ಪುಣೆಯಿಂದ ಮುಂಬೈಗೆ ತೆರಳುತ್ತಿದ್ದ ಬಸ್ಸು ಕಮರಿಗೆ ಬಿದ್ದು 12 ಮಂದಿ ಮೃತ್ಯು, ಹಲವರಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹಳೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಚಲಿಸುತ್ತಿದ್ದ ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಹಾಗೂ 27 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಪ್ರದಾಯಿಕ ಸಂಗೀತ ತಂಡದ ಸದಸ್ಯರನ್ನು ಹೊತ್ತ ಖಾಸಗಿ ಬಸ್ ಪುಣೆಯಿಂದ ಮುಂಬೈಗೆ ಹೋಗುತ್ತಿದ್ದಾಗ ಹೆದ್ದಾರಿಯ ಶಿಂಗ್ರೋಬಾ ದೇವಸ್ಥಾನದ ಬಳಿ ಬೆಳಿಗ್ಗೆ 4:50 ರ ಸುಮಾರಿಗೆ ಕಮರಿಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖೋಪೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
ಬಸ್ ಮುಂಬೈನ ಗೋರೆಗಾಂವ್ ನ ಬಾಜಿ ಪ್ರಭು ವಾಡಕ್ ಗ್ರೂಪ್‌ನ ಸದಸ್ಯರನ್ನು ಹೊತ್ತೊಯ್ಯುತ್ತಿತ್ತು. ಸಂಗೀತ ತಂಡವು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಗೋರೆಗಾಂವ್‌ಗೆ ಹಿಂತಿರುಗುತ್ತಿತ್ತು. ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬಸ್ ಪುಣೆಯಿಂದ ನಿರ್ಗಮಿಸಿತ್ತು. ಅಪಘಾತದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಹಾಗೂ 27 ಜನರು ಗಾಯಗೊಂಡಿದ್ದಾರೆ ಪೊಲೀಸರು ತಿಳಿಸಿದ್ದಾರೆ. .
ಗಾಯಗೊಂಡವರು ಹಾಗೂ ಸಾವನ್ನಪ್ಪಿದವರು ಮುಂಬೈನ ಸಯನ್ ಮತ್ತು ಗೋರೆಗಾಂವ್ ಮತ್ತು ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್‌ಗೆ ಸೇರಿದವರು ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೋಮನಾಥ್ ಘರ್ಗೆ ತಿಳಿಸಿದ್ದಾರೆ.
ಗಾಯಾಳುಗಳನ್ನು ಖೋಪೋಲಿ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







