ವಿದ್ಯಾರ್ಥಿಗಳು ಯಶಸ್ವಿಯಾಗಲು ನಿರಂತರ ಅಧ್ಯಯನ ,ಪರಿಶ್ರಮ ಅಗತ್ಯ: ಡಾ.ಸಿದ್ದೇಗೌಡ
ಆಗ್ನೆಸ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

ಮಂಗಳೂರು: ಶಿಕ್ಷಣವು ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಮತ್ತು ಸಾಮಾಜಿಕ ಕರ್ತವ್ಯಗಳನ್ನು ತಿಳಿಸಿ ಕೊಡುತ್ತದೆ. ಹಾಗಾಗಿ ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ಧೈರ್ಯಗೆಡದೆ ಇದ್ದರೆ ಬಂದ ಸಮಸ್ಯೆಯೇ ದೂರ ಹೋಗುತ್ತದೆ. ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ನಿರಂತರ ಅಧ್ಯಯನ ಮತ್ತು ಪರಿಶ್ರಮ ಅತ್ಯಗತ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕರ್ನಲ್ ಡಾ. ವೈ ಎಸ್ ಸಿದ್ದೇಗೌಡ ಹೇಳಿದ್ದಾರೆ.
ನಗರದ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿರುವ ಸಂತ ಆಗ್ನೆಸ್ ಕಾಲೇಜಿನ 10ನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪದವಿ ಸ್ವೀಕಾರ ಎಂಬುದು ಒಂದು ನಿರ್ಣಾಯಕ ಹಂತ. ಅದು ವಿದ್ಯಾರ್ಜನೆಯ ಕೊನೆ ಯಾಗಬಾರದು. ವ್ಯಕ್ತಿತ್ವಕ್ಕಿರುವ ಅರ್ಹತೆಯ ಉನ್ನತೀಕರಣಕ್ಕೆ ನಾಂದಿಯಾಗಬೇಕೆಂದು ಅವರು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಸಿಸ್ಟರ್ ಡಾ ಲೀಡಿಯಾ ಎಸಿ ಅವರು ಮಾತನಾಡಿ, ಆಗ್ನೆಸ್ ಕಾಲೇಜಿನ ಪದವಿಗಳು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳನ್ನು ತೆರೆದಿಡುತ್ತದೆ. ಒಮ್ಮೆ ಅವಕಾಶಗಳನ್ನು ಕಳೆದುಕೊಂಡರೆ ಮುಂದಕ್ಕೆ ಅಂತದ್ದೇ ಅವಕಾಶ ಸಿಗುವುದು ಕಷ್ಟಸಾಧ್ಯ. ಹಾಗಾಗಿ ಅವಕಾಶಗಳನ್ನು ಸಿಕ್ಕ ಸಮಯದಲ್ಲೇ ಬದುಕಿನ ಉನ್ನತಿಗೆ ಬಳಸಿಕೊಳ್ಳಬೇಕು ಎಂದರು.
ಪಾಂಶುಪಾಲೆ ಸಿ.ಡಾ. ಎಂ. ವೆನಿಸ್ಸಾ ಎ.ಸಿ. ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ರಿಜಿಸ್ಟ್ರಾರ್ ಡಾ.ನ್ಯಾನ್ಸಿ ಎಚ್ ವಾಝ್, ಕಾರ್ಯಕ್ರಮ ಸಂಯೋಜಕಿ ಕಾಲೇಜು ಡೀನ್ ಶುಭರೇಖಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವ್ಯಾಸಂಗ ಪೂರ್ತಿಗೊಳಿಸಿದ ಸ್ನಾತಕೋತ್ತರ ಪದವಿ ವಿಭಾಗದ 121 ವಿದ್ಯಾರ್ಥಿನಿಯರು ಮತ್ತು ಸ್ನಾತಕ ಪದವಿ ವಿಭಾಗದ 529 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಸುಮಾರು 650 ವಿದ್ಯಾರ್ಥಿನಿಯರು ಕುಲಪತಿಗಳಿಂದ ಪದವಿ ಸ್ವೀಕರಿಸಿದರು. ಉನ್ನತ ರಾಂಕ್ ಗಳಿಸಿದ 18 ವಿದ್ಯಾರ್ಥಿನಿಯರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಆಡಳಿತ ಮಂಡಳಿ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಮತ್ತು ಗವರ್ನಿಂಗ್ ಸಮಿತಿಯ ಸದಸ್ಯರು, ವಿವಿಧ ವಿಭಾಗಗಳ ಡೀನ್, ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿ ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಲೇಜಿನ ರಾಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಿಕೆ ಡಾ ಈಟಾ ಎಂ ಡಿಸೋಜ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಿಕೆ ಡಾ ದೇವಿಪ್ರಭಾ ಆಳ್ವ ವಂದಿಸಿದರು. ಭೌತವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಮರೀನಾ ಲೋಬೋ ಕಾರ್ಯಕ್ರಮ ನಿರೂಪಿಸಿದರು.










