ಎ.18ರಂದು ವಿನಯಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಕಾಪು : ಕಾಪು ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾಗಿ ನನ್ನನ್ನು ಹೈಕಮಾಂಡ್ ಘೋಷಣೆ ಮಾಡಿದ್ದು, ಎಪ್ರಿಲ್ 18ರಂದು ನಾಮಪತ್ರ ಸಲ್ಲಿಸುವುದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನಯಕುಮಾರ್ ಸೊರಕೆ ಹೇಳಿದರು.
ಶನಿವಾರ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂದು ಬೆಳಗ್ಗೆ 10ಗಂಟೆಗೆ ಜನಾರ್ಧನ ದೇವಸ್ಥಾನದ ಬಳಿಯಿಂದ ಸೇರಿ ಅಲ್ಲಿಂದ ಪಾದಯಾತ್ರೆಯ ಮೂಲಕ ಪಕ್ಷದ ಕಚೇರಿ ರಾಜೀವ್ ಭವನಕ್ಕೆ ಬಂದು ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. 12 ಗಂಟೆಗೆ ನಾಮಪತ್ರ ಸಲ್ಲಿಸಲಾಗುವುದು.
ನಾನು ಕಾಪುವಿನ ಶಾಸಕನಾಗಿದ್ದ ಐದು ವರ್ಷಗಳಲ್ಲಿ ಎಲ್ಲರ ಪ್ರಯತ್ನದಿಂದ ಈ ಕ್ಷೇತ್ರಕ್ಕೆ ಇತಿಹಾಸದಲ್ಲಿ ಆಗದ ಅಭಿವೃದ್ಧಿ ಕೆಲಸಗಳು ಆಗಿವೆ. 40 ವರ್ಷಗಳ ಇತಿಹಾಸದಲ್ಲಿ ನನಗೆ ಸಿಕ್ಕಿರುವ ಅವಕಾಶದಲ್ಲಿ ಉರಿನ ಅಭಿವೃದ್ಧಿ, ಜನರಿಗೆ ಸಿಗಬೇಕಾದ ಸವಲತ್ತುಗಳನ್ನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ತೃಪ್ತಿ ನನಗಿದೆ. ಎಲ್ಲಾ ಧರ್ಮೀಯರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಅನುದಾನ ದೊರಕಿಸಿಕೊಟ್ಟಿದ್ದು, ಮಾತ್ರವಲ್ಲದೆ ಕಾಪುವನ್ನು ತಾಲೂಕಾಗಲು, ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಯಾವುದೇ ವ್ಯಾಪಾರ ದೃಷ್ಟಿಯಿಂದ ನಾವು ಮಾಡುವ ಸೇವೆ ಅಲ್ಲ. ನಾವು ಮಾಡುವ ಸೇವೆ ಜನರ ಹಿತಕ್ಕೆ ಊರಿನ ಅಭಿವೃದ್ಧಿಗೆ ಇದು ನನ್ನ ಉದ್ದೇಶ. ನನ್ನ ಅಭಿವೃದ್ಧಿ ಪರ ಚಿಂತನೆ ಹಾಗೂ ಸೇವೆಯನ್ನು ನೋಡಿ ಪಕ್ಷ ಕಾಪುವಿನಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿದೆ.
ಕಾಪು ಕ್ಷೇತ್ರ ರಾಜಕೀಯವಾಗಿ ಪುನರ್ಜನ್ಮ ನೀಡಿದ ಕ್ಷೇತ್ರ. 2013ರಲ್ಲಿ ಪಕ್ಷದ ಹೈಕಮಾಂಡ್ ಶಾಸಕನಾಗಿ ಸಚಿವನಾಗುವ ಅವಕಾಶ ಸಿಕ್ಕಿತ್ತು. ಈ ಹಿಂದೆ ಎರಡು ಭಾರಿ ಲೋಕಸಭೆಗೆ ಸ್ಪರ್ಧಿಸುವ ಅವಕಾಶ ನೀಡಿದ್ದು, ಒಂದು ಭಾರಿ ಜಯಗಳಿಸಿದ್ದೆ. ಆ ಸಂದರ್ಭಧಲ್ಲಿ ಕಾಪುವಿನ ಮತದಾರರು ಅತ್ಯಧಿಕ ಮತ ನೀಡಿದ್ದರು ಎಂದು ಸ್ಮರಿಸಿಕೊಂಡರು.
ಎಂ.ಎ.ಗಫೂರ್, ದೇವಿಪ್ರಸಾದ್ ಶೆಟ್ಟಿ, ವಿನಯಕುಮಾರ್ ಸೊರಕೆ, ವೈ. ಸುಕುಮಾರ್, ಕೆ.ಎಚ್. ಉಸ್ಮಾನ್ ಉಪಸ್ಥಿತರಿದ್ದರು.