ಐದು ಇಂಚು ಎತ್ತರ ಬೆಳೆಯಲು ಯಾತನಾಮಯ ಶಸ್ತ್ರಚಿಕಿತ್ಸೆಗಳಿಗೆ ರೂ. 1.35 ಕೋಟಿ ವೆಚ್ಚ ಮಾಡಿದ ವ್ಯಕ್ತಿ!

ವಾಷಿಂಗ್ಟನ್: ಮಿಸನೆಸೊಟಾ ನಿವಾಸಿಯೊಬ್ಬ ತನ್ನ ಎತ್ತರವನ್ನು ಐದು ಇಂಚು ವೃದ್ಧಿಸುವ ಶಸ್ತ್ರಚಿಕಿತ್ಸೆಗಳಿಗೆ ಅಂದಾಜು 1,70,000 ಡಾಲರ್ (ರೂ. 1.35 ಕೋಟಿ) ವೆಚ್ಚ ಮಾಡಿದ್ದಾನೆ ಎಂದು ವರದಿಯಾಗಿದೆ. ಮೋಸಸ್ ಗಿಬ್ಸನ್ (41) ಎಂಬ ವ್ಯಕ್ತಿ ತನ್ನ ಐದು ಅಡಿ, ಐದು ಇಂಚು ಎತ್ತರವನ್ನು ವೃದ್ಧಿಸಿಕೊಳ್ಳಲು ಚಿಕಿತ್ಸೆ ಹಾಗೂ ಆಧ್ಯಾತ್ಮಿಕ ಉಪಶಮನ ಸೇರಿದಂತೆ ಹಲವಾರು ಪ್ರಯೋಗಗಳನ್ನು ಪ್ರಯತ್ನಿಸಿದ್ದ. ಈ ಕುರಿತು Kennedy News and Media ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಗಿಬ್ಸನ್, "ನನಗೆ ನನ್ನ ಬಗ್ಗೆಯೇ ಉತ್ತಮ ಅಭಿಪ್ರಾಯವಿರಲಿಲ್ಲ. ಹೀಗಾಗಿ ನಾನು ಎತ್ತರ ವೃದ್ಧಿಸಿಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾದೆ" ಎಂದು ಹೇಳಿದ್ದಾನೆ. "ಸಾಮಾನ್ಯವಾಗಿ ನಾನು ನನ್ನ ಸ್ವಯಂ ವಿಶ್ವಾಸ ಹಾಗೂ ಮಹಿಳೆಯರೊಂದಿಗೆ ತೀರಾ ಅಸಂತೋಷಗೊಂಡಿದ್ದೆ. ಅದು ನನ್ನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಿತ್ತು. ನಾನು ಕೊಂಚ ಎತ್ತರ ಸಾಧಿಸಲು ನನ್ನ ಶೂ ಒಳಗೆ ಹಲವಾರು ವಸ್ತುಗಳನ್ನು ತುರುಕಿ ನೋಡಿದೆ. ಆದರೆ, ಅದರಿಂದ ಏನೂ ಲಾಭವಾಗಲಿಲ್ಲ" ಎಂದು ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾನೆ. ತನ್ನನ್ನು ಎತ್ತರಗೊಳಿಸುವುದಾಗಿ ಭರವಸೆ ನೀಡಿದ್ದ ಮಾತ್ರೆಗಳನ್ನು ಆತ ಬಳಸಿದ್ದ. ಹಾಗೆಯೇ ನಿನ್ನ ಮನಸನ್ನು ಸಮಚಿತ್ತವಾಗಿಟ್ಟುಕೊಂಡರೆ ನಿನ್ನ ಎತ್ತರ ವೃದ್ಧಿಸಲಿದೆ ಎಂದು ಭರವಸೆ ನೀಡಿದ್ದ ಆಧ್ಯಾತ್ಮಿಕ ಉಪಶಮನಕಾರನ ಮಾತಿಗೂ ಕಿವಿಗೊಟ್ಟಿದ್ದ. ಹೀಗಿದ್ದೂ ಎರಡು ವಿಫಲಗೊಂಡಿದ್ದವು. ಕೊನೆಗೆ ಆತ ದುಬಾರಿ ಹಾಗೂ ಯಾತನಾಮಯ ಶಸ್ತ್ರಚಿಕಿತ್ಸೆಯ ಮೊರೆ ಹೋಗಲು ನಿರ್ಧರಿಸಿದ. ಆತ ಶಸ್ತ್ರಚಿಕಿತ್ಸೆಗೊಳಗಾಗಲು ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಉಬರ್ ಚಾಲಕನಾಗಿ ಕಾರ್ಯನಿರ್ವಹಿಸಿ ಮೂರು ವರ್ಷಗಳಲ್ಲಿ 75,000 ಡಾಲರ್ ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾದ. ಕೊನೆಗೆ ಆತ 2016ರಲ್ಲಿ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗೊಳಗಾಗಿ, ಮೂರು ಇಂಚು ಎತ್ತರ ವೃದ್ಧಿಸಿಕೊಂಡ. "ಮೊದಲ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯ ನಂತರ ಕೊಂಚ ಮಟ್ಟಿಗೆ ನಾನು ಸಂತಸಗೊಂಡರೂ, ಅದನ್ನು ಪೂರ್ತಿಗೊಳಿಸಲು ನಾನು ಯಾವಾಗಲೂ ಎರಡನೆ ಹಂತದ ಪ್ರಕ್ರಿಯೆಯ ಬಗ್ಗೆಯೇ ನನ್ನ ಗಮನ ಕೇಂದ್ರೀಕರಿಸಿದ್ದೆ. ನಾನು ಭಾರಿ ಸಾಧಕನಾಗಿದ್ದು, ನಾನು ಹಣ ಹೊಂದಿದ್ದು, ನನ್ನ ಪಯಣವನ್ನು ಮುಗಿಸಬಲ್ಲೆ" ಎಂದು ಗಿಬ್ಸನ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾನೆ. ಕಳೆದ ಮಾರ್ಚ್ ತಿಂಗಳಲ್ಲಿ ಮತ್ತೆ 98,000 ಡಾಲರ್ ವೆಚ್ಚ ಮಾಡಿ ಎರಡನೆ ಹಂತದ ಶಸ್ತ್ರಚಿಕಿತ್ಸೆಗೊಳಗಾಗಿರುವ ಆತ, ತನ್ನ ಎತ್ತರಕ್ಕೆ ಮತ್ತೆರಡು ಇಂಚನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡಿದ್ದಾನೆ. ನೋವು ಹಾಗೂ ದುಬಾರಿ ಬೆಲೆಯ ಹೊರತಾಗಿಯೂ ನನಗೆ ಯಾವ ವಿಷಾದವೂ ಇಲ್ಲ ಎನ್ನುತ್ತಾನೆ ಗಿಬ್ಸನ್.