ಆಧುನಿಕ ಮನು ಎಂಬುದು ಅಂಬೇಡ್ಕರ್‌ಗೆ ಅವಮಾನ ಮಾಡಿದಂತೆ: ಡಾ.ಮಹಾಬಲೇಶ್ವರ್

ಉಡುಪಿ : ವರ್ಣಾಶ್ರಮ ಧರ್ಮ, ಜಾತೀಯ ತಾರತಮ್ಯ ಹಾಗೂ ಮಾನವರಲ್ಲಿ ಮೇಲು-ಕೀಳು ಎಣಿಸುವ ಮನುಸ್ಮೃತಿಯನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಾವಿರಾರು ಅನುಯಾಯಿಗಳ ಸಮಕ್ಷಮದಲ್ಲಿ ಬೆಂಕಿಗೆ ಹಾಕಿ ಸುಟ್ಟಿರುವಾಗ ಅವರನ್ನು ‘ಆಧುನಿಕ ಮನು’ ಎಂದು ಸಂಬೋಧಿಸುವುದು ಅವರಿಗೆ ಅವಮಾನಕರ. ಅಂಬೇಡ್ಕರ್ ದಲಿತ ಸೂರ್ಯ ನಷ್ಟೇ ಅಲ್ಲ, ಜಗತ್ತಿನ ಎಲ್ಲ ಶೋಷಿತರ ಸೂರ್ಯ ಎಂದು ಹಿರಿಯ ಶಿಕ್ಷಣ ತಜ್ಞ ಹಾಗೂ ಡಾ.ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ನುಡಿದಿದ್ದಾರೆ.
ಉಡುಪಿ ಕುಂಜಿಬೆಟ್ಟಿನ ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸ ಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರಶಾಂತ ನೀಲಾವರ, ಭಾರತದ ಸಂವಿಧಾನದಲ್ಲಿ ಗಾಂಧಿಯವರ ರಾಮರಾಜ್ಯದ ಕಲ್ಪನೆ, ಪಟೇಲರ ರಾಷ್ಟ್ರದ ಅಖಂಡತೆಯ ಕಲ್ಪನೆ, ನೆಹರೂ ಅವರ ಮತನಿರ ಪೇಕ್ಷತೆ ಹಾಗೂ ಸಮಾಜವಾದಿ ದೃಷ್ಟಿ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಹಾಗೂ ಸರ್ವ ಸಮಾನತೆಯ ಕಲ್ಪನೆ ಸಮಾನವಾಗಿ ಎರಕಗೊಂಡಿವೆ. ಭಾರತದ ಸುದೀರ್ಘವಾದ ಪ್ರಜಾಪ್ರಭುತ್ವ ವಾದಿ ಚರಿತ್ರೆಗೆ ಅಂಬೇಡ್ಕರ್ ರೂಪಿಸಿದ ಸಂವಿಧಾನವೇ ಕಾರಣ ಎಂದರು.
ಸಾಗರ್ ಅತಿಥಿಗಳನ್ನು ಪರಿಚಯಿಸಿದರೆ, ಲತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.