ಯುವತಿಯರನ್ನು ಅಪಹರಿಸುತ್ತೇನೆ ಎಂದಿದ್ದ ಬಿಜೆಪಿ ಶಾಸಕ ರಾಮ್ ಕದಂ ವಿರುದ್ಧದ ಅರ್ಜಿ ರದ್ದುಗೊಳಿಸಿದ ದೂರುದಾರ

ಮುಂಬೈ: 2018ರಲ್ಲಿ ಯುವತಿಯರನ್ನು ಅಪಹರಿಸುತ್ತೇನೆ ಎಂಬ ರಾಮ್ ಕದಮ್ ಹೇಳಿಕೆಯ ಕುರಿತು ತನಿಖೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಅರ್ಜಿದಾರರು ಹಿಂಪಡೆದಿದ್ದರಿಂದ ಬಾಂಬೆ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದೆ ಎಂದು indiatoday.in ವರದಿ ಮಾಡಿದೆ.
ಅರ್ಜಿದಾರರು ದೂರಿನ ಪ್ರತಿಯನ್ನು ಲಗತ್ತಿಸದೆ ಇರುವುದರ ವಿರುದ್ಧ ನ್ಯಾಯಾಲಯವು ತೀಕ್ಷ್ಣ ವಾಗ್ದಾಳಿ ನಡೆಸಿದ ನಂತರ ದೂರುದಾರರು ಅರ್ಜಿಯನ್ನು ವಾಪಸ್ ಪಡೆದರು. ಈ ಸಂದರ್ಭದಲ್ಲಿ ಅರ್ಜಿಗಳನ್ನು ಬೇಕಾಬಿಟ್ಟಿ ಸಲ್ಲಿಸಲು ಹಾಗೂ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅರ್ಜಿದಾರರಿಗೆ ಛೀಮಾರಿ ಹಾಕಿತು.
ನಾನು ಕದಮ್ ವಿರುದ್ಧ ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿ ಸುರೇಖಾ ಲಂಡ್ಗೆ ಎಂಬುವವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ಎ.ಎಸ್.ಗಡ್ಕರಿ ಹಾಗೂ ಪಿ.ಡಿ.ನಾಯಕ್ ಅವರನ್ನೊಳಗೊಂಡಿದ್ದ ದ್ವಿಸದಸ್ಯ ನ್ಯಾಯಪೀಠವು ಆಲಿಸುತ್ತಿತ್ತು. ಆದರೆ, ದೂರುದಾರರು ಅರ್ಜಿಯೊಂದಿಗೆ ಪೊಲೀಸರಿಗೆ ನೀಡಿದ್ದ ದೂರಿನ ಪ್ರತಿಯನ್ನು ಲಗತ್ತಿಸದೆ ಇರುವುದನ್ನು ಕಂಡು ನ್ಯಾಯಪೀಠವು ಅಚ್ಚರಿ ವ್ಯಕ್ತಪಡಿಸಿತು.
2018ರಲ್ಲಿ ನಡೆದಿದ್ದ ದಹಿ ಹಂದಿ ಉತ್ಸವದಲ್ಲಿ ನೆರೆದಿದ್ದ ಸಭಿಕರಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದ ರಾಮ್ ಕದಮ್, ಅವರು ನೆರವಿಗಾಗಿ ಯಾವಾಗ ಬೇಕಾದರೂ ನನಗೆ ಕರೆ ಮಾಡಬಹುದು ಎಂದು ಹೇಳಿದ್ದರು. ನಂತರ ಒಂದು ವೇಳೆ ಯಾರಾದರೂ ಯುವಕನೊಬ್ಬ ಯುವತಿಗೆ ಪ್ರೇಮನಿವೇದನೆ ಮಾಡಿ, ಆಕೆಯಿಂದ ತಿರಸ್ಕೃತಗೊಂಡರೆ, ನಾನು ಅಂತಹ ಯುವಕನ ಪೋಷಕರೊಂದಿಗೆ ಮಾತನಾಡುತ್ತೇನೆ. ಒಂದು ವೇಳೆ ಅವರು ವಿವಾಹಕ್ಕೆ ಸಹಮತ ವ್ಯಕ್ತಪಡಿಸಿದರೆ, ನಾನು ಅವರಿಗಾಗಿ ಯುವತಿಯನ್ನು ಅಪಹರಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.







