ಕನ್ನಡ ಸಹಿತ 13 ಪ್ರಾದೇಶಿಕ ಭಾಷೆಗಳಲ್ಲಿ ಸಿಎಸ್ಎಫ್ ಕಾನ್ಸ್‌ಟೇಬಲ್ ಪರೀಕ್ಷೆ ಬರೆಯಲು ಕೇಂದ್ರ ಸಮ್ಮತಿ

ಹೊಸದಿಲ್ಲಿ, ಎ.15: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಿಗಾಗಿನ ಕಾನ್ಸ್ಟೇಬಲ್ (ಸಾಮಾನ್ಯ ಕರ್ತವ್ಯ) ನೇಮಕಾತಿ ಪರೀಕ್ಷೆಯನ್ನು ಹಿಂದಿ ಇಂಗ್ಲೀಷ್ ಜೊತೆಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಗೃಹ ಸಚಿವಾಲಯವು ನಿರ್ಧರಿಸಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF), ಇಂಡೊ-ಟಿಬೆಟನ್ ಗಡಿ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ (SSB) ಹಾಗೂ ರಾಷ್ಟ್ರೀಯ ಭದ್ರತಾ ದಳ (NSG) ಇವು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಾಗಿವೆ.
‘‘ಐತಿಹಾಸಿಕ ಮೈಲುಗಲ್ಲು ಸೃಷ್ಟಿಸುವಂತಹ ನಿರ್ಧಾರವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರ ಗೃಹ ಸಚಿವಾಲಯವು ಸಿಎಪಿಎಫ್ಗಳಾಗಿನ ಕಾನ್ಸ್ಟೇಬಲ್ (ಸಾಮಾನ್ಯ ಕರ್ತವ್ಯ) ನೇಮಕಾತಿ ಪರೀಕ್ಷೆಯನ್ನು ಹಿಂದಿ ಹಾಗೂ ಇಂಗ್ಲೀಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಕ್ಕೆ ಅನುಮೋದನೆ ನೀಡಿದೆ’’ ಎಂದು ಹೇಳಿಕೆ ತಿಳಿಸಿದೆ.
ಅಸ್ಸಾಂ, ಬಂಗಾಳಿ, ಗುಜರಾತಿ,ಮರಾಠಿ, ಮಲಯಾಳಂ, ಕನ್ನಡ, ತಮಿಳು,ತೆಲುಗು,ಒಡಿಯಾ, ಉರ್ದು, ಪಂಜಾಬ್, ಮಣಿಪುರಿ ಹಾಗೂ ಕೊಂಕಣಿ ಈ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ.
ಈ ನಿರ್ಧಾರದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಹಾಗೂ ತಮ್ಮ ಆಯ್ಕೆಯ ಸಾಧ್ಯತೆಯನ್ನು ಹೆಚ್ಚಿಸಲು ಸಾಧ್ಯವಾಗಲಿದೆಯೆಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಸಿಆರ್ ಪಿಎಫ್ ಸಿಬ್ಬಂದಿ ನೇಮಕಾತಿಗಾಗಿನ ಲಿಖಿತ ಪರೀಕ್ಷೆ ಯನ್ನು ಬರೆಯಬಹುದಾದ ಭಾಷೆಗಳ ಸಾಲಿನಲ್ಲಿ ತಮಿಳನ್ನು ಕೂಡಾ ಸೇರ್ಪಡೆಗೊಳಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೇಂದ್ರ ಸಚಿವ ಅಮಿತ್ಶಾ ಅವರಿಗೆ ಪತ್ರ ಬರೆದ ಕೆಲವೇ ದಿನಗಳ ಬಳಿಕ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ. ಬಹು ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ಆಯೋಜಿಸುವುದಕ್ಕೆ ಅವಕಾಶ ಮಾಡಿಕೊಡಲು ಕೇಂದ್ರ ಗೃಹ ಸಚಿವಾಲಯ ಹಾಗೂ ಸಿಬ್ಬಂದಿ ಆಯ್ಕೆ ಸಮಿತಿ, ತಿಳುವಳಿಕಾ ಒಪ್ಪಂದವೊಂದಕ್ಕೆ ಸಹಿಹಾಕಲಿದೆ ಎಂದು ಹೇಳಿಕೆ ತಿಳಿಸಿದೆ.
ಆಯೋಗವು ನಡೆಸುವ ಸಿಎಸ್ಎಫ್ ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ನೇಮಕಾತಿ ಪರೀಕ್ಷೆಗಳಿಗೆ ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಾರೆ.
2024ರ ಜನವರಿ 1ರಿಂದ ಈ ಪರೀಕ್ಷೆ ನಡೆಯಲಿದೆ. ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಇರುವ ಈ ಸದವಕಾಶವನ್ನು ಬಳಸಿಕೊಳ್ಳುವಂತೆ ಸ್ಥಳೀಯ ಯುವಜನರನ್ನು ಉತ್ತೇಜಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಸರಕಾರಗಳು ವ್ಯಾಪಕ ಅಭಿಯಾನಗಳನ್ನು ನಡೆಸುವ ನಿರೀಕ್ಷೆಯಿದೆ.







