ದಿಲ್ಲಿ: ಬಿಜೆಪಿ ನಾಯಕನ ಗುಂಡಿಟ್ಟು ಹತ್ಯೆ

ಹೊಸದಿಲ್ಲಿ: 2017ರ ಮುನಿಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಪದಾಧಿಕಾರಿಯೊಬ್ಬರನ್ನು ಇಬ್ಬರು ಸಶಸ್ತ್ರಧಾರಿ ಹಂತಕರು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಶುಕ್ರವಾರ ರಾತ್ರಿ ನೈಋತ್ಯ ದಿಲ್ಲಿಯ ಬಿಂಡಾಪುರದಲ್ಲಿನ ಅವರ ಕಚೇರಿಯಲ್ಲಿ ನಡೆದಿದೆ ಎಂದು timesofindia.com ವರದಿ ಮಾಡಿದೆ.
ಸುರೇಂದರ್ ಮಟಿಯಾಲಾ ಹತ್ಯೆಗೀಡಾದ ಬಿಜೆಪಿ ನಾಯಕನಾಗಿದ್ದು, ಅವರು ಆರು ವರ್ಷಗಳ ಹಿಂದೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಾದರೂ, ಪರಾಭವಗೊಂಡಿದ್ದರು.
ಸದ್ಯ ಮಟಿಯಾಲಾ ನಜಾಫ್‌ಗಢ ಜಿಲ್ಲಾ ಕಿಸಾನ್ ಮೋರ್ಚಾದ ಅಧ್ಯಕ್ಷರಾಗಿದ್ದು, ಈ ಪ್ರದೇಶದ ರಾಜಕಾರಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ ಸುಮಾರು 8:16 ಗಂಟೆಯ ಸಮಯದಲ್ಲಿ ಪೊಲೀಸ್ ನಿಯಂತ್ರಣ ಕಚೇರಿಗೆ ಗುಂಡಿನ ದಾಳಿ ಕುರಿತು ಕರೆ ಬಂದಿದ್ದು, ಕೂಡಲೇ ಪೊಲೀಸರ ತಂಡವೊಂದು ಸ್ಥಳಕ್ಕೆ ಧಾವಿಸಿದೆ. ಗುಂಡಿನ ದಾಳಿಯ ಸಮಯದಲ್ಲಿ ಮಟಿಯಾಲಾ ಕಚೇರಿಯಲ್ಲೇ ಇದ್ದರು. ಅವರೊಂದಿಗೆ ಅವರ ಭಾವ ಸೇರಿದಂತೆ ಮತ್ತಿಬ್ಬರು ವ್ಯಕ್ತಿಗಳಿದ್ದರು ಎಂದು ತಿಳಿಸಿದ್ದಾರೆ.
ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ ಇಬ್ಬರು ಹಂತಕರು ಗಾಜಿನ ಬಾಗಿಲನ್ನು ತೆರೆದು ಕಚೇರಿಯ ಒಳ ಬಂದಾಗ ಮಟಿಯಾಲಾ ಟಿವಿ ವೀಕ್ಷಿಸುತ್ತಿದ್ದರು. ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸುವುದಕ್ಕೂ ಮುನ್ನ ಅವರ ಗುರುತನ್ನು ಖಾತ್ರಿಗೊಳಿಸಿಕೊಂಡಿದ್ದಾರೆ. ಶಂಕಿತ ಹಂತಕರು ಸ್ಥಳದಿಂದ ಪರಾರಿಯಾಗುವುದಕ್ಕೂ ಮುನ್ನ ಹತ್ತರಿಂದ ಹನ್ನೆರಡು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಮಟಿಯಾಲಾ ದೇಹದೊಳಗೆ ಒಟ್ಟು ಐದು ಗುಂಡುಗಳು ತೂರಿರುವುದು ಕಂಡು ಬಂದಿದೆ.
ಪೊಲೀಸರು ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ಘಟನಾ ಸ್ಥಳದಲ್ಲಿ ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಹೆಲ್ಮೆಟ್ ಹಿಡಿದು ನಿಂತಿರುವುದು ಕಂಡು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಇಬ್ಬರು ಶಂಕಿತರು ಮಟಿಯಾಲಾ ಕಚೇರಿಗೆ ಬಂದಿದ್ದರೆ, ಮೂರನೆಯ ವ್ಯಕ್ತಿ ಅವರಿಗೆ ಪರಾರಿಯಾಗಲು ನೆರವು ಒದಗಿಸಲು ಬೀದಿಯಲ್ಲಿ ಬೈಕ್ ನೊಂದಿಗೆ ಕಾದು ಕುಳಿತಿದ್ದ ಎಂದು ಹೇಳಿದ್ದಾರೆ.
"ಆರೋಪಿಗಳನ್ನು ಸೆರೆ ಹಿಡಿಯಲು ಹಲವಾರು ತಂಡಗಳನ್ನು ರಚಿಸಲಾಗಿದೆ. ಈ ಹಂತದಲ್ಲಿ ಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ನಾವು ಎಲ್ಲ ಸಾಧ್ಯತೆಗಳ ಕುರಿತು ತನಿಖೆ ನಡೆಸುತ್ತಿದ್ದು, ಪ್ರಕರಣದ ಕುರಿತು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ" ಎಂದು ದ್ವಾರಕಾ ಉಪ ಪೊಲೀಸ್ ಆಯುಕ್ತ ಎಂ.ಹರ್ಷವರ್ಧನ್ ತಿಳಿಸಿದ್ದಾರೆ.







