ನಾನು ಕಳ್ಳನಾದರೆ ಇಡೀ ಭೂಮಿಯಲ್ಲಿ ಯಾರೂ ಪ್ರಾಮಾಣಿಕರಲ್ಲ: ಪ್ರಧಾನಿ ಮೋದಿಗೆ ಅರವಿಂದ ಕೇಜ್ರಿವಾಲ್ ಸಂದೇಶ

ಹೊಸದಿಲ್ಲಿ,ಎ.15: ದಿಲ್ಲಿ ಸರಕಾರದ,ಈಗ ರದ್ದುಗೊಂಡಿರುವ ಅಬಕಾರಿ ನೀತಿಯಲ್ಲಿ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ತನಗೆ ಶುಕ್ರವಾರ ಸಮನ್ಸ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,ಆಪ್ ವಿರುದ್ಧ ಸೇಡು ಸಾಧಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತಲೆಯಿಂದ ಕಾಲಿನವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ನಾನು ಕಳ್ಳನಾದರೆ ಈ ಭೂಮಿಯಲ್ಲಿ ಯಾರೂ ಪ್ರಾಮಾಣಿಕರಲ್ಲ’ಎಂಬ ಸಂದೇಶವನ್ನು ಪ್ರಧಾನಿಗೆ ರವಾನಿಸಿದ ಅವರು,ಸಿಬಿಐ ಸಮನ್ಸ್ನ್ನು ತಾನು ಗೌರವಿಸುತ್ತೇನೆ ಮತ್ತು ರವಿವಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.
ದಿಲ್ಲಿಯಲ್ಲಿ ಆಪಾದಿತ ಅಬಕಾರಿ ಹಗರಣದ ಬಗ್ಗೆ ಬಿಜೆಪಿ ಕಳೆದೊಂದು ವರ್ಷದಿಂದಲೂ ಬೊಬ್ಬಿರಿಯುತ್ತಿದೆ. ಅವರು ಪ್ರತಿದಿನ ಯಾರನ್ನಾದರೂ ಬಂಧಿಸುತ್ತಾರೆ ಮತ್ತು ಸಿಸೋದಿಯಾ ಅಥವಾ ಕೇಜ್ರಿವಾಲ್ರನ್ನು ಹೆಸರಿಸುವಂತೆ ಅವರನ್ನು ಹಿಂಸಿಸುತ್ತಾರೆ. ಈ ದೇಶದಲ್ಲಿ ಯಾರಾದರೂ ಏನನ್ನಾದರೂ ಹೇಳಿ ಅದರಿಂದ ಪಾರಾಗಲು ಸಾಧ್ಯವಿದೆಯೇ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.
ತನ್ನ ವಿರುದ್ಧ ಬಿಜೆಪಿಯ ತೀಕ್ಷ್ಣ ದಾಳಿಗೆ ಪ್ರತಿಕ್ರಿಯೆಯಾಗಿ ಕೇಜ್ರಿವಾಲ್ರ ಈ ಹೇಳಿಕೆ ಹೊರಬಿದ್ದಿದೆ. ಕೇಜ್ರಿವಾಲ್ ಹಗರಣದ ರೂವಾರಿಯಾಗಿದ್ದಾರೆ ಮತ್ತು ತನ್ನ ಸಂಪುಟ ಸಹೋದ್ಯೋಗಿಗಳನ್ನು ಕಂಬಿಗಳ ಹಿಂದೆ ತಳ್ಳಿರುವ ಭ್ರಷ್ಟಾಚಾರದ ಚದುರಂಗದ ‘ಕಿಂಗ್ ಪಿನ್’ ಆಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
‘‘ಇಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನಿಗಳನ್ನು ಕೇಳಲು ನಾನು ಬಯಸಿದ್ದೇನೆ. ಇಡೀ ಒಂದು ವರ್ಷ ಇಂತಹ ‘ತನಿಖೆ’ನಡೆಸಿದ ಬಳಿಕ 100 ಕೋ.ರೂ.ಗಳು ಕೈಗಳನ್ನು ಬದಲಿಸಿವೆ ಎಂದು ಅವರು ಹೇಳುತ್ತಿದ್ದಾರೆ. ಈ ಹಣದ ಒಂದೇ ಒಂದು ಪೈಸೆಯಾದರೂ ಎಲ್ಲಿದೆ? ಸೆ.17ರಂದು ಸಂಜೆ ಏಳು ಗಂಟೆಗೆ ನರೇಂದ್ರ ಮೋದಿಯವರಿಗೆ 1,000 ಕೋ.ರೂ.ಗಳನ್ನು ನೀಡಿದ್ದೆ ಎಂದು ನಾನು ಹೇಳಿದರೆ ನೀವು ಅವರನ್ನು ಬಂಧಿಸುತ್ತೀರಾ ’’ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕರನ್ನು ಸಿಲುಕಿಸಲು ಈ.ಡಿ. ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳು ಯಾವ ಪ್ರಯತ್ನಗಳನ್ನೂ ಉಳಿಸುತ್ತಿಲ್ಲ ಎಂದು ಆರೋಪಿಸಿದ ಅವರು,ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ 14 ಫೋನ್ ಗಳನ್ನು ನಾಶಗೊಳಿಸಿದ್ದಾರೆ ಎಂದು ಈ.ಡಿ.ಆರೋಪಿಸಿತ್ತು,ಆದರೆ ಅವು ಈಗಲೂ ಸಕ್ರಿಯವಾಗಿವೆ ಎಂದು ವಾದಿಸಿದರು.
ಈ.ಡಿ.ಸೊತ್ತುಗಳನ್ನು ವಶಪಡಿಸಿಕೊಂಡಿರುವ ಮೆಮೊ ಎನ್ನಲಾದ ದಾಖಲೆಯನ್ನು ತೋರಿಸಿದ ಕೇಜ್ರಿವಾಲ್,ಇಲ್ಲಿವೆ ನೋಡಿ ಆ ಅಂಕಿಅಂಶಗಳು. ಈ 14 ಫೋನ್ಗಳ ಪೈಕಿ ಐದು ಈ.ಡಿ. ಮತ್ತು ಸಿಬಿಐ ವಶದಲ್ಲಿವೆ. ಉಳಿದವು ಕ್ರಿಯಾಶೀಲವಾಗಿದ್ದು,ಆಪ್ ಸ್ವಯಂಸೇವಕರು ಮತ್ತು ಇತರ ಯಾರದೋ ಬಳಿಯಲ್ಲಿವೆ. ಅವರು ಸಿಸೋದಿಯಾರನ್ನು ಸಿಲುಕಿಸಲು ನ್ಯಾಯಾಲಯದಲ್ಲಿ ಪ್ರಮಾಣದಡಿ ಸುಳ್ಳುಗಳನ್ನು ಹೇಳಿದ್ದಾರೆ ಎಂದು ಆರೋಪಿಸಿದರು.
ಆಪಾದಿತ ಅಬಕಾರಿ ಹಗರಣದಲ್ಲಿ ಬಂಧಿತರಾಗಿ ನಂತರ ಜಾಮೀನು ಪಡೆದವರ ನಿದರ್ಶನಗಳನ್ನು ಉಲ್ಲೇಖಿಸಿದ ಕೇಜ್ರಿವಾಲ್,ತಪ್ಪೊಪ್ಪಿಗೆಗಳನ್ನು ಪಡೆದುಕೊಳ್ಳಲು ಈ.ಡಿ.ಮತ್ತು ಸಿಬಿಐ ಅಧಿಕಾರಿಗಳು ಕೆಲವರಿಗೆ ಥರ್ಡ್ ಡಿಗ್ರಿ ಚಿತ್ರಹಿಂಸೆಯನ್ನು ನೀಡಿದ್ದರು ಎಂದೂ ಆಪಾದಿಸಿದರು.







