ಟೆಕ್ಸಾಸ್ ಫಾರ್ಮ್ ನಲ್ಲಿ ಭೀಕರ ಸ್ಫೋಟ: 18000ಕ್ಕೂ ಅಧಿಕ ಹಸುಗಳು ಸಾವು

ವಾಷಿಂಗ್ಟನ್, ಎ.14: ಅಮೆರಿಕದ ಟೆಕ್ಸಾಸ್ ರಾಜ್ಯದ ಖಾಸಗಿ ಡೈರಿ ಫಾರ್ಮ್(ಹೈನುಗಾರಿಕೆ)ನಲ್ಲಿ ಭೀಕರ ಸ್ಫೋಟ ಹಾಗೂ ಬೆಂಕಿಯಿಂದಾಗಿ 18 ಸಾವಿರಕ್ಕೂ ಅಧಿಕ ಹಸುಗಳು ಸಾವನ್ನಪ್ಪಿವೆ. ಫಾರ್ಮ್ ನ ಒಬ್ಬ ಉದ್ಯೋಗಿಯನ್ನು ಅಗ್ನಿಶಾಮಕ ಪಡೆ ರಕ್ಷಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟೆಕ್ಸಾಸ್ನ ಡಿಮ್ಮಿಟ್ ನಗರದ ಸೌತ್ಪೋರ್ಕ್ ಡೈರಿಯಲ್ಲಿ ಈ ದುರಂತ ಸಂಭವಿಸಿದ್ದು 18 ಸಾವಿರಕ್ಕೂ ಹೆಚ್ಚು ಹಸುಗಳು ಸಜೀವ ದಹನಗೊಂಡಿವೆ. ಟೆಕ್ಸಾಸ್ನ ಅತೀ ದೊಡ್ಡ ಹಾಲುಉತ್ಪಾದನಾ ಪ್ರದೇಶದಲ್ಲಿ ಈ ಫಾರ್ಮ್‌ಹೌಸ್ ಇದೆ . ಬೆಂಕಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಫಾರ್ಮ್‌ಹೌಸ್ ಕಟ್ಟಡದೊಳಗಿಂದ ಭೀಕರ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಅಮೆರಿಕದಲ್ಲಿ ಪ್ರತೀ ವರ್ಷವೂ ಕೊಟ್ಟಿಗೆಗಳಲ್ಲಿ ಉಂಟಾಗುವ ಬೆಂಕಿ ಅವಘಡದಿಂದ ಸಾವಿರಾರು ಹಸುಗಳು ಸಾವಿಗೀಡಾಗುತ್ತವೆ. ಇಂತಹ ಪ್ರಕರಣಗಳನ್ನು ತಡೆಯಲು ಸೂಕ್ತ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಅಮೆರಿಕದ ಪ್ರಾಣಿರಕ್ಷಣಾ ಸಂಸ್ಥೆಗಳಲ್ಲಿ ಅತ್ಯಂತ ಹಳೆಯದಾದ ಎನಿಮಲ್ ವೆಲ್ಫೇರ್ ಇನ್ಸ್ಟಿಟ್ಯೂಟ್ ಒತ್ತಾಯಿಸಿದೆ.
ಕಳೆದ 10 ವರ್ಷದಲ್ಲಿ ಅಮೆರಿಕದಲ್ಲಿ ಫಾರ್ಮ್ಹೌಸ್ ಬೆಂಕಿ ದುರಂತದಲ್ಲಿ ಸುಮಾರು 6.5 ದಶಲಕ್ಷ ಹಸುಗಳು ಸಾವನ್ನಪ್ಪಿವೆ. ಈಗ ಅಮೆರಿಕದಲ್ಲಿ ಪ್ರಾಣಿಗಳನ್ನು ಬೆಂಕಿದುರಂತದಿಂದ ರಕ್ಷಿಸುವ ಯಾವುದೇ ಕಾನೂನುಗಳಿಲ್ಲ. ಅಮೆರಿಕದ ಕೆಲವು ರಾಜ್ಯಗಳು ವೈಯಕ್ತಿಕ ರಕ್ಷಣೆ ಕಾನೂನನ್ನು ಅಳವಡಿಸಿಕೊಂಡಿವೆ.