ವಿಚಾರಣಾಧೀನ ಕೈದಿಗಳ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ: ವಿಶೇಷ ನ್ಯಾಯಾಲಯ

ಮುಂಬೈ: ವಿಚಾರಣಾಧೀನ ಕೈದಿಗಳ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸುವುದು ಅವರ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಅಪಮಾನಕಾರಿಯೂ ಆಗಿದೆ ಎಂದು ಮುಂಬೈ ವಿಶೇಷ ನ್ಯಾಯಾಲಯವೊಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ವಿಚಾರಣಾಧೀನ ಕೈದಿಗಳ ತಪಾಸಣೆಯನ್ನು ವಿದ್ಯುನ್ಮಾನ ಶೋಧಕ ಹಾಗೂ ಗ್ಯಾಡ್ಜೆಟ್‌ಗಳನ್ನು ಮಾತ್ರ ಬಳಸಿ ಮಾಡಬೇಕು ಎಂದು ಅರ್ತೂರ್ ರಸ್ತೆ ಕಾರಾಗೃಹದ ಅಧೀಕ್ಷಕ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಿದೆ ಎಂದು timesofindia.com ವರದಿ ಮಾಡಿದೆ.
"ಇದಿಷ್ಟು ಮಾತ್ರವಲ್ಲದೆ ವಿಚಾರಣಾಧೀನ ಕೈದಿಯ ವಿರುದ್ಧ ಅಸಂಸದೀಯ ಅಥವಾ ಅಶ್ಲೀಲ ಭಾಷೆ ಬಳಸುವುದೂ ಕೂಡಾ ಅಪಮಾನಕಾರಿಯಾಗಿದೆ. ಹೀಗಾಗಿ ಅಧೀಕ್ಷಕರು ಹಾಗೂ ಸಂಬಂಧಿತ ಭದ್ರತಾ ಸಿಬ್ಬಂದಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕಿದೆ" ಎಂದು ವಿಶೇಷ ನ್ಯಾಯಾಧೀಶ ಬಿ.ಡಿ.ಶೆಲ್ಕೆ ಅಭಿಪ್ರಾಯ ಪಟ್ಟಿದ್ದಾರೆ.
1993ರ ಬಾಂಬೆ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿ ಮೂರನೆ ಹಂತದ ವಿಚಾರಣಾಧೀನ ಕೈದಿಯಾಗಿರುವ ಅಹ್ಮದ್ ಕಮಾಲ್ ಶೇಖ್ ಎಂಬ ಆರೋಪಿಯು, ನ್ಯಾಯಾಲಯದ ವಿಚಾರಣೆಯ ನಂತರ ಕಾರಾಗೃಹಕ್ಕೆ ವಾಪಸು ಕರೆ ತಂದಾಗ, ತನ್ನನ್ನು ಕಾರಾಗೃಹದ ಪ್ರವೇಶ ದ್ವಾರದ ಬಳಿ ಬೆತ್ತಲೆಯಾಗಿ ನಿಲ್ಲಿಸಲಾಗಿತ್ತು ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದನು.
ಇನ್ನಿತರನ ಹಲವು ಆರೋಪಿಗಳೂ ಇದೇ ಬಗೆಯ ದೂರು ನೀಡಿರುವುದರತ್ತ ನ್ಯಾಯಾಲಯವು ಬೊಟ್ಟು ಮಾಡಿತು.
"ಒಂದು ವೇಳೆ ವಿದ್ಯುನ್ಮಾನ ಶೋಧಕಗಳು ಲಭ್ಯವಿಲ್ಲದಿದ್ದರೆ ವಿಚಾರಣಾಧೀನ ಕೈದಿಗಳ ವೈಯಕ್ತಿಕ ಶೋಧವನ್ನು ದೈಹಿಕವಾಗಿ ನಡೆಸಬೇಕು. ಆದರೆ, ವಿಚಾರಣಾಧೀನ ಕೈದಿಗಳೊಂದಿಗೆ ಅನುಚಿತವಾಗಿ ವರ್ತಿಸಬಾರದು, ಅವರನ್ನು ಅಪಮಾನಿಸಬಾರದು, ಅವರನ್ನು ಬೆತ್ತಲೆ ಮಾಡಬಾರದು, ಅವರ ವಿರುದ್ಧ ಅವಾಚ್ಯ ಅಥವಾ ಅಸಂಸದೀಯ ಭಾಷೆಯನ್ನು ಬಳಸಬಾರದು" ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಫಿರ್ಯಾದುದಾರರ ಪರ ಸಾಕ್ಷಿಯಾಗಿ ಪರಿವರ್ತನೆಗೊಂಡಿದ್ದ ವಿಚಾರಣಾಧೀನ ಕೈದಿಯೊಬ್ಬರು ತನ್ನನ್ನು ಅರ್ತೂರು ರಸ್ತೆ ಕಾರಾಗೃಹದ ಅಧೀಕ್ಷಕರು ಹಾಗೂ ಭದ್ರತಾ ಸಿಬ್ಬಂದಿಗಳು ಬೆತ್ತಲೆಗೊಳಿಸಿ ತಪಾಸಣೆ ನಡೆಸಿದ್ದಾರೆ ಎಂದು ನ್ಯಾಯಾಲಯಕ್ಕೆ ನೀಡಿದ್ದ ದೂರಿನಲ್ಲಿ ಹುರುಳಿರುವುದನ್ನು ಕಳೆದ ಫೆಬ್ರವರಿಯಲ್ಲಿ ನ್ಯಾಯಾಲಯ ಪತ್ತೆ ಹಚ್ಚಿತ್ತು.