‘‘ಮಾನಹಾನಿಕರ ಹೇಳಿಕೆ’: ರಾಮ್ ಮಾಧವ್ ರಿಂದ ಕೋರ್ಟ್ ನೋಟಿಸ್; ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದ ಮಲಿಕ್

ಹೊಸದಿಲ್ಲಿ,ಎ.15: ತನ್ನ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಆರೆಸ್ಸೆಸ್ ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ತನಗೆ ಕೋರ್ಟ್ ನೋಟಿಸ್ ಕಳುಹಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮುಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ‘‘ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ’’ ಎಂದು ಹೇಳಿದ್ದಾರೆ. ಅದರ ಬದಲಿಗೆ ನೋಟಿಸ್ ಗೆ ಲಿಖಿತ ಉತ್ತರವನ್ನು ನೀಡುವುದಾಗಿ ಹೇಳಿದ್ದಾರೆ.
‘ದಿ ಪ್ರಿಂಟ್’ ಸುದ್ದಿ ಜಾಲತಾಣದ ವರದಿಗಾರರೊಂದಿಗೆ ಮಾತನಾಡಿದ ಅವರು ತನಗೆ ನೋಟಿಸ್ ಕಳುಹಿಸುವಂತೆ ಯಾರೋ ಒಬ್ಬರು ಅವರ (ಮಾಧವ್) ಮೇಲೆ ಒತ್ತಡ ಹೇರಿರಬಹುದೆಂದು ಮಲಿಕ್ ಶಂಕಿಸಿದ್ದಾರೆ.
‘‘ನಾನು ಜಮ್ಮುಕಾಶ್ಮೀರದ ರಾಜ್ಯಪಾಲನಾಗಿದ್ದಾಗ ಎರಡು ಕಡತಗಳಿಗೆ ಅನುಮೋದನೆ ನೀಡಲು ಆರೆಸ್ಸೆಸ್ ನ ಪದಾಧಿಕಾರಿಯೊಬ್ಬರು ನನಗೆ ಲಂಚದ ಅಮಿಷವೊಡ್ಡಿದ್ದರು ಎಂದು ನಾನು ಮೂರು ವರ್ಷಗಳ ಹಿಂದೆ ಅಂದರೆ 2021ರಲ್ಲಿಯೇ ಹೇಳಿದ್ದೆ. ಈಗ ನಾನು ಹೊಸದೇನನ್ನೂ ಹೇಳಿಲ್ಲ ಎಂದರು.
ರಾಮ್ ಮಾಧವ್ ನೋಟಿಸ್ ಕಳುಹಿಸಿರುವುದರಲ್ಲಿ ಯಾವುದೇ ವಿವೇಕವಿಲ್ಲ. ಶೀಘ್ರದಲ್ಲೇ ನಾನು ಅದಕ್ಕೆ ಲಿಖಿತ ಉತ್ತರವನ್ನು ಕಳುಹಿಸುವುದಾಗಿ’’ ಮಲಿಕ್ ಹೇಳಿದ್ದಾರೆ.
ಸತ್ಯಪಾಲ್ ಮಲಿಕ್ ಅವರು ಎಪ್ರಿಲ್ 8ರಂದು ನೀಡಿದ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ತಾನು ಜಮ್ಮುಕಾಶ್ಮೀರದ ರಾಜ್ಯಪಾಲನಾಗಿದ್ದಾಗ ಜಲವಿದ್ಯುತ್ ಯೋಜನೆ ಹಾಗೂ ರಿಲಯನ್ಸ್ ವಿಮಾ ಯೋಜನೆಗೆ ಅನುಮತಿ ನೀಡುವಂತೆ ರಾಮ್ ಮಾಧವ್ ತನಗೆ ಗಂಟುಬಿದ್ದಿದ್ದರು. ಆದರೆ ತಾನು ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದೆ. ಈವರೆಡೂ ಯೋಜನೆಗಳಿಗೆ ಅನುಮತಿ ನೀಡಿದರೆ ತಾನು 300 ಕೋಟಿ ರೂ.ಗಳನ್ನು ಪಡೆಯಬಹುದು ಎಂದು ಕೆಲವರು ನನಗೆ ಹೇಳಿದ್ದರು ಎಂದು ಮಲಿಕ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
ಮಲಿಕ್ ಗೆ ಕೋರ್ಟ್ ನೋಟಿಸ್ ಕಳುಹಿಸಿದ ಮಾಧವ್
ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಜಮ್ಮುಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿರುದ್ಧ ಆರೆಸ್ಸೆಸ್ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ಅವರು ಕೋರ್ಟ್ ನೋಟಿಸ್ ಕಳುಹಿಸಿದ್ದಾರೆ.
‘‘ರಾಜಕೀಯ ವಲಯದಲ್ಲಿ ಪ್ರಸಕ್ತವಾಗಿ ಉಳಿಯಬೇಕೆಂಬ ಹಂಬಲದಿಂದ ಮಲಿಕ್ ಅವರು ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ’’ ಎಂದು ಮಾಧವ್ ತಿಳಿಸಿದ್ದಾರೆ.
ಸತ್ಯಪಾಲ್ ಮಲಿಕ್ ಅವರ ಹೇಳಿಕೆಯಿಂದಾಗಿ ತನಗಾದ ಮಾನಸಿಕ ಯಾತನೆ ಹಾಗೂ ಕಿರುಕುಳಕ್ಕಾಗಿ ಈ ನೋಟಿಸ್ ದೊರೆತ 48 ತಾಸುಗಳೊಳಗೆ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಮಾಧವ್ ಆಗ್ರಹಿಸಿದ್ದಾರೆ.
‘‘ ಮಾಧವ್ ಅವರ ಹೇಳಿಕೆಗಳು ಆಧಾರರಹಿತ,ಅಪಮಾನಕಾರಿ ಹಾಗೂ ಅಪ್ಪಟ ಸುಳ್ಳಿನಿಂದ ಕೂಡಿವೆ. ಈಗ ನಡೆಯುತ್ತಿರುವ ಹೈಡೆಲ್ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಹಗರಣದ ಬಗ್ಗೆ ಸಿಬಿಐ ನಡೆಸುತ್ತಿರುವ ತನಿಖೆಯ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ಅವರು ಈ ಆರೋಪಗಳನ್ನು ಮಾಡಿದ್ದಾರೆ’’ ಎಂದು ಮಾಧವ್ ಅವರ ವಕೀಲ ಆಯುಷ್ ಆನಂದ್ ತಿಳಿಸಿದ್ದಾರೆ.
ಸತ್ಯಪಾಲ್ ಮಲಿಕ್ಅವರು ಜಮ್ಮುಕಾಶ್ಮೀರದ ರಾಜ್ಯಪಾಲರಾಗಿ 2018ರಿಂದ 2019ರವರೆಗೆ, ಅದು ರಾಜ್ಯದ ಸ್ಥಾನಮಾನ ಕಳೆದುಕೊಳ್ಳುವರೆಗೂ ಕಾರ್ಯನಿರ್ವಹಿಸಿದ್ದರು.







