ಕರ್ನಾಟಕ ವಿಧಾನ ಸಭೆ ಚುನಾವಣೆ 40-50 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎನ್‌ಸಿಪಿ ಚಿಂತನೆ

ಹೊಸದಿಲ್ಲಿ, ಎ. 14: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಇರುವ ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ 40-50 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಚಿಂತನೆ ನಡೆಸಿದೆ.
ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನ ಸಭೆ ಚುನಾವಣೆ ಕುರಿತು ತನ್ನ ಚಿಂತನೆಯನ್ನು ಅಂತಿಮಗೊಳಿಸಲು ಪವಾರ್ ಅವರು ಮುಂಬೈಯಲ್ಲಿ ಶನಿವಾರ ಪಕ್ಷದ ನಾಯಕರ ಸಭೆ ಕರೆದಿದ್ದಾರೆ. ‘‘ಕರ್ನಾಟಕ ಚುನಾವಣೆ ಕುರಿತ ನಮ್ಮ ಚಿಂತನೆಯನ್ನು ಅಂತಿಮಗೊಳಿಸಲು ನಾವು ನಾಳೆ ಮುಂಬೈಯಲ್ಲಿ ಸಭೆ ಸೇರಲಿದ್ದೇವೆ’’ ಎಂದು ಪವಾರ್ ತಿಳಿಸಿದ್ದಾರೆ.
ಕರ್ನಾಟಕ ವಿಧಾನ ಸಭೆ ಚುನಾವಣೆಗೆ ‘ಅಲರಾಂ ಗಡಿಯಾರ’ ಚಿಹ್ನೆಯನ್ನು ಮಂಜೂರು ಮಾಡುವಂತೆ ಎನ್‌ಸಿಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಚುನಾವಣಾ ಆಯೋಗ ಮನವಿಗೆ ಸಮ್ಮತಿಸಿದೆ.
ರಾಜ್ಯಾದ್ಯಂತ ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 40-50 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ಹಾಗೂ ಗಣನೀಯ ಪ್ರಮಾಣದಲ್ಲಿ ಮರಾಠಿ ಮಾತನಾಡುವ ಜನರಿರುವ ಮಹಾರಾಷ್ಟ್ರ-ಕರ್ನಾಟಕ ಗಡಿ ವಲಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಂಬಲ ನೀಡಲು ಪಕ್ಷ ಚಿಂತಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳು ಸಂಘಟಿತವಾಗುವ ಅಗತ್ಯತೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಒಂದು ದಿನದ ಬಳಿಕ ಶರದ್ ಪವಾರ್ ಅವರು ಈ ಘೋಷಣೆ ಮಾಡಿದ್ದಾರೆ.







