ಪಿಂಚಣಿ ಸುಧಾರಣಾ ಯೋಜನೆಗೆ ಅನುಮೋದನೆ: ಫ್ರಾನ್ಸ್ ನಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ

ಪ್ಯಾರಿಸ್, ಎ.15: ಫ್ರಾನ್ಸ್ ನ ವಿವಾದಾತ್ಮಕ ಪಿಂಚಣಿ ಸುಧಾರಣಾ ಮಸೂದೆಯನ್ನು ಕಾಯ್ದೆಯಾಗಿ ಪರಿವರ್ತಿಸುವಲ್ಲಿ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಸಫಲರಾಗಿದ್ದಾರೆ. ದೇಶದಲ್ಲಿ ನಿವೃತ್ತಿ ವಯಸ್ಸನ್ನು 64ಕ್ಕೆ ಹೆಚ್ಚಿಸಲಾಗಿದೆ ಎಂದು ಸರಕಾರ ಗಝೆಟ್ ಅನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ಮ್ಯಾಕ್ರನ್ ಅವರ ಮಹಾತ್ವಾಕಾಂಕ್ಷೆಯ ಮಸೂದೆಗೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಜನತೆ ಬೀದಿಗಿಳಿದು ಪ್ರತಿಭಟಿಸಿದ್ದರು. ಆದರೆ ಈ ಎಲ್ಲಾ ವಿರೋಧ, ಪ್ರತಿಭಟನೆಯ ಹೊರತಾಗಿಯೂ ಮಸೂದೆಗೆ ಸಾಂವಿಧಾನಿಕ ಸಮಿತಿಯ ಅನುಮೋದನೆ ಗಳಿಸುವಲ್ಲಿ ಸರಕಾರ ಸಫಲವಾಗಿದೆ. ಈ ಕಾನೂನಿನ ಪ್ರಕಾರ, ಪಿಂಚಣಿ ಪಡೆಯುವ ವಯಸ್ಸನ್ನು 62ರಿಂದ 64ಕ್ಕೆ ಹೆಚ್ಚಿಸಲಾಗಿದ್ದು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸಾಂವಿಧಾನಿಕ ಸಮಿತಿಯ ಘೋಷಣೆ ಹೊರಬೀಳುತ್ತಿದ್ದಂತೆಯೇ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಪ್ಯಾರಿಸ್ ಸಿಟಿ ಹಾಲ್ನ ಹೊರಗಡೆ ಸೇರಿದ ಪ್ರತಿಭಟನಾಕಾರರು ಪಿಂಚಣಿ ಸುಧಾರಣೆ ಕಾನೂನನ್ನು ವಾಪಾಸು ಪಡೆಯುವತನಕ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಣೆ ಕೂಗಿದರು. ಪ್ಯಾರಿಸ್ ನಗರದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಕಸದ ಡಬ್ಬಕ್ಕೆ ಬೆಂಕಿ ಹಚ್ಚಲಾಗಿದೆ. ಕಾಯ್ದೆಯನ್ನು ವಾಪಾಸು ಪಡೆಯುವಂತೆ ಮ್ಯಾಕ್ರನ್ರನ್ನು ಆಗ್ರಹಿಸಲಾಗಿದೆ. ದೇಶದ ಅಧ್ಯಕ್ಷರು ಸ್ವಲ್ಪ ಬುದ್ಧಿವಂತಿಕೆ ತೋರಿಸಬೇಕು, ಈ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು ಮತ್ತು ಜನರ ಆಶಯವನ್ನು ಆಲಿಸಬೇಕು. ಕಾನೂನನ್ನು ಜಾರಿಗೊಳಿಸುವ ಹಠ ಬಿಡಬೇಕು ಎಂದು ಸಿಜಿಟಿ ಕಾರ್ಮಿಕ ಯೂನಿಯನ್ನ ಮುಖಂಡೆ ಸೋಫೀ ಬಿನೆಟ್ ಒತ್ತಾಯಿಸಿದ್ದಾರೆ.
ಫ್ರಾನ್ಸ್ ನಲ್ಲಿ ನಡೆಸಿರುವ ಸಮೀಕ್ಷೆಯ ಪ್ರಕಾರ ಹೆಚ್ಚಿನ ಜನತೆ ಪಿಂಚಣಿ ಸುಧಾರಣೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಸರಕಾರ ತನ್ನ ಪಟ್ಟು ಸಡಿಲಿಸುವ ಲಕ್ಷಣ ಕಂಡುಬಂದಿಲ್ಲ. ಹೊಸ ಕಾನೂನು ಸೆಪ್ಟಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಕಾರ್ಮಿಕ ಸಚಿವ ಒಲಿವಿಯರ್ ದುಸೋಪ್ಟ್ ಹೇಳಿದ್ದಾರೆ.
ಈ ಮಧ್ಯೆ, ಪಿಂಚಣಿ ಸುಧಾರಣೆ ಬಗ್ಗೆ ಜನಮತ ಸಂಗ್ರಹಿಸಬೇಕು ಎಂಬ ವಿಪಕ್ಷಗಳ ಪ್ರಸ್ತಾವನೆಯನ್ನೂ ಸಾಂವಿಧಾನಿಕ ಸಮಿತಿ ತಿರಸ್ಕರಿಸಿದೆ. ಜನಮತಕ್ಕೆ ಆಗ್ರಹಿಸಿ ವಿಪಕ್ಷಗಳು ಸಲ್ಲಿಸಿದ ಮತ್ತೊಂದು ಪ್ರಸ್ತಾವನೆಯ ಬಗ್ಗೆ ಮೇ ತಿಂಗಳ ಆರಂಭದಲ್ಲಿ ಪರಿಶೀಲನೆ ನಡೆಸುವುದಾಗಿ ಸಾಂವಿಧಾನಿಕ ಸಮಿತಿ ಹೇಳಿದೆ.







