿದೆ. ಈ ಸಂಭ್ರಮದಲ್ಲಿ ಇತರ ಧರ್ಮೀಯರು ಪಾಲ್ಗೊಂಡಾಗ ಮಾತ್ರ ಅದರ ಮಹತ್ವ ತಿಳಿಯಲು ಸಾಧ್ಯವಿದೆ. ಜಗತ್ತು ದ್ವೇಷದಿಂದ ಮುಕ್ತಗೊಳ್ಳಬೇಕಾದರೆ ಇಂತಹ ಸೌಹಾರ್ದ ಕಾರ್ಯಕ್ರಮಗಳು ಆಗಾಗ ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.
ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ ಇದು ಕೇವಲ ಒಂದು ಆಚರಣೆಯ ಭಾಗವಲ್ಲ. ಇದು ಹೃದಯ, ಮನಸ್ಸು ಬೆಸೆಯುವ ಕಾರ್ಯಕ್ರಮವಾಗಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಬಂಧುತ್ವವಿದ್ದರೆ ಭಾರತದಲ್ಲಿ ಬಂಧುತ್ವ, ಬಹುತ್ವ, ಭ್ರಾತೃತ್ವವಿದೆ. ಇದು ನಮ್ಮ ದೇಶದ ವಿಶೇಷತೆಯಾಗಿದೆ ಎಂದರು.
ಯೆನೆಪೋಯ ವಿವಿಯ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿ ಹಸಿವು ಎಂಬುದು ಮಾಂತ್ರಿಕ ಶಕ್ತಿಯಾಗಿದೆ. ಹಸಿವು ಎಂಬುದು ಇಲ್ಲದೇ ಇದ್ದಿದ್ದರೆ ಜನರು ಬದುಕನ್ನು ಸವಾಲಾಗಿ ಸ್ವೀಕರಿಸುತ್ತಿರಲಿಲ್ಲ. ಹಸಿವಿನ ಮಹತ್ವ ಅರಿಯಲು ರಮಝಾನ್ ಉಪವಾಸದಿಂದ ಸಾಧ್ಯವಿದೆ ಎಂದರು.
ಅಶಾಂತಿ, ಸಂಘರ್ಷ ಹೆಚ್ಚುತ್ತಿರುವ ಈ ಕಾಲದಲ್ಲಿ ಮುಸಲ್ಮಾನರ ಜವಾಬ್ದಾರಿ ಸಾಕಷ್ಟಿದೆ. ಇಸ್ಲಾಂ ಧರ್ಮದ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೌಹಾರ್ದದ ಸಂದೇಶ ಸಾರಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಪತಿ ಡಾ. ಬಿ.ಎಸ್. ಯಡಪಡಿತ್ತಾಯ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸದಸ್ಯ ಐವನ್ ಡಿಸೋಜ, ಡಾ. ನವೀನ್ ಚಂದ್ರ ಭಂಡಾರಿ, ಡಾ. ಶಾಂತರಾಮ ಶೆಟ್ಟಿ, ಡಾ. ಅಕ್ತರ್ ಹುಸೈನ್, ಡಾ. ಅಮೀರ್ ಅಲಿ, ಡಾ. ಯು.ಟಿ. ಇಫ್ತಿಕಾರ್ ಅಲಿ, ಪ್ರೊ. ಚಿನ್ನಪ್ಪ ಗೌಡ. ಡಾ. ಯೆನೆಪೋಯ ಫರ್ಹಾದ್, ಡಾ. ಮೋಹನ್ ಆಳ್ವ, ಡಾ. ವಿಶಾಲ್ ಹೆಗ್ಡೆ, ಡಾ. ತ್ವಾಹಿರ್, ಡಾ. ಸಿಪಿ ಹಬೀಬುರ್ರಹ್ಮಾನ್, ಕಣಚೂರು ಮೋನು, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಬಿಜಿ ಹನೀಫ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್, ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್, ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹಾಜಿ ಇಬ್ರಾಹಿಂ ಕೋಡಿಜಾಲ್, ಹೈದರ್ ಪರ್ತಿಪ್ಪಾಡಿ, ಶಶಿಧರ್ ಹೆಗ್ಡೆ, ರವೀಂದ್ರ ಶೆಟ್ಟಿ ಉಳಿದೊಟ್ಟು, ಎಸ್ ಎಂ ರಶೀದ್ ಹಾಜಿ, ಮನ್ಸೂರ್ ಅಹ್ಮದ್ ಆಝಾದ್, ರೋಹನ್ ಮೊಂತೆರೋ ಮತ್ತಿತರರು ಪಾಲ್ಗೊಂಡಿದ್ದರು.