ಬಿಹಾರ: ಅಂಬೇಡ್ಕರ್ ಜಯಂತಿ ಸಿದ್ಧತೆ ನಡೆಸುತ್ತಿದ್ದ ದಲಿತ ನಾಯಕನ ಹತ್ಯೆ

ಹೊಸದಿಲ್ಲಿ,ಎ.14: ಬಿಹಾರದ ಹಾಜಿಪುರದಲ್ಲಿ ಗುರುವಾರ ಅಂಬೇಡ್ಕರ್ ಜಯಂತಿಗಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದ ದಲಿತ ನಾಯಕರೋರ್ವರನ್ನು ನಾಲ್ವರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ದಲಿತ ಸೇನಾದ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ ಪಾಸ್ವಾನ್ ಅವರು ಗುರುವಾರ ಸಂಜೆ ಲಾಲ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಧಾಮಿಯಾ ಪ್ರದೇಶದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದಾಗ ಆಗಮಿಸಿದ್ದ ನಾಲ್ವರು ವ್ಯಕ್ತಿಗಳು ಅವರ ಪಾದಗಳನ್ನು ಸ್ಪರ್ಶಿಸುವ ನೆಪದಲ್ಲಿ ಗುಂಡು ಹಾರಿಸಿದ್ದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಾಸ್ವಾನ್ ರನ್ನು ಬೆಂಬಲಿಗರು ಮತ್ತು ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಘಟನೆಯು ಪ್ರದೇಶದಲ್ಲಿ ದುಃಖ ಮತ್ತು ಆತಂಕವನ್ನು ಸೃಷ್ಟಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ಪಾಸ್ವಾನ್ರ ಬೆಂಬಲಿಗರು ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ತಮ್ಮ ನಾಯಕನಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪಾಸ್ವಾನ್ ರ ಬೆಂಬಲಿಗರು ಮತ್ತು ಕುಟುಂಬ ಸದಸ್ಯರು ರಾತ್ರಿಯಿಡೀ ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದ್ದರು. ತಮ್ಮ ಬೇಡಿಕೆ ಈಡೇರುವವರೆಗೆ ಪೊಲೀಸರು ಪಾಸ್ವಾನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ಅವರು ಅವಕಾಶ ನಿರಾಕರಿಸಿದ್ದರು. ಮರಣೋತ್ತರ ಪರೀಕ್ಷಗೆ ಶವವನ್ನು ಹಸ್ತಾಂತರಿಸಲು ಮತ್ತು ಶಾಂತಿಯುತವಾಗಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ಅವರನ್ನು ಒಪ್ಪಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದರು.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.







