ಸಕ್ರಿಯ ರಾಜಕಾರಣಕ್ಕೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವಿದಾಯ ಘೋಷಣೆ

ಕೋಲಾರ, ಎ.15: ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ್ದಾರೆ.
ಕೋಲಾರ ನಗರದಲ್ಲಿ ಶನಿವಾರ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಚುನಾವಣಾ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ. ಆದರೆ 'ಜನಪರ, ಸಂವಿಧಾನ ಪರ, ಅಭಿವೃದ್ಧಿ ಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತೇನೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಎಪ್ರಿಲ್ 26ರ ನಂತರ ತಿಳಿಸುವುದಾಗಿ ಹೇಳಿದ್ದಾರೆ.
ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ವಿ.ಆರ್.ಸುದರ್ಶನ್, 2023ರ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದರು, ಇದೀಗ ಏಕಾಏಕಿ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಂಡಿರುವುದಾಗಿ ಘೋಷಸಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಅಹಿಂದ ಚಳುವಳಿಯ ಮೂಲಕ ಜಿಲ್ಲೆಯ ಪ್ರಮುಖ ಮುಖಂಡರಾಗಿ ಹೊರಹೊಮ್ಮಿದ ಸುದರ್ಶನ್, ಜಿಲ್ಲೆಯ ರಾಜಕಾರಣಿಗಳಲ್ಲಿ ಉತ್ತಮ ವಾಗ್ಮಿ ಎಂದೇ ಗುರತಿಸಲಾಗುತ್ತಿದ್ದ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದವರು.





