ನಮ್ಮ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬೇಡಿ: ಗೂಗಲ್ ಗೆ ಕಾಂಗ್ರೆಸ್ ಒತ್ತಾಯ

ಹೊಸದಿಲ್ಲಿ, ಎ. 14: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಯೂಟ್ಯೂಬ್ ಚಾನೆಲ್ ನ ವೀಕ್ಷಕರ ಸಂಖ್ಯೆಯನ್ನು ಗೂಗಲ್ ‘‘ಹತ್ತಿಕ್ಕುತ್ತಿದೆ’’ ಎಂಬುದಾಗಿ ಕಾಂಗ್ರೆಸ್ ಆರೋಪಿಸಿದೆ.
ಗೂಗಲ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಂದರ ಪಿಚೈಗೆ ಪತ್ರವೊಂದನ್ನು ಬರೆದಿರುವ ಕಾಂಗ್ರೆಸ್ ಅಂಕಿಅಂಶ ವಿಶ್ಲೇಷಣೆ ಇಲಾಖೆಯ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ, ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಬೇಕೆನ್ನುವ ಒತ್ತಡಕ್ಕೆ ಗೂಗಲ್ ಮಣಿಯದಂತೆ ನೋಡಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
ಯೂಟ್ಯೂಬ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನೀಲ್ ಮೋಹನ್ ಗೆ ಪಕ್ಷವು ಈ ಹಿಂದೆಯೂ ಇದೇ ವಿಷಯದಲ್ಲಿ ದೂರು ನೀಡಿತ್ತು. ಆ ದೂರಿನ ಬಳಿಕ, ಗುಂಡಿಯನ್ನು ಒತ್ತಿ ಮರುಚಾಲನೆಗೊಳಿಸಿದಂತೆ ವೀಕ್ಷಕರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಉಂಟಾಗಿತ್ತು ಎಂಬುದಾಗಿ ಅವರು ತನ್ನ ಆರೋಪಕ್ಕೆ ಸಮರ್ಥನೆಯೊದಗಿಸಿದ್ದಾರೆ.
ಮಾರ್ಚ್ 11ರಂದು ನೀಲ್ ಮೋಹನ್ ಗೆ ಬರೆದ ತನ್ನ ಹಿಂದಿನ ಪತ್ರದಲ್ಲಿ, ಲೋಕಸಭೆಯಲ್ಲಿ ಫೆಬ್ರವರಿ 7ರಂದು ರಾಹುಲ್ ಗಾಂಧಿ ಭಾಷಣ ಮಾಡಿದ ಬಳಿಕ ಅವರ ಯೂಟ್ಯೂಬ್ ವೀಕ್ಷಕರ ಸಂಖ್ಯೆಯಲ್ಲಿ ದಿಢೀರ್ ಕುಸಿತವುಂಟಾಗಿದೆ ಎಂಬುದಾಗಿ ಚಕ್ರವರ್ತಿ ಹೇಳಿದ್ದರು. ರಾಹುಲ್ ಗಾಂಧಿ ತನ್ನ ಆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ನಡುವಿನ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು.
ಈ ಪತ್ರ ಮತ್ತು ಇದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳ ಬಳಿಕ, ರಾಹುಲ್ ಗಾಂಧಿಯ ಚಾನೆಲ್ ನ ವೀಕ್ಷಕರ ಸಂಖ್ಯೆ ಸಾಮಾನ್ಯಕ್ಕೆ ಮರಳಿತು, ಅಂದರೆ ವೀಕ್ಷಕರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಉಂಟಾಯಿತು ಎಂದು ಚಕ್ರವರ್ತಿ ಹೇಳಿಕೊಂಡಿದ್ದಾರೆ. ‘‘ಇಂಥ ಏರಿಳಿತಗಳಿಗೆ ಯಾವ ವಿವರಣೆ ಕೊಡುವುದು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಮಹತ್ವದ ಭಾಷಣವೊಂದರ ಬಳಿಕ, ವೀಕ್ಷಕರ ಸಂಖ್ಯೆಯಲ್ಲಿ ಆಗಿರುವ ದಿಢೀರ್ ಕುಸಿತವು ಖಂಡಿತವಾಗಿಯೂ ಕಾಕತಾಳೀಯವಾಗಿರಲಾರದು. ಹಾಗಾದರೆ, ಅದನ್ನು ಹತ್ತಿಕ್ಕಲಾಯಿತೇ? ಇದು ಯೂಟ್ಯೂಬ್ ಒತ್ತಡಕ್ಕೆ ಮಣಿಯುತ್ತಿರುವುದರ ಸೂಚನೆಯೇ? ಇದೇ ಮಾದರಿಯಲ್ಲಿ, ಭಾರತದಲ್ಲಿ ಇತರ ಯಾವ ಪ್ರತಿಪಕ್ಷ ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ?’’ ಎಂದು ಚಕ್ರವರ್ತಿ ಪ್ರಶ್ನಿಸಿದ್ದಾರೆ.
‘‘ತಟಸ್ಥವೆಂಬಂತೆ ಕಾಣುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಪ್ರತಿಪಕ್ಷಗಳ ಧ್ವನಿಗಳಿಗೆ ಉಳಿದಿರುವ ಏಕೈಕ ಭರವಸೆಗಳು ಎಂಬುದಾಗಿ ಭಾವಿಸಿರುವಾಗ, ಇಂಥ ಬೆಳವಣಿಗೆಗಳು ಖಂಡಿವಾಗಿಯೂ ಆಘಾತಕಾರಿಯಾಗಿರುತ್ತವೆ’’ ಎಂದರು.
‘‘ಹಲವಾರು ರಾಜ್ಯಗಳ ಚುನಾವಣೆಗಳು ಶೀಘ್ರದಲ್ಲೇ ನಡೆಯಲಿರುವಾಗ ಮತ್ತು ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವಾಗ, ಜಗತ್ತಿನ ಅತಿ ದೊಡ್ಡ ಮತ್ತು ಬಹುಷಃ ಅತ್ಯಂತ ಮಹತ್ವದ ಪ್ರಜಾಪ್ರಭುತ್ವವಾಗಿರುವ ಭಾರತದ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ನಾನು ಈ ಕಳವಳವನ್ನು ವ್ಯಕ್ತಪಡಿಸುತ್ತಿದ್ದೇನೆ’’ ಎಂದು ಚಕ್ರವರ್ತಿ ಪತ್ರದಲ್ಲಿ ಬರೆದಿದ್ದಾರೆ.







