ನನಗೆ ಟಿಕೆಟ್ ನಿರಾಕರಿಸಿದರೆ ಬಿಜೆಪಿಗೆ 20-25 ಕ್ಷೇತ್ರ ನಷ್ಟವಾಗಬಹುದು: ಜಗದೀಶ್ ಶೆಟ್ಟರ್ ಎಚ್ಚರಿಕೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಬಿಜೆಪಿ (BJP) ಹೈಕಮಾಂಡ್ ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar), ತನಗೆ ಟಿಕೆಟ್ ನಿರಾಕರಿಸಿರುವುದರಿಂದ ಬಿಜೆಪಿಗೆ ಕನಿಷ್ಠ 20 ರಿಂದ 25 ಕ್ಷೇತ್ರಗಳಲ್ಲಿ ನಷ್ಟವಾಗಲಿದೆ ಎಂದು ಹೇಳಿದ್ದಾರೆ ಎಂದು PTI ವರದಿ ಮಾಡಿದೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಟಿಕೆಟ್ ಕುರಿತ ಪಕ್ಷದ ನಿರ್ಧಾರಕ್ಕೆ ಸಂಬಂಧಿಸಿದಂತೆ ಭಾನುವಾರದ ತನಕ ಕಾಯುವುದಾಗಿ ಹೇಳಿದರಲ್ಲದೆ ನಂತರ ತಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೇರಿದಂತೆ 12 ಕ್ಷೇತ್ರಗಳಿಗೆ ಬಿಜೆಪಿ ಇನ್ನಷ್ಟೇ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.
"ಶೆಟ್ಟರ್‌ಗೆ ಟಿಕೆಟ್ ದೊರೆಯದೇ ಇದ್ದರೆ ಅದು ಒಂದು ಸ್ಥಳ ಮಾತ್ರವಲ್ಲ ಉತ್ತರ ಕರ್ನಾಟಕದ ಕನಿಷ್ಠ 20-25 ಸ್ಥಾನಗಳ ಮೇಲೆ ತಕ್ಷಣ ಪರಿಣಾಮ ಬೀರಲಿದೆ ಎಂದು ಮಾಜಿ ಸೀಎಂ ಯಡಿಯೂರಪ್ಪ ಕೂಡ ಹೇಳಿದ್ದಾರೆ," ಎಂದು ಶೆಟ್ಟರ್ ಹೇಳಿದರು.
ತಮಗೆ ಟಿಕೆಟ್ ನಿರಾಕರಣೆ ವಿರೋಧಿಸಿ ಹುಬ್ಬಳ್ಳಿ-ಧಾರವಾಡ ಮುನಿಸಿಪಲ್ ಕಾರ್ಪೊರೇಷನ್‌ನ ಕೆಲ ಕೌನ್ಸಿಲರ್‌ಗಳು ರಾಜೀನಾಮೆ ನೀಡಲು ಮುಂದೆ ಬಂದಿರುವುದನ್ನು ಉಲ್ಲೇಖಿಸಿದ ಶೆಟ್ಟರ್, ಅವರ ಅಭಿಮಾನಕ್ಕೆ ಅಭಾರಿ ಎಂದರು.
ಯುವ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತಾಗಲು ಕಣದಿಂದ ಹಿಂದೆ ಸರಿಯುವಂತೆ ಪಕ್ಷದ ಹಿರಿಯ ಪದಾಧಿಕಾರಿಯೊಬ್ಬರು ತಮಗೆ ದಿಲ್ಲಿಯಿಂದ ಕರೆ ಮಾಡಿ ತಿಳಿಸಿದ್ದರೆಂದು ಎಪ್ರಿಲ್ 11ರಂದು ಶೆಟ್ಟರ್ ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ನ ಒಟ್ಟು 209 ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ 12 ಮಂದಿ ಮುಸ್ಲಿಮರಿಗೆ ಟಿಕೆಟ್







