ಅಂಬೇಡ್ಕರ್ ಜಯಂತಿ ಮತ್ತು ದೇವಸ್ಥಾನದ ಜಾತ್ರೆಯನ್ನು ಒಂದೇ ದಿನ ಯಾಕೆ ಆಚರಿಸಬಾರದು: ಮದ್ರಾಸ್ ಹೈಕೋರ್ಟ್ ಪ್ರಶ್ನೆ

ಚೆನ್ನೈ, ಎ. 14: ಅಂಬೇಡ್ಕರ್ ಜಯಂತಿ ಮತ್ತು ಧಾರ್ಮಿಕ ಉತ್ಸವವೊಂದನ್ನು ಜೊತೆಯಾಗಿ ಆಚರಿಸಿದರೆ ಜಾತಿ ಸಂಘರ್ಷ ನಡೆಯಬಹುದೆನ್ನುವ ಕಳವಳ ಈಗಲೂ ಇರುವುದಕ್ಕೆ ಮದರಾಸ್ ಹೈಕೋರ್ಟ್ ಗುರುವಾರ ವಿಷಾದ ವ್ಯಕ್ತಪಡಿಸಿದೆ.
‘‘ಸ್ವಾತಂತ್ರ ದೊರೆತು 75 ವರ್ಷಗಳ ಬಳಿಕವೂ, ಅಂಬೇಡ್ಕರ್ ಜಯಂತಿ ಮತ್ತು ಗ್ರಾಮವೊಂದರ ದೇವಸ್ಥಾನದ ಜಾತ್ರೆಯನ್ನು ಜೊತೆಯಾಗಿ ಆಚರಿಸಲು ನಮಗೆ ಸಾಧ್ಯವಾಗದಿದ್ದರೆ, ನಮ್ಮ ದೇಶದ ಬಗ್ಗೆ ಜನರು ಏನು ತಿಳಿದುಕೊಳ್ಳುತ್ತಾರೆ?’’ ಎಂದು ನ್ಯಾಯಾಲಯ ಪ್ರಶ್ನಿಸಿತು.
ನಾಗಪಟ್ಟಿಣಂ ಜಿಲ್ಲೆಯ ಪಟ್ಟಾವರ್ತಿ ಗ್ರಾಮದಲ್ಲಿ ಎಪ್ರಿಲ್ 14ರಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಉಸ್ತುವಾರಿ ಮುಖ್ಯ ನ್ಯಾಯಾಧೀಶ ಟಿ. ರಾಜಾ ಮತ್ತು ನ್ಯಾ. ಡಿ. ಭರತ ಚಕ್ರವರ್ತಿ ಅವರನ್ನೊಳಗೊಂಡ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಎರಡೂ ಕಾರ್ಯಕ್ರಮಗಳು ನಡೆಯಲು ಸಾಧ್ಯವಾಗುವಂತೆ ಅಧಿಕಾರಿಗಳು ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿತು.
ಒಂದೋ ಅಂಬೇಡ್ಕರ್ ಜಯಂತಿಗೆ ಅಥವಾ ಸ್ಥಳೀಯ ದೇವಾಲಯದ ಜಾತ್ರೆಗೆ ಜನ ಸೇರದಂತೆ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು. ಈ ಎರಡೂ ಕಾರ್ಯಕ್ರಮಗಳು ಈ ಬಾರಿ ಶುಕ್ರವಾರ ನಡೆದಿದೆ.
2021 ಡಿಸೆಂಬರ್ನಲ್ಲಿ ಗ್ರಾಮದಲ್ಲಿ ಜಾತಿ ಸಂಘರ್ಷಗಳು ನಡೆದಿದ್ದವು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು. ಪರಿಶಿಷ್ಟ ಜಾತಿ ಸಮುದಾಯದ ಜನರು ಸ್ಥಳೀಯ ಬಸ್ ನಿಲ್ದಾಣದ ಸಮೀಪ ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಆಯೋಜಿಸಿದ್ದರು. ಅದೇ ದಿನ ಮೇಲ್ಜಾತಿಯ ಹಿಂದೂಗಳು ಗ್ರಾಮದ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಆದರೆ, ಸೂಕ್ತ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲು ಪೊಲೀಸರು ಸಮರ್ಥರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು ಹಾಗೂ ಎರಡೂ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುವಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತು.







