ಉಡುಪಿ: ಪ್ರಾಚಿ ಫೌಂಡೇಶನ್‌ನಿಂದ ಬಿಸು ಸಂಭ್ರಮ

ಉಡುಪಿ: ಪರಿಸರ ಸ್ನೇಹಿ ಬದುಕು ನಮ್ಮದಾಗಬೇಕು. ಸರಳ ಜೀವನವನ್ನು ಪ್ರಕೃತಿಗೆ ಹತ್ತಿರವಾಗಿ ನಡೆಸಿದರೆ ಹೆಚ್ಚು ನೆಮ್ಮದಿ ಕಾಣಲು ಸಾಧ್ಯವಿದೆ ಎಂದು ಅದಮಾರು ಮಠದ ಯತಿ ಶ್ರೀಈಶಪ್ರಿಯತೀರ್ಥರು ಹೇಳಿದ್ದಾರೆ.
ಉಡುಪಿಯ ಪ್ರಾಚಿ ಫೌಂಡೇಶನ್, ಆನಂದ ತುಳಸೀವನ ಟ್ರಸ್ಟ್ ಹಾಗೂ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ‘ಬಿಸು ಸಂಭ್ರಮ’ ನಮ್ಮೂರ ಕರಕುಶಲ ಕಲೆಗಳ ಮೇಳ, ಪ್ರಾತ್ಯಕ್ಷಿಕೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬದುಕಿನಲ್ಲಿ ಓದಿ, ಆರಾಮವಾಗಿರಬೇಕೆನ್ನುವ ಮನೋಧರ್ಮದ ಹೆತ್ತವರು ಹಾಗೂ ಮಕ್ಕಳ ಮನೋಭಾವ ದಾಚೆಗೂ ಒಂದು ಬದುಕಿದೆ ಎಂಬುದನ್ನು ಅರಿತುಕೊಳ್ಳಬೇಕು. ಸ್ಥಳೀಯ ಕಲೆಯ ಉಳಿವು, ಇಲ್ಲೇ ಜೀವನೋಪಾಯ, ಸ್ಥಳೀಯ ಉತ್ಪನ್ನ ಬಳಕೆಯ ಸಂಕಲ್ಪ ಕೈಗೊಂಡು ನಮ್ಮತನ ಉಳಿಸೋಣ ಎಂದರು.
ಯುಗಾದಿ ಪುರಸ್ಕಾರ: ಕಾರ್ಕಳ ಕೆರ್ವಾಶೆಯ ಕಡಗೋಲು ತಯಾರಕ ಸದಾನಂದ ಗುಡಿಗಾರ್, ಮಡಕೆ ತಯಾರಿಸುವ ವರಂಗದ ಲೀಲಾ ಹಾಗೂ ಕಿಟ್ಟಣ್ಣ, ಕಾಸರಗೋಡು ಕೂಡ್ಲಿನ ಮದ್ದಳೆ ತಯಾರಕರಾದ ಕಾಸರಗೋಡು ವೆಂಕಟರಮಣ ಹಾಗೂ ರಾಜೀವಿ ದಂಪತಿಗೆ ಯುಗಾದಿ ಪುರಸ್ಕಾರವನ್ನು ಕೈಮಗ್ಗ ಶಾಲು, ಸಾವಯವ ತರಕಾರಿ ಸಹಿತವಾಗಿ ಪ್ರದಾನ ಮಾಡಿ ಗೌರವಿಸಲಾಯಿತು.
ಸೆಲ್ಕೋ ಹಾಗೂ ಬಿವಿಟಿ ಸಂಸ್ಥೆಯ ಉಸ್ತುವಾರಿ ಜಗದೀಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮಾತನಾಡಿದರು. ಪೂರ್ಣಪ್ರಜ್ಞೆ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎ. ಪಿ. ಭಟ್ ಉಪಸ್ಥಿತರಿದ್ದರು.
ಅಕ್ಷತಾ, ಪ್ರಿಯಾ ಪ್ರಾರ್ಥಿಸಿದರೆ, ಪ್ರಾಚಿ ಸಂಸ್ಥೆಯ ರೂವಾರಿ ಕಲಾವಿದ ಪುರುಷೋತ್ತಮ ಅಡ್ವೆ ಪ್ರಾಸ್ತಾವಿಕ ಮಾತನ್ನಾಡಿದರು. ಮಂಜುನಾಥ ಕಾಮತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕರಕುಶಲ ವಸ್ತುಗಳ ಪ್ರದರ್ಶನ: ಕುಂದಾಪುರದ ಚಂದ್ರಶೇಖರ ಕುಂಬಾರ ತಯಾರಿಸಿದ ಮಣ್ಣಿನ ಟೀ/ಜ್ಯೂಸ್ ಕಪ್, ಮೊಸರು/ನೀರ ಮಡಕೆ, ಬೌಲ್ಸ್, ಕಿನ್ನಿಗೋಳಿಯ ಜಾದೂಗಾರ ಲೋಲಾಕ್ಷ ಗೆರಟೆಯಿಂದ ಮಾಡಿದ ಹೂ, ಚಿಟ್ಟೆ, ದೀಪ, ಕೊಕ್ಕರೆ, ಅಲ್ಲಾವುದ್ದೀನ್ ದೀಪ, ಜಿಂಕೆ, ಆಮೆ, ಬೆಡ್‌ಲ್ಯಾಂಪ್, ಸೈಕಲ್, ಸ್ಕೂಟರ್, ಮದ್ದಳೆ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಉಡುಪಿ ಕೈಮಗ್ಗ ಸೀರೆ, ಪಳ್ಳಿ ಅಚ್ಯುತ ಆಚಾರ್ಯ ತಯಾರಿಸಿದ ವಿವಿಧ ಮರದ ಸಾಮಗ್ರಿಗಳಾದ ಲಟ್ಟಣಿಗೆ, ಕಳಸೆ, ಮರಿಗೆ, ಸೇರನ್ನೂ ಜನ ಕುತೂಹಲದಿಂದ ವಿಚಾರಿಸಿದರು. ನರಸಿಂಹ ಹರಿಖಂಡಿಗೆ ತೆಂಗಿನಗರಿಯ ಹ್ಯಾಟು, ಹೂವಿ ರಚಿಸಿದರು. ಜೊಂಡು ಹುಲ್ಲಿನ ಬ್ಯಾಗ್, ಟ್ರೇ, ದೈವದ ಮುಖವಾಡಗಳು, ನಾನಾ ಗಾತ್ರದ ಬುಟ್ಟಿಗಳ ಪ್ರದರ್ಶನದಲ್ಲಿದ್ದವು.



