ಸಿಬಿಐ, ಈ.ಡಿ.ಯಿಂದ ಸಿಸೋಡಿಯಾ ವಿರುದ್ಧ ಸುಳ್ಳು ಅಫಿಡವಿಟ್: ಕೇಜ್ರಿವಾಲ್

ಹೊಸದಿಲ್ಲಿ,ಎ.14: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಈ.ಡಿ.) ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸುಳ್ಳು ಅಫಿಡವಿಟ್ ಗಳನ್ನು ಸಲ್ಲಿಸಿವೆಯೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ.
‘ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಾಧಾರಗಳನ್ನು ಹಾಜರುಪಡಿಸಿದ್ದಕ್ಕಾಗಿ ಸಿಬಿಐ ಹಾಗೂ ಇ.ಡಿ.ಅಧಿಕಾರಿಗಳ ವಿರುದ್ಧ ನಾವು ಸೂಕ್ತ ಪ್ರಕರಣಗಳನ್ನು ದಾಖಲಿಸಲಿದ್ದೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಿಸೋಡಿಯಾ ವಿರುದ್ಧ ಸಾಕ್ಷಿ ನುಡಿಯುವಂತೆ ಕೇಂದ್ರೀಯ ಏಜೆನ್ಸಿಗಳು ಹಲವಾರು ಮಂದಿಗೆ ಕಿರುಕುಳ ನೀಡುತ್ತಿವೆ ಎಂದವರು ಆಪಾದಿಸಿದ್ದಾರೆ. ಈಗ ರದ್ದುಗೊಂಡಿರುವ ದಿಲ್ಲಿ ಸರಕಾರದ ಮದ್ಯ ನೀತಿಯಲ್ಲಿ ನಡೆದಿವೆಯೆನ್ನಲಾದ ಆಕ್ರಮಗಳಿಗೆ ಸಂಬಂಧಿಸಿ ತನಗೆ ಸಿಬಿಐ ಸಮನ್ಸ್ ನೀಡಿದ ಮರುದಿನವೇ ಕೇಜ್ರಿವಾಲ್ ಈ ಟ್ವೀಟ್ ಮಾಡಿದ್ದಾರೆ.
ತನಗೆ ನೀಡಲಾದ ಸಮನ್ಸ್ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಅವರು ‘‘ ಒಂದು ವೇಳೆ ಕೇಜ್ರಿವಾಲ್ ಭ್ರಷ್ಟಾಚಾರಿ ಆಗಿದ್ದಲ್ಲಿ, ಈ ಭೂಮಿಯಲ್ಲಿ ಒಬ್ಬನೇ ಒಬ್ಬ ಪ್ರಾಮಾಣಿಕ ವ್ಯಕ್ತಿಯಿರಲಾರ.ಆದರೆ ಭ್ರಷ್ಟಾಚಾರವೆಂಬುದು ಇಲ್ಲಿ ವಿಷಯವೇ ಅಲ್ಲ. ಪ್ರಧಾನಿಯವರು ಭ್ರಷ್ಟಾಚಾರವನ್ನು ನಖಶಿಖಾಂತ ಮರೆಮಾಚಿದ್ದಾರೆ. ಹೀಗಿರುವಾಗ ಭ್ರಷ್ಟಾಚಾರವು ಅವರಿಗೆ ಒಂದು ವಿಷಯವಾಗಲು ಹೇಗೆ ಸಾಧ್ಯ ’ ಎಂದವರು ಪ್ರಶ್ನಿಸಿದ್ದಾರೆ.
ದಿಲ್ಲಿ ಮುಖ್ಯಮಂತ್ರಿಯವರು ಎಪ್ರಿಲ್ 16ರಂದು ಸಿಬಿಐ ಮುಂದೆ ಹಾಜರಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷವು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್ ಆದಾನಿ ನಡುವೆ ಇರುವ ನಂಟಿನ ಕುರಿತು ದಿಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ್ದಕ್ಕಾಗಿ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್ ನೀಡಿರುವುದಾಗಿ ಅದು ಆಪಾದಿಸಿದೆ.
ಸಿಸೋಡಿಯಾ ಅವರು ಅಮಾಯಕರಾಗಿದ್ದು ಅವರ ವಿರುದ್ಧ ಸಿಬಿಐ ಕ್ರಮ ಕೈಗೊಂಡಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕೊಳಕು ರಾಜಕೀಯದ ಭಾಗವಾಗಿದೆ ಭಾಗವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಹಗರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಮರೆಮಾಚುವ ಸಲುವಾಗಿ ಸಿಸೋಡಿಯಾ ಅವರು 14 ಮೊಬೈಲ್ಫೋನ್ಗಳನ್ನು ನಾಶಪಡಿಸಿದ್ದಾರೆಂದುಸಿಬಿಐ ಸುಳ್ಳು ಆರೋಪ ಹೊರಿಸಿದೆ. ಆದರೆ ಈ ಮೊಬೈಲ್ಗಳ ಪೈಕಿ ನಾಲ್ಕು ಇ.ಡಿ. ಜೊತೆಗಿದೆ. ಉಳಿದವು ಸಕ್ರಿಯವಾಗಿದೆ ಹಾಗೂ ಬಳಕೆಯಲ್ಲಿವೆ ಎಂದು ಕೇಜ್ರಿವಾಲ್ ಹೇಳಿದರು. ಹಲವಾರು ತಿಂಗಳುಗಳ ತನಿಖೆಯನ್ನು ನಡೆಸಿದ ಹೊರತಾಗಿಯೂ ನಡೆದಿದೆಯೆನ್ನಲಾದ ಹಗರಣಕ್ಕೆ ಸಂಬಂಧಿಸಿ ಯಾವುದೇ ಹಣವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ತಿಳಿಸಿದರು.
ದಾಳಿಯಲ್ಲಿ ಏನೂ ಪತ್ತೆಯಾಗದೆ ಇದ್ದಾಗ ಅಕ್ರಮಣ ಹಣವನ್ನು ಆಪ್ ಪಕ್ಷದ ಗೋವಾ ಚುನಾವಣಾ ಪ್ರಚಾರಕ್ಕೆ ವ್ಯಯಿಸಲಾಗಿದೆ ಎಂದು ಆರೋಪಿಸಲಾಯಿತು. ಚುನಾವಣಾ ಪ್ರಚಾರದ ಎಲ್ಲಾ ವೆಚ್ಚಗಳನ್ನು ಚೆಕ್ಗಳ ಮೂಲಕ ಮಾಡಲಾಗಿದೆ. ನಮಗೆ ದೊರೆತಿದೆಯೆಂದು ಹೇಳಲಾದ 100 ಕೋಟಿ ರೂ.ನ ಒಂದೇ ಒಂದು ರೂಪಾಯಿಯಿಯನ್ನು ತೋರಿಸಿ ಎಂದು ಕೇಜ್ರಿವಾಲ್ ಸಿಬಿಐಗೆ ಸವಾಲೆಸೆದಿದ್ದಾರೆ.
2021ಲ್ಲಿ ದಿಲ್ಲಿ ಸರಕಾರವು ಜಾರಿಗೊಳಿಸಿದ ಮದ್ಯ ನೀತಿಯಡಿ, ಓಪನ್ ಬಿಡ್ಡಿಂಗ್ ಮೂಲಕ 849 ಮದ್ಯದಂಗಡಿಗಳ ಪರವಾನಿಗೆಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿತ್ತು. ಇದಕ್ಕೂ ಮೊದಲು ನಾಲ್ಕು ಸರಕಾರಿ ನಿಗಮ 475 ಮದ್ಯದ ಅಂಗಡಿಗಳನ್ನು ಹಾಗೂ ಉಳಿದ 389 ಅನ್ನು ಖಾಸಗಿ ಅಂಗಡಿಗಳಿಗೆ ನೀಡಲಾಗಿತ್ತು. ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ಫೆಬ್ರವರಿ 26ರಂದು ಸಿಸೋಡಿಯಾ ಅವರನ್ನು ಬಂಧಿಸಿತ್ತು.







