ಲೋಕಸಭಾ ಚುನಾವಣೆ ಗೆಲ್ಲಲು ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಸಂಘಟಿಸಲಾಯಿತೇ?: ಸಂಜಯ್ ರಾವುತ್ ಪ್ರಶ್ನೆ
"ಮೋದಿ ಸರಕಾರದ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಬೇಕು"

ಪುಣೆ, ಎ. 15: 2019ರ ಲೋಕಸಭಾ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಸಂಘಟಿಸಲಾಯಿತೇ ಎಂದು ಪ್ರಶ್ನಿಸಿರುವ ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರಕಾರದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಪುಲ್ವಾಮ ಭಯೋತ್ಪಾದಕ ದಾಳಿಗೆ ಕಾರಣವಾದ ಲೋಪದೋಷಗಳ ಬಗ್ಗೆ ಮಾತನಾಡಬಾರದು ಎಂಬುದಾಗಿ ಪ್ರಧಾನಿ ಮೋದಿ ತನಗೆ ಸೂಚಿಸಿದ್ದರು ಎಂಬುದಾಗಿ ಸಂದರ್ಶನವೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ ಬಳಿಕ ರಾವುತ್ ಈ ಹೇಳಿಕೆ ನೀಡಿದ್ದಾರೆ.
2019ರ ಫೆಬ್ರವರಿಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸಿಆರ್ಪಿಎಫ್ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್ಸೊಂದಕ್ಕೆ ಆತ್ಮಹತ್ಯಾ ಬಾಂಬರ್ ಒಬ್ಬನು ಸ್ಫೋಟಕಗಳು ತುಂಬಿದ್ದ ಕಾರೊಂದನ್ನು ಢಿಕ್ಕಿ ಹೊಡೆಸಿದಾಗ 40 ಮಂದಿ ಮೃತಪಟ್ಟಿದ್ದಾರೆ.
ತನ್ನ ಸಿಬ್ಬಂದಿಯನ್ನು ಸಾಗಿಸುವುದಕ್ಕೆ ವಿಮಾನ ಒದಗಿಸಬೇಕೆಂದು ಸಿಆರ್ಪಿಎಫ್ ಕೇಳಿತ್ತು ಎಂದು ಶುಕ್ರವಾರ ನೀಡಿದ ಸಂದರ್ಶನದಲ್ಲಿ ಮಲಿಕ್ ಹೇಳಿದ್ದರು. ಯಾಕೆಂದರೆ, ಇಷ್ಟೊಂದು ದೊಡ್ಡ ವಾಹನಗಳ ಸಾಲು (2,500 ಸಿಬ್ಬಂದಿಯನ್ನು ಹೊತ್ತ 78 ವಾಹನಗಳು) ರಸ್ತೆ ಮೂಲಕ ಸಾಗುವುದು ಸಾಧ್ಯವಿಲ್ಲ ಎಂಬುದಾಗಿ ಸಿಆರ್ಪಿಎಫ್ ಮುಖ್ಯಸ್ಥರು ಸರಕಾರಕ್ಕೆ ಹೇಳಿದ್ದರು ಎಂದು ಅವರು ಹೇಳಿದ್ದರು.
ಶನಿವಾರ ನಾಗಪುರದಲ್ಲಿ ಮಾತನಾಡಿದ ರಾವುತ್, ಮಾಜಿ ರಾಜ್ಯಪಾಲ ಮಲಿಕ್ ‘‘ಪುಲ್ವಾಮಕ್ಕೆ ಸಂಬಂಧಿಸಿದ ಸ್ಫೋಟಕ ಸತ್ಯ’’ವನ್ನು ಹೊರತಂದಿದ್ದಾರೆ ಎಂದು ಹೇಳಿದರು. ದಾಳಿ ನಡೆದ ಸ್ವಲ್ಪವೇ ಹೊತ್ತಿನ ಬಳಿಕ ಪ್ರತಿಪಕ್ಷಗಳು ಇದೇ ಪ್ರಶ್ನೆಗಳನ್ನು ಕೇಳಿದ್ದವು, ಆದರೆ, ‘‘ದೇಶದ್ರೋಹಿಗಳು’’ ಮತ್ತು ‘‘ಪಾಕಿಸ್ತಾನ ಮಾತನಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ’’ ಎಂದು ಹೇಳುವ ಮೂಲಕ ಆಡಳಿತಾರೂಢ ಬಿಜೆಪಿಯು ಅವುಗಳ ಬಾಯಿ ಮುಚ್ಚಿಸಿದ್ದವು ಎಂದು ಅವರು ಹೇಳಿದರು.
‘‘ಚುನಾವಣೆ ಗೆಲ್ಲಲು 40 ಸೈನಿಕರನ್ನು ಕೊಲ್ಲುವ ಸಂಚು ಹೂಡಲಾಗಿತ್ತೇ?’’
‘‘ಸತ್ಯಪಾಲ್ ಮಲಿಕ್ ಸ್ಫೋಟಕ ಸತ್ಯವನ್ನು ಹೊರಗೆಡವಿದ್ದಾರೆ. ಈ ಸತ್ಯವು ಸ್ವತಃ ಪುಲ್ವಾಮ ಸ್ಫೋಟಕ್ಕಿಂತಲೂ ಹೆಚ್ಚು ಸ್ಫೋಟಕವಾಗಿದೆ. ಆದರೆ ಇದು ಹೊಸತೇನಲ್ಲ. ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಯಾವುದಾದರೂ ಒಂದು ಭಾರತ-ಪಾಕಿಸ್ತಾನ ಘಟನೆಯನ್ನು ಸೃಷ್ಟಿಸಲಾಗುತ್ತದೆ ಎನ್ನುವುದು ಜನರಿಗೆ ಗೊತ್ತಿತ್ತು.
ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಭಯೋತ್ಪಾದಕ ದಾಳಿಯನ್ನು ಸೃಷ್ಟಿಸಲಾಯಿತೇ? ರಾಜಕೀಯ ಲಾಭಕ್ಕಾಗಿ 40 ಸೈನಿಕರನ್ನು ಕೊಲ್ಲುವ ಸಂಚು ಹೂಡಲಾಗಿತ್ತೇ? ನಾವು ಪ್ರತಿಪಕ್ಷಗಳು ಆ ಸಮಯದಲ್ಲಿ ಇಂಥ ಪ್ರಶ್ನೆಗಳನ್ನು ಕೇಳಲು ಪದೇ ಪದೇ ಪ್ರಯತ್ನಿಸಿದೆವು. ಆದರೆ, ನಮ್ಮನ್ನು ‘ದೇಶದ್ರೋಹಿ’ಗಳು ಎಂದು ಬಣ್ಣಿಸುವ ಮೂಲಕ ಆಡಳಿತಾರೂಢ ಪಕ್ಷವು ನಮ್ಮ ಬಾಯಿ ಮುಚ್ಚಿಸಿತು’’ ಎಂದು ರಾಜ್ಯಸಭಾ ಸದಸ್ಯ ರಾವುತ್ ಹೇಳಿದರು.
ಅಷ್ಟೊಂದು ಬಿಗಿ ಭದ್ರತೆಯ ಹೊರತಾಗಿಯೂ ಪುಲ್ವಾಮಕ್ಕೆ ಅಷ್ಟೊಂದು ಪ್ರಮಾಣದಲ್ಲಿ ಆರ್ಡಿಎಕ್ಸ್ ಸ್ಫೋಟಕ ಹೇಗೆ ತಲುಪಿತು ಎಂದು ಅವರು ಪ್ರಶ್ನಿಸಿದರು.
‘‘ಪುಲ್ವಾಮದಲ್ಲಿ ಭದ್ರತಾ ಸಿಬ್ಬಂದಿ ರಸ್ತೆಯ ಮೂಲಕ ಯಾವತ್ತೂ ಪ್ರಯಾಣಿಸುವುದಿಲ್ಲ’’
‘‘ಭದ್ರತಾ ಸಿಬ್ಬಂದಿ ಪುಲ್ವಾಮದಲ್ಲಿ ರಸ್ತೆಯ ಮೂಲಕ ಯಾವತ್ತೂ ಪ್ರಯಾಣಿಸುವುದಿಲ್ಲ. ಹೀಗಿರುವಾಗ, ಸಿಆರ್ಪಿಎಫ್ ಸೈನಿಕರ ವಾಹನಗಳಿಗೆ ಯುದ್ಧ ವಿಮಾನಗಳ ಬೆಂಬಲವನ್ನು ಸರಕಾರ ಮತ್ತು ವಾಯುಪಡೆ ಯಾಕೆ ನೀಡಲಿಲ್ಲ?’’ ಎಂದು ರಾವುತ್ ಪ್ರಶ್ನಿಸಿದರು.
ಪುಲ್ವಾಮ ಭಯೋತ್ಪಾದನೆ ದಾಳಿಗಾಗಿ ಮೋದಿ ಸರಕಾರದ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸುವುದು ಮಾತ್ರವಲ್ಲ, ಇದಕ್ಕೆ ಜವಾಬ್ದಾರರಾದ ಸಚಿವರನ್ನು ಸೇನಾ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಬೇಕು ಎಂಬುದಾಗಿಯೂ ರಾವುತ್ ಆಗ್ರಹಿಸಿದ್ದಾರೆ.







