ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತಿಗೆ ಪೂರ್ವಾನುಮತಿ ಕಡ್ಡಾಯ: ಉಡುಪಿ ಡಿಸಿ ಕೂರ್ಮಾರಾವ್

ಉಡುಪಿ, ಎ.15: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತುಗಳನ್ನು ಪ್ರದರ್ಶಿಸಲು ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ಪ್ರಚಾರಪಡಿಸಲು ಪೂವಾನುಮತಿ ಪಡೆಯುವ ಕುರಿತ ಕಾರ್ಯಗಾರದಲ್ಲಿ ಅವರು ಮಾತನಾಡುತಿದ್ದರು.
ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸುವ ಆಭ್ಯರ್ಥಿಗಳು ಚುನಾವಣಾ ಜಾಹಿರಾತುಗಳನ್ನು ಪ್ರಚಾರ ಮಾಡುವ ಮುನ್ನ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಾಮಾಣೀಕರಣ ಪಡೆದು ಪ್ರದರ್ಶಿಸಬೇಕು ಎಂದರು.
ಜಾಹಿರಾತಿನಲ್ಲಿ ಇತರರಿಗೆ ದೂರುವುದು, ಅಸ್ಪಷ್ಟ ಅಥವಾ ಮಾನ ಹಾನಿಕರ, ಹಿಂಸೆ ಪ್ರಚೋದನೆ, ನ್ಯಾಯಾಲಯ ನಿಂದನೆ, ರಾಷ್ಟ್ರದ ಏಕತೆ ಸಾರ್ವಭೌಮತ್ವಕ್ಕೆ ವಿರುದ್ಧವಾದ ಹೇಳಿಕೆ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಚಿತ್ರಣ, ದೇಶದ ಸೇನಾಪಡೆಯ ಹಾಗೂ ಸೇನಾ ವ್ಯಕ್ತಿಗಳ ಚಿತ್ರ ಮತ್ತಿತರ ನಿರ್ಬಂಧಿತ ವಿಷಯಗಳನ್ನು ಒಳಗೊಂಡಿರಬಾರದು ಎಂದರು.
ಕಾರ್ಯಗಾರದಲ್ಲಿ ತರಬೇತಿ ನೀಡಿದ ಮಾಸ್ಟರ್ ಟ್ರೈನರ್ ಡಾ.ಅಶೋಕ್ ಕಾಮತ್ ಮಾತನಾಡಿ, ಅರ್ಜಿ ಸಲ್ಲಿಸುವವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯ ಜೊತೆಯಲ್ಲಿ ಜಾಹಿರಾತು ಒಳಗೊಂಡ ಸಿಡಿಯ ಎರಡು ಪ್ರತಿ, ಅದರಲ್ಲಿನ ಧ್ವನಿ ಮುದ್ರಣದ ದೃಢೀಕರಣ ಪ್ರಮಾಣಪತ್ರ,ಜಾಹಿರಾತು ವಿಷಯದ ಶೀರ್ಷಿಕೆಗಳನ್ನು ಒಳಗೊಂಡಿರಬೇಕು ಎಂದರು.
ಅರ್ಜಿ ಸಲ್ಲಿಸುವವರು ಅಭ್ಯರ್ಥಿಯಾದಲ್ಲಿ ಅದನ್ನು ಪ್ರಚಾರಪಡಿಸುವ 3 ದಿನಗಳ ಮೊದಲೇ ಸಲ್ಲಿಸಿ ಪೂರ್ವಾನುಮತಿ ಪಡೆಯಬೇಕು ಎಂದ ಅವರು ಅದರ ತಯಾರಿಕೆಗೆ ತಗಲುವ ವೆಚ್ಚ, ಮಾಧ್ಯಮಗಳಲ್ಲಿ ಪ್ರಚಾರಪಡಿಸಲು ತಗಲುವ ವೆಚ್ಚವನ್ನು ಚೆಕ್ ಮೂಲಕ ಪಾವತಿಸಿದ ವಿವರಗಳನ್ನು ನಮೂದಿಸಬೇಕು ಎಂದವರು ವಿವರಿಸಿದರು.
ಮಾಧ್ಯಮಗಳಲ್ಲಿ ಜಾಹಿರಾತುಗಳನ್ನು ಪ್ರಚಾರಪಡಿಸುವುದು ಸೇರಿದಂತೆ ಚಿತ್ರಣ ತಯಾರಿಕೆಯ ವೆಚ್ಚಗಳನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಭರಿಸಲಾಗುವುದು. ಅಭ್ಯರ್ಥಿಯ ಪರವಾಗಿ ಯಾವುದೇ 3ನೇ ವ್ಯಕ್ತಿಗಳು ಜಾಹಿರಾತು ಪೂರ್ವ ಪ್ರಮಾಣೀಕರಣ ಅನುಮತಿ ಕೋರಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಮಾನ್ಯತೆ ಮಾಡುವುದಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಅಭಿಷೇಕ್ ರಂಜನ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.