ಬಟಿಂಡಾ ಹತ್ಯೆ: ಮಿಲಿಟರಿ ಗೌರವಕ್ಕೆ ಆಗ್ರಹಿಸಿ ಮೃತ ಸೈನಿಕರ ಕುಟುಂಬ ಪ್ರತಿಭಟನೆ

ಮಧುರೈ/ ಸೇಲಂ: ಬಟಿಂಡಾ ಸೇನಾ ನೆಲೆಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ನಾಲ್ವರು ಸೈನಿಕರ ಪೈಕಿ ಇಬ್ಬರಿಗೆ ಅಂತ್ಯಸಂಸ್ಕಾರ ವೇಳೆ ಗೌರವ ನೀಡದಿರುವ ಕ್ರಮವನ್ನು ಖಂಡಿಸಿ ಸೈನಿಕರ ಕುಟುಂಬ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಸೇಲಂ ಮೂಲದ ಸೈನಿಕ ಆರ್.ಕಮಲೇಶ್ ಅವರ ಸಂಬಂಧಿಕರು ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದರು. ಕೊಯಮತ್ತೂರು ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಿಗ್ಗೆ ಪಾರ್ಥಿವ ಶರೀರವನ್ನು ಮಧ್ಯಾಹ್ನದ ವೇಳೆಗೆ ಸೇಲಂಗೆ ತರಲಾಯಿತು. ಸೇನಾ ವಾಹನದ ಬದಲಾಗಿ ಒಂದು ಆ್ಯಂಬುಲೆನ್ಸ್‌ನಲ್ಲಿ ಮೃತದೇಹವನ್ನು ತಂದದ್ದು ಕಂಡು ಆಘಾತಗೊಂಡ ಕುಟುಂಬ ಸದಸ್ಯರು ವಾಹನದ ಮುಂದೆ ಪ್ರತಿಭಟನೆ ನಡೆಸಿದರು. ಸೇನಾ ಗೌರವವನ್ನು ನೀಡದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಕಮಲೇಶ್ ನಿಧನದ ಬಗ್ಗೆ ಸಮಗ್ರ ವಿವರವನ್ನೂ ಆಗ್ರಹಿಸಿದರು. ಘಟನೆಯ ಬಗ್ಗೆ ಸೇನೆ ಸಮಗ್ರ ತನಿಖೆ ನಡೆಸಿದ ಬಳಿಕ ವಿವರ ಒದಗಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದರು. ಆದರೂ ಗ್ರಾಮಸ್ಥರು ಸಂಜೆ 6 ಗಂಟೆವರೆಗೂ ಪಾರ್ಥಿವ ಶರೀರ ಸ್ವೀಕರಿಸಲು ನಿರಾಕರಿಸಿ ಪ್ರತಿಭಟನೆ ಮುಂದುವರಿಸಿದರು. ಅಂತೆಯೇ ಥೇಣೀ ಜಿಲ್ಲೆಯ ಮೂನಂದಿಪಟ್ಟಿ ಗ್ರಾಮದಲ್ಲೂ ಮತ್ತೊಬ್ಬ ಮೃತ ಸೈನಿಕ ಯೋಗೀಶ್ ಕುಮಾರ್ ಜೆ. ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಪ್ರತಿಭಟನೆ ನಡೆಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯೋಗೀಶ್ ಕುಮಾರ್ ಅವರ ಅಂತ್ಯಸಂಸ್ಕಾರಕ್ಕೂ ಸೇನಾ ಗೌರವ ನೀಡದಿರುವುದು ಗ್ರಾಮಸ್ಥರ ಸಿಟ್ಟಿಗೆ ಕಾರಣವಾಯಿತು. ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾರ್ಥಿವ ಶರೀರವನ್ನು ಬಳಿಕ ರಸ್ತೆ ಮೂಲಕ ಗ್ರಾಮಕ್ಕೆ ಒಯ್ಯಲಾಯಿತು. ಥೇವರಂ ಪಟ್ಟಣಕ್ಕೆ ಆಗಮಿಸಿದ ಮೃತದೇಹನ್ನು ರಂಗನಾಥರ್ ದೇವಾಲಯ ಮೈದಾನದಿಂಧ ಮೂನಂದಿಪಟ್ಟಿ ಗ್ರಾಮದಲ್ಲಿದ್ದ ಅವರ ನಿವಾಸಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಸ್ಥಳೀಯ ಗ್ರಾಮಸ್ಥರು, ನಿವೃತ್ತ ಯೋಧರು ಮೃತ ಸೈನಿಕನಿಗೆ ಬಾಷ್ಪಾಂಜಲಿ ಸಲ್ಲಿಸಿದರು. ಬಟಿಂಡಾ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು ಸೇನಾ ನಿಯಮದ ಪ್ರಕಾರ, ವಿಚಾರಣಾ ಪ್ರಕ್ರಿಯೆ ನಡೆಯುತ್ತಿರುವ ಪ್ರಕರಣಗಳಲ್ಲಿ ಮೃತಪಟ್ಟ ಸೈನಿಕರಿಗೆ ಸೇನಾ ಗೌರವ ನೀಡುವಂತಿಲ್ಲ. ಸುಮಾರು 45 ನಿಮಿಷಗಳ ಕಾಲ ಪ್ರತಿಭಟನೆ ನಡೆಯಿತು. ಕೋರ್ಟ್‌ಮಾರ್ಷಲ್ ಶಿಷ್ಟಾಚಾರವನ್ನು ಸಂಬಂಧಿಕರಿಗೆ ವಿವರಿಸಿದ ಬಳಿಕ ಅಂತಿಮ ವಿಧಿವಿಧಾನ ನಡೆಸಲು ಒಪ್ಪಿಕೊಂಡರು.
Next Story





