ಜನರನ್ನು ದೇಶವಿರೋಧಿಗಳೆಂದು ಬಿಂಬಿಸುವ ಸಂಸ್ಕೃತಿಯು ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ,ಎ.14: ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,‘ಬಲವಂತದಿಂದ ಬಾಯಿ ಮುಚ್ಚಿಸುವ ಸಂಸ್ಕೃತಿ ಮತ್ತು ಜನರನ್ನು ದೇಶವಿರೋಧಿಗಳು ಎಂದು ಬಿಂಬಿಸುವುದು ಅಪಾಯಕಾರಿ ಪ್ರವೃತ್ತಿಯಾಗಿದ್ದು,ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಂತ್ಯವನ್ನು ಹಾಡುತ್ತದೆ ಮತ್ತು ಸಂವಿಧಾನವನ್ನು ನಾಶಗೊಳಿಸುತ್ತದೆ ’ಎಂದು ಹೇಳಿದರು.
ಆಡಳಿತ ಪಕ್ಷವು ಸಂಸತ್ತನ್ನು ಚರ್ಚೆಗಿಂತ ಹೋರಾಟದ ಕಣವನ್ನಾಗಿ ಪರಿವರ್ತಿಸಿದೆ ಎಂದು ಅವರು ಆರೋಪಿಸಿದರು. ಭಾರತೀಯ ರಾಜಕೀಯದ ಸಂದರ್ಭದಲ್ಲಿ ನಾಯಕನ ಆರಾಧನೆ ಅಥವಾ ಭಕ್ತಿಯ ಅಪಾಯಗಳ ಬಗ್ಗೆ ಅಂಬೇಡ್ಕರ್ ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ಅವರು ನೆನಪಿಸಿಕೊಂಡರು.
‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪರವಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿಯ ಸಂದರ್ಭದಲ್ಲಿ ಅವರ ಅಗಾಧ ಕೊಡುಗೆಗೆ ನಾವು ಗೌರವಪೂರ್ವಕವಾಗಿ ನಮಿಸುತ್ತೇವೆ. ಅವರು ಸ್ವಾತಂತ್ರ,ಸಮಾನತೆ,ಭ್ರಾತೃತ್ವ ಮತ್ತು ನ್ಯಾಯದ ಪ್ರಜಾಸತ್ತಾತ್ಮಕ ತತ್ತ್ವಗಳ ಪ್ರತಿಪಾದಕರಾಗಿದ್ದರು ’ಎಂದು ಖರ್ಗೆ ತನ್ನ ಸಂದೇಶದಲ್ಲಿ ಹೇಳಿದ್ದಾರೆ.
ಅಂಬೇಡ್ಕರ್ ಅವರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಭಾರತ ಹಾಗೂ ಅದರ ಸಮಾಜದ ಪರಿವರ್ತನೆಗಾಗಿ ದೃಢವಾದ ಬದ್ಧತೆಯನ್ನು ಹೊಂದಿದ್ದರು ಎಂದು ಹೇಳಿದ ಖರ್ಗೆ,‘ನಾವೆಲ್ಲರೂ ಅವರನ್ನು ಭಾರತೀಯ ಸಂವಿಧಾನದ ಶಿಲ್ಪಿ ಎಂದು ಬಹುವಾಗಿ ಗೌರವಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಸದೃಢ ಸಂಸ್ಥೆಗಳ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರವನ್ನು ಹೊಂದಿದ್ದರು ಹಾಗು ಜಾತಿ ತಾರತಮ್ಯ,ಲಿಂಗ ಅಸಮಾನತೆ ಮತ್ತು ವಿಭಜಕ ರಾಜಕೀಯವನ್ನು ಅಂತ್ಯಗೊಳಿಸಲು ಹಲವಾರು ಮಹತ್ವದ ಕ್ರಮಗಳಿಗೆ ಕಾರಣರಾಗಿದ್ದರು ’ಎಂದರು.
‘ಅಂಬೇಡ್ಕರ್ ಮತ್ತು ಪಂಡಿತ ನೆಹರು,ಸರ್ದಾರ ಪಟೇಲ್,ವೌಲಾನಾ ಆಝಾದ್,ನೇತಾಜಿ ಸುಭಾಷ್ಚಂದ್ರ ಬೋಸ್ರಂತಹ ಆಧುನಿಕ ಭಾರತದ ನಿರ್ಮಾತೃರ ಪರಿಕಲ್ಪನೆಯ ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಬುನಾದಿಯು ಇಂದು ಗಂಭೀರ ಅಪಾಯದಲ್ಲಿದೆ ’ಎಂದು ಖರ್ಗೆ ಹೇಳಿದರು. ಧರ್ಮದಲ್ಲಿ ಭಕ್ತಿ ಮೋಕ್ಷಕ್ಕೆ ದಾರಿಯಾಗಿದೆ. ಆದರೆ ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕನ ಆರಾಧನೆಯು ಅವನತಿಗೆ ಮತ್ತು ಅಂತಿಮವಾಗಿ ಸರ್ವಾಧಿಕಾರಕ್ಕೆ ಖಚಿತವಾದ ಮಾರ್ಗವಾಗಿದೆ ಎಂದು ಅಂಬೇಡ್ಕರ್ರನ್ನು ಉಲ್ಲೇಖಿಸಿ ಖರ್ಗೆ ನುಡಿದರು.
ತನ್ನ ಸಹ ನಾಗರಿಕರಿಗೆ ನೀಡಿರುವ ಸಂದೇಶದಲ್ಲಿ ಖರ್ಗೆ,‘ನಾವು ನಮ್ಮ ಪ್ರಜಾಪ್ರಭುತ್ವದ ಅವನತಿಗೆ ಮತ್ತು ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತೇವೆಯೇ ಅಥವಾ ನಮ್ಮ ಸಂವಿಧಾನ ನಿರ್ಮಾತೃರ ಅತ್ಯುತ್ತಮ ಆದರ್ಶಗಳ ಸಂರಕ್ಷಣೆಗೆ ಪ್ರಯತ್ನಿಸುತ್ತೇವೆಯೇ ಎಂಬ ಬಗ್ಗೆ ಗಂಭೀರ ಆತ್ಮಾವಲೋಕನಕ್ಕೆ ಇದು ಸಕಾಲವಾಗಿದೆ ’ಎಂದು ಹೇಳಿದ್ದಾರೆ.
ಸಮಾನತೆ,ಸ್ವಾತಂತ್ರಭ್ರಾತೃತ್ವ ಮತ್ತು ನ್ಯಾಯ; ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಈ ಸಾರ್ವತ್ರಿಕ ವೌಲ್ಯಗಳು ಸದಾ ನಮಗೆ ಮಾರ್ಗದರ್ಶಕ ಬೆಳಕು ಮತ್ತು ಶಕ್ತಿಯಾಗಿ ಉಳಿಯುತ್ತವೆ.
-ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಸಂವಿಧಾನದ ಮೂಲಕ ನ್ಯಾಯ,ಸಮಾನತೆ ಮತ್ತು ಭ್ರಾತೃತ್ವದ ವೌಲ್ಯಗಳನ್ನು ನೀಡಿದ್ದಾರೆ. ಇಂದು ದೇಶದ ಸಂವಿಧಾನ ಮತ್ತು ಈ ಮೌಲ್ಯಗಳ ಮೇಲೆ ಯೋಜಿತ ದಾಳಿ ನಡೆಯುತ್ತಿದೆ.
-ಪ್ರಿಯಾಂಕಾ ಗಾಂಧಿ ವಾದ್ರಾ
ಎಐಸಿಸಿ ಪ್ರ.ಕಾರ್ಯದರ್ಶಿ







