ಜಾತಿ ತಾರತಮ್ಯದ ಭೀತಿ ಹುಟ್ಟು ಹಾಕಿದ ಯುಜಿಸಿಯ ನೂತನ ನಿಯಮಗಳು

ಹೊಸದಿಲ್ಲಿ, ಎ. 14: ಜಾತಿ ತಾರತಮ್ಯದ ದೂರುಗಳನ್ನು ಸಾಮಾನ್ಯ ದೂರುಗಳೊಂದಿಗೆ ಸಂಯೋಜಿಸಿರುವುದರಿಂದ ವಿದ್ಯಾರ್ಥಿಗಳ ಕುಂದುಕೊರತೆಗಳ ಪರಿಹಾರಕ್ಕೆ ವಿಶ್ವವಿದ್ಯಾನಿಲಯ ಅಧಿಸೂಚಿಸಿದ ಹೊಸ ನಿಯಮಗಳು ವಿವಾದಕ್ಕೆ ಕಾರಣವಾಗಿದೆ.
ಯುಜಿಸಿ (ವಿದ್ಯಾರ್ಥಿಗಳ ಕುಂದುಕೊರತೆಗಳ ಪರಿಹಾರ)ನಿಯಮ-2023 ವಿದ್ಯಾರ್ಥಿಗಳು ಜಾತಿ ಆಧಾರದ ತಾರತಮ್ಯವನ್ನು ಎದುರಿಸಲು ಈಗಾಗಲೇ ಇರುವ ನಿಯಮಗಳನ್ನು ದುರ್ಬಲಗೊಳಿಸಿದೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ನೂತನ ನಿಯಮದ ಪ್ರಕಾರ ಪ್ರತಿ ಉನ್ನತ ಶಿಕ್ಷಣ ಸಂಸ್ಥೆ ಅಧ್ಯಾಪಕ ಶ್ರೇಣಿಯ ವ್ಯಕ್ತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳ ಕುಂದು ಕೊರತೆ ಪರಿಹಾರ ಸಮಿತಿ (ಎಸ್‌ಜಿಆರ್‌ಸಿ)ಯನ್ನು ಸ್ಥಾಪಿಸಬೇಕಾಗುತ್ತದೆ. ಅಧ್ಯಕ್ಷರನ್ನು ಹೊರತುಪಡಿಸಿ ನಾಲ್ವರು ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಸಮಿತಿಯ ಭಾಗವಾಗಿರುತ್ತಾರೆ. ಪ್ರತಿ ಸಮಿತಿ ಒಬ್ಬ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ ಹಾಗೂ ಮಹಿಳಾ ಸದಸ್ಯೆಯನ್ನು ಹೊಂದಿರುತ್ತದೆ.
ಪ್ರವೇಶ ಪ್ರಕ್ರಿಯೆಯಲ್ಲಿ ಅಕ್ರಮಗಳು, ವಿವರಣಾ ಪತ್ರದಲ್ಲಿನ ತಪ್ಪು ಮಾಹಿತಿ, ವಿದ್ಯಾರ್ಥಿ ಪ್ರವೇಶ ಪಡೆದ ಬಳಿಕ ಪ್ರವೇಶ ಹಿಂಪಡೆದರೆ ಪ್ರಮಾಣ ಪತ್ರಗಳನ್ನು ತಡೆ ಹಿಡಿಯುವುದು ಅಥವಾ ಶುಲ್ಕ ಹಿಂದಿರುಗಿಸಲು ನಿರಾಕರಿಸುವುದು, ಪರೀಕ್ಷೆಗಳನ್ನು ನಡೆಸುವಲ್ಲಿ ಮತ್ತು ಫಲಿತಾಂಶಗಳ ಘೋಷಣೆ ಮಾಡುವಲ್ಲಿ ವಿಳಂಬಿಸುವುದು ಹಾಗೂ ಕ್ಯಾಪಿಟೇಶನ್ ಶುಲ್ಕಕ್ಕೆ ಬೇಡಿಕೆ ಇರಿಸುವುದು ಮೊದಲಾದ ಕುಂದುಕೊರತೆಗಳ ಕುರಿತು ವಿದ್ಯಾರ್ಥಿಗಳು ದೂರು ಸಲ್ಲಿಸಬಹುದು.
ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳ ತಾರತಮ್ಯ ಮತ್ತು ಮೀಸಲಾತಿ ಜಾರಿಯಲ್ಲಿನ ಉಲ್ಲಂಘನೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಕೂಡ ಎಸ್‌ಜಿಆರ್‌ಸಿ ನೀಡಲಾಗಿದೆ.







