ನ್ಯಾಯವಾದಿಗಳು ನ್ಯಾಯಾಂಗ ವ್ಯವಸ್ಥೆಯ ಸೈನಿಕರಿದ್ದಂತೆ: ನ್ಯಾ.ಮೂ.ಬಿ.ವೀರಪ್ಪ
ಉಡುಪಿ: ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ನಮ್ಮ ನ್ಯಾಯಾಂಗ ವ್ಯವಸ್ಥೆಯ ಸೈನಿಕರಿದ್ದಂತೆ. ನ್ಯಾಯಾಂಗ ಇಲ್ಲದೇ ಹೋಗುತ್ತಿದ್ದರೆ ದೇಶದ ಸ್ಥಿತಿ ಅಧೋಗತಿಯತ್ತ ಸಾಗುತ್ತಿತ್ತು. ಈ ನಿಟ್ಟಿನಲ್ಲಿ ಸಮಾಜದಲ್ಲಿ ನ್ಯಾಯಾಂಗದ ಜವಾಬ್ದಾರಿ ಹೆಚ್ಚಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ಮೂ. ಬಿ.ವೀರಪ್ಪ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ಈ ಹಿಂದೆ ಉಡುಪಿಯಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ಹಿರಿಯ ನ್ಯಾಯ ಮೂರ್ತಿಗಳಿಬ್ಬರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಪ್ರಕರಣಗಳ ವಿಚಾರಣೆ ನಡೆಯುವ ಸಂದರ್ಭದಲ್ಲಿ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ನಡುವೆ ನಡೆಯು ವುದು ಘರ್ಷಣೆಯಲ್ಲ. ಅದೊಂದು ತರ್ಕ. ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದು ನ್ಯಾಯಸಮ್ಮತವಾಗಿರುವ ಆದೇಶ ನೀಡಬೇಕಾದುದು ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದವರು ನುಡಿದರು.
ಸನ್ಮಾನ: ನ್ಯಾಯಮೂರ್ತಿಗಳಾದ ರಾಮಚಂದ್ರ ಡಿ. ಹುದ್ದಾರ್ ಹಾಗೂ ನ್ಯಾ.ವೆಂಕಟೇಶ ನಾಯ್ಕ್ ಟಿ. ಇವರನ್ನು ಉಡುಪಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.
ಹಿಮಾಚಲ ಪ್ರದೇಶ ಹೈಕೋರ್ಟ್ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ, ರಾಜ್ಯ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈ ಶಂಕರ್ ಉಪಸ್ಥಿತರಿದ್ದರು.
ಹಿರಿಯ ವಕೀಲ ಮಧುಕರ ಶೆಣೈ, ವಕೀಲರಾದ ಮೇಘನಾ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಹಿರಿಯ ನ್ಯಾಯವಾದಿ ಎನ್.ಕೆ.ಆಚಾರ್ಯ ಶುಭಾಶಂಸನೆಗೈದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿ, ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.