ಒಳ ಮೀಸಲಾತಿ ಹಂಚಿಕೆ: ಕನ್ನಡಿಯೊಳಗಿನ ಗಂಟು?
ಭಾರತೀಯ ಶೋಷಿತ ಸಮುದಾಯಗಳು ಸಾಮಾಜಿಕ ಸಮಾನ ಅವಕಾಶಗಳಡಿ ಸಹಜವಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದಿರುವ ಕಾರಣ ಅಂತಹ ನತದೃಷ್ಟ ಸಮುದಾಯಗಳಿಗೆ ನ್ಯಾಯ ವಿತರಣೆ ಮೂಲಕ ರಾಷ್ಟ್ರೀಯ ಮುಖ್ಯವಾಹಿನಿಗೆ ಎಳೆಯುವ ಪ್ರಯತ್ನಗಳೇ ಮೀಸಲಾತಿ ಪರಿಕಲ್ಪನೆ. ಇತ್ತೀಚೆಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲರಾದ ಸಮುದಾಯಗಳು ಮೀಸಲಾತಿ ಮೇಲೆ ಲಗಾಮು ಹಾಕಲು ಮುಂದಾಗಿರುವ ಅಂಶಗಳು ಒಂದೆಡೆಯಾದರೆ; ಇನ್ನೂ ಸಾಮಾಜಿಕವಾಗಿ ದುರ್ಬಲರಾಗಿರುವ ಸಮುದಾಯಗಳಿಗೆ ಮೀಸಲಾತಿ ಸಿಗದ ಕಾರಣ ತಮ್ಮ ಪ್ರಜಾಸಂಖ್ಯೆಗೆ ಅನುಗುಣವಾಗಿ ಸಮ ತೂಕದಲ್ಲಿ ಹಂಚಿಕೆಯಾಗಬೇಕೆಂಬ ಬೇಡಿಕೆ ಮೂರು ದಶಕಗಳಿಂದ ಮುನ್ನೆಲೆಗೆ ಬಂದಿದೆ.
ಒಟ್ಟಾರೆ ಮೀಸಲಾತಿ ಕಲ್ಪನೆ ಬಡತನ ನಿರ್ಮೂಲನೆಯ ನೇರ ಕಾರ್ಯಕ್ರಮವಲ್ಲ. ನ್ಯಾಯ ಸಿದ್ಧಾಂತ ಮತ್ತು ರಾಷ್ಟ್ರೀಯ ಸಂಪತ್ತಿನ ಹಂಚಿಕೆಯ ತತ್ವಗಳ ವಿಸ್ತರಣೆಯನ್ನು ಸಂವಿಧಾನದ 15-16 ಮತ್ತು ಇತರ ಅನುಚ್ಛೇದಗಳಲ್ಲಿ ಅಳವಡಿಸಲಾಗಿದೆ. 1950 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿ ಅಖೈರು ಮಾಡಲು ರಾಜ್ಯಾಂಗ ಸಭೆಯು 1936 ಆದೇಶದ ಮೂಲಾಂಶಗಳನ್ನು ಹೀಗೆ ಪುನರುಚ್ಚರಿಸಿತ್ತು:This is in conformity with the views of the majority of the State Governments and continues unaltered the position which obtained under the Government of India Act, 1935 and the Government of India (Scheduled Castes) order 1936. It is also consistent with the object and the purpose of the provisions of the Constitution relating to the Scheduled Castes. ಮೈಸೂರು ರಾಜ್ಯ 1950ರಲ್ಲಿ ಸೂತ್ರಗಳಡಿ ಮೀಸಲಾತಿಗೆ ಜಾತಿಗಳನ್ನು ವ್ಯತಿರಿಕ್ತ ನಿಮ್ನ ವರ್ಗಗಳ/ಅಸ್ಪಶ್ಯ ಸಾಮಾಜಿಕ ಹಿನ್ನೆಲೆಯ ಸಮುದಾಯಗಳನ್ನು ಗುರುತಿಸಿದೆ ಎಂಬ ವಾದ ಇಂದಿಗೂ ಬಹಿರಂಗ ಆರೋಪವಾಗಿದೆ. ಬಹುಶಃ ಸುಪ್ರೀಂ ಕೋರ್ಟ್‌ನಲ್ಲಿ ಮಹೇಂದ್ರ ಕುಮಾರ್ ಮಿತ್ರ ಮತ್ತು ಇತರರು (2019) ದಾಖಲಿಸಿರುವ ದಾವೆಯ ಮೂಲ ತಕರಾರು ಈ ವಿಚಾರಗಳಿಗೆ ಸಂಬಂಧಿಸಿವೆ.
ಭಾಷಾವಾರು ರಾಜ್ಯಗಳ ರಚನೆಯಡಿ ನೆರೆಹೊರೆಯ ಪ್ರಾಂತಗಳಲ್ಲಿ ಚದುರಿ ಹೋಗಿದ್ದ ಭೂ ಪ್ರದೇಶಗಳು ಮೈಸೂರಿಗೆ ಮರು ಸೇರ್ಪಡೆಯಾದವು(1956). ಅಲ್ಲಿನ ಸಾಮಾಜಿಕ ಸೂತ್ರಗಳಡಿ ಮೈಸೂರು ಸಂಸ್ಥಾನದ 15 ಪರಿಶಿಷ್ಟ ಜಾತಿ ಮತ್ತು 09 ಪಂಗಡದಗಳೊಂದಿಗೆ ಹೈದರಾಬಾದ್ (32-5), ಮುಂಬೈ (24-19) ಹಾಗೂ ಮದ್ರಾಸ್ ಕರ್ನಾಟಕ(52-22), ಕೊಡಗು (12-6), ದಕ್ಷಿಣ ಕನ್ನಡ (4-1) ಉತ್ತರ ಕನ್ನಡ (1-0) ಮತ್ತು ಕೊಳ್ಳೇಗಾಲ ತಾಲೂಕು (2-1) ಭಾಗಗಳಿಂದ ಮಾನ್ಯವಾದವು. ಹಾಗಾಗಿ ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳು ಮತ್ತು 50 ಪಂಗಡಗಳು ಕ್ರೋಡೀಕರಣಗೊಂಡವು. ಈ ರೀತಿಯಲ್ಲಿ ಜಾತಿ/ಪಂಗಡಗಳು ಮೈಸೂರಿಗೆ ಬರುವಾಗ ಬಂಜಾರ/ಲಂಬಾಣಿ, ಕೊರಚ/ಕೊರಮ ಮತ್ತು ಭೋವಿ (ಕೋಲಂಭೋ) ಸಮುದಾಯಗಳು ಏಕ ಪ್ರಕಾರದ ಸಾಮಾಜಿಕ ಹಿನ್ನೆಲೆಯ ಅಂದರೆ ನಿಮ್ನ ವರ್ಗಗಳ ಹೊರ ಜಾತಿ ಸಾಮಾಜಿಕ ಗುಣಲಕ್ಷಣಗಳನ್ನು ಹೊಂದಿರಲಿಲ್ಲ. ಆದುದರಿಂದ, ‘‘1931 ರಾಷ್ಟ್ರೀಯ ಜನಗಣತಿ ಈ ಸಮುದಾಯಗಳು ಹೊರ ಜಾತಿಗಳಾಗಿರುವ (Exterior Castes/Out Castes) ಹೊಲೆಯ-ಮಾದಿಗ ಜಾತಿಗಳಿಗೆ ಸಮನಾಂತರವಾದವಲ್ಲ; ಇವುಗಳು ಅಪರಾಧೀಕರಣ ಪ್ರವರ್ಗಗಳಾಗಲು ಹೆಚ್ಚಿನ ಸಾಮಾಜಿಕ ಅರ್ಹತೆ ಹೊಂದಿವೆ’’ ಎಂದು ಅಭಿಮತಿಸಿದೆ. 1976-77ರಲ್ಲಿ ಪ್ರಾದೇಶಿಕ ನಿಬಂಧನೆಗಳು ರದ್ದಾದ ಮೇಲೆ ಕೋಲಂಭೋ ಸಮುದಾಯಗಳು ರಾಜ್ಯಾದ್ಯಂತ ಸಾರ್ವತ್ರಿಕವಾದವು. ಆದರೆ, ಕೊರಚ/ಕೊರಮ ಕೊಡಗಿನಲ್ಲಿ 1950ರಿಂದಲೂ ಅದು ರದ್ದಾಗುವ ತನಕವೂ ಪರಿಶಿಷ್ಟ ಪಂಗಡವಾಗಿತ್ತು. ಸಂವಿಧಾನದಲ್ಲಿ ಸ್ಪಶ್ಯ ಹೇಗೆ ಉಲ್ಲೇಖವಾಗಿಲ್ಲವೂ ಹಾಗೆಯೇ ಅಲೆಮಾರಿ ಪದವೂ ಮಾನ್ಯವಾಗಿಲ್ಲ. ಈ ಪದ ನೇರವಾಗಿ ಅಧಿಸೂಚಿತವಲ್ಲದ (De-notified) ಬುಡಕಟ್ಟಿನ ಅತಿ ಹಿಂದುಳಿದವರಲ್ಲಿ ಅತಿಹೆಚ್ಚು ಪ್ರಯೋಗವಾಗುತ್ತದೆ.
1919ರ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಪ್ರಭಾವಿತ ನಿಮ್ನ ವರ್ಗಗಳ ಅಸ್ಪಶ್ಯರು ಸಾಮಾಜಿಕ ಕಳಂಕ/ಅಪಮಾನಿತ ಪದಗಳಿಂದ ಹುಟ್ಟಿರುವ ಜಾತಿ ನಾಮಪದಗಳಿಗೆ ತಿಲಾಂಜಲಿಯಾಡಲು ಮುಂದಾದರು. ಈ ಬಗ್ಗೆ ಮನವಿ ಸ್ವೀಕರಿಸಿದ್ದ ಮದ್ರಾಸು ಶಾಸನ ಸಭೆ (1921-22) ಪ್ರಾದೇಶಿಕ ಭಾಷಾವಾರು ನೂತನ ನಾಮಗಳನ್ನಿಡಲು ತೀರ್ಮಾನಿಸಿತು. ಅದರಂತೆ, ತಮಿಳು ಭಾಷಿಕ ಅಸ್ಪಶ್ಯರು ಆದಿದ್ರಾವಿಡರಾದರು; ತೆಲುಗು ಭಾಷಿಕರು ಆದಿ ಆಂಧ್ರೀಯರಾದರು. ತತ್ಸಮವಾಗಿ ಮೈಸೂರು ಸರಕಾರ ತನ್ನ ಜನಗಣತಿಯಲ್ಲಿ (1931) ಹೊಲೆಯ-ಮಾದಿಗರನ್ನು ಸಾರಾಸಗಟಾಗಿ ಆದಿ ಕರ್ನಾಟಕ ಎಂದು ನಾಮಕರಣ ಮಾಡಿದ ಕಾರಣ ಇವರಿಬ್ಬರ ಪ್ರಜಾ ಸಂಖ್ಯೆ 10 ಲಕ್ಷಕ್ಕೆ ಏರಿತು. 2011ರ ಪ್ರಕಾರ ಮೂರು ಪಟ್ಟು ಹೆಚ್ಚಿದೆೆ (29.21 ಲಕ್ಷ); ಆದಿ ದ್ರಾವಿಡರು 8 ಲಕ್ಷದಷ್ಟಿದ್ದರೆ ಆದಿ ಆಂಧ್ರೀಯರು 26 ಸಾವಿರವಿದ್ದಾರೆ. ಮಾದಿಗ ಮತ್ತು ಹೊಲೆಯ ಜಾತಿಗಳ ಸ್ವಉಪಜಾತಿ ಸಮಾಗಮ ಏರ್ಪಟ್ಟಿದ್ದು 1956ರ ತರುವಾಯ. ಇದುವೇ ಅಂದಿನ-ಇಂದಿನ ನೈಜ ಸಾಮಾಜಿಕತೆಗಳು.
ಮೈಸೂರಿನಲ್ಲಿ ಕಡಿಮೆ ಉಪ ಜಾತಿ ಹೊಂದಿದ್ದ ಮಾದಿಗರಲ್ಲಿ ಉಪ ಜಾತಿಗಳು ಹೆಚ್ಚಾದಂತೆ ಜನಸಂಖ್ಯೆಯೂ ಏರಿಕೆ ಆಯಿತು. ಆದರೂ 1979ರ ತರುವಾಯ ಮಾದಿಗರ ರಾಜಕೀಯ ಬಲಾಬಲ ಸಂಪೂರ್ಣ ನೆಲಕಚ್ಚಿತು. ಅದರ ವಿಷವರ್ತುಲದಿಂದ ಇಂದಿಗೂ ಹೊರಬರಲಾಗದ ಕಾರಣ ತನ್ನ ಸಾಮಾಜಿಕ ಉಳಿವಿಗಾಗಿ ಪ್ರಜಾ ಪ್ರಮಾಣಾನುಸಾರ ಮೀಸಲಾತಿ ಹಂಚಿಕೆ ಹೋರಾಟ ತೀವ್ರವಾಯಿತು. ಕೊನೆಗೆ ನ್ಯಾಯಮೂರ್ತಿ ಸದಾಶಿವ ಆಯೋಗ ಸಂಪೂರ್ಣ ತನಿಖೆ ಮಾಡಿ ಅದರ ದತ್ತಾಂಶದ ಮೂಲಕ ಮೀಸಲಾತಿಯನ್ನು ವಿಂಗಡಣೆ ಮಾಡಿತ್ತು. ಇಲ್ಲಿಯ ತನಕ ಯಾರಿಗೂ ಅದರ ನೈಜತೆ ತಿಳಿಯಲು ಸಾರ್ವಜನಿಕ ದಾಖಲೆಯಾಗಿ ಸಿಗಲಿಲ್ಲ, ಕೇವಲ ಸೋರಿಕೆಗಳಿಂದ ಬಂದಿರುವ ಮಾಹಿತಿಗಳನ್ನಾಧರಿಸಿ ಪರ-ವಿರೋಧಿಗಳ ಅಭಿಮತಗಳನ್ನು ನೀಡುತ್ತಿದ್ದಾರೆ. ಒಟ್ಟಾರೆ, ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳ ಜನಸಂಖ್ಯೆ ಹಂಚಿಕೆ ಹಾವು ಏಣಿಯಾಟದ ದಾಳಗಳಾಗಿವೆ. ನ್ಯಾಯಮೂರ್ತಿ ನಾಗಮೋಹನ ದಾಸ್ ಅಯೋಗ ಜನಸಂಖ್ಯಾ ಪ್ರಮಾಣ ಏರಿಸಲು ಶಿಫಾರಸು ಮಾಡಿದೆ. ಅದು ಒಳ ಮೀಸಲಾತಿ ಹಂಚಿಕೆಯ ಸೂತ್ರಗಳನ್ನು ನೀಡಿಲ್ಲ. ಭಾಜಪ ನೇತೃತ್ವದ ಕರ್ನಾಟಕ ಸರಕಾರ ಒಳ ಮೀಸಲಾತಿ ಹಂಚಿಕೆ ನಿಗದಿ ಮಾಡುವಾಗ ಏಕಕಾಲದಲ್ಲೇ ಭ್ರಮೆ ಮತ್ತು ಅವಾಸ್ತವಗಳ ಜೊತೆ ಸರಸವಾಡಿದಂತೆ ಕಾಣುತ್ತಿದೆ.
ಕೋಲಂಭೋ ಜಾತಿಗಳನ್ನು ಹೊರತುಪಡಿಸಿದರೆ, ಇನ್ನುಳಿದ 97 ಜಾತಿಗಳ ಪೈಕಿ ಅತ್ಯಧಿಕ ಜಾತಿಗಳು ಹೊಲೆಯ-ಮಾದಿಗ ಸಮುದಾಯಗಳ ಉಪ ಸಮುದಾಯಗಳಾಗಿವೆ. ಇದು ನಿರ್ವಾದಿತ ಸಾಮಾಜಿಕ ನಿಲುವು ಕೂಡ. ಕೇಂದ್ರ ಸರಕಾರದ ಸಾಮಾಜಿಕ ಸಬಲೀಕರಣ ರಾಜ್ಯ ಮಂತ್ರಿಗಳು ಲೋಕಸಭೆಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ/ಪಂಗಡಗಳ ಮೀಸಲಾತಿ ಹೆಚ್ಚಳ ಪ್ರಸ್ತಾವನೆ ಕೇಂದ್ರದ ಮುಂದಿಲ್ಲ ಎಂದಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರದಲ್ಲಿ ಸದಾಶಿವ ಆಯೋಗ ಶಿಫಾರಸು ಮಾಡಿಲ್ಲವೆಂದಿದ್ದಾರೆ. ಹಾಗಾದರೆ ಕಾನೂನು ಮಂತ್ರಿ ಮಾಧುಸ್ವಾಮಿ ನೇತೃತ್ವದ ಉಪ ಸಮಿತಿ ಅಖೈರು ಮಾಡಿರುವ ಹಂಚಿಕೆ ಸೂತ್ರ ಯಾವ ವೈಜ್ಞಾನಿಕ ತಳಹದಿಯನ್ನು ಹೊಂದಿದೆ? ಉದಾಹರಣೆಗೆ ಆಂಧ್ರಪ್ರದೇಶ ವರ್ಗೀಕರಣದಲ್ಲಿ ಅನೇಕ ಸಾಮಾಜಿಕ ಸೂತ್ರಗಳು ಸಮ್ಮಿಳಿತ ಆಗಿರುವುವನ್ನು ಗುರುತಿಸಬಹುದು. ಅಲ್ಲಿ ಮಾದಿಗರ 18 ಮತ್ತು ಮಾಲರ 25 ಉಪ ಜಾತಿಗಳನ್ನು ಅವುಗಳೊಂದಿಗೆ ಸೇರಿಸಿ, ರೇಲಿಗಳನ್ನು ಪ್ರತ್ಯೇಕಿಸಿದೆ. ಆದಿ ಆಂಧ್ರರಾದ ಮಾಲ-ಮಾದಿಗರನ್ನು ಮತ್ತೊಂದು ಗುಂಪು ಮಾಡಿದೆ. ಆದರೆ ಕರ್ನಾಟಕದಲ್ಲಿರುವ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಯಾವುದೇ ಸಾಮಾಜಿಕ ಹಂಚಿಕೆ ಸೂತ್ರಗಳಿಲ್ಲದೆ ಮುಗುಮ್ಮಾಗಿ ವಿಂಗಡಿಸಿರುವುದು ಮತ್ತೊಂದು ಕಿತ್ತಾಟದ ಅಸ್ತ್ರವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಪರಿಶಿಷ್ಟರೊಳಗೆ 14 ಪ್ರಮುಖ ಸಾಂಪ್ರದಾಯಿಕ ವೃತ್ತಿಗಳಿರುವುದನ್ನು ಗುರುತಿಸಲಾಗಿದ್ದು, ಈ ಪೈಕಿ 10ಕ್ಕಿಂತ ಹೆಚ್ಚಿನ ಪ್ರಕಾರಗಳು ಕರ್ನಾಟಕದಲ್ಲಿ ಕಾಣಿಸಿಕೊಂಡಿವೆ. ಅದರ ಅಳವಡಿಕೆಯೂ ಮಂಗರಮಾಯವಾಗಿದೆ.
2001ರ ಜನಗಣತಿ ಹೇಳಿರುವಂತೆ ಆದಿಕರ್ನಾಟಕ ಜನಸಂಖ್ಯೆಯಲ್ಲಿ ಶೇ. 240ರಷ್ಟು ಋಣಾತ್ಮಕ ಬೆಳವಣಿಗೆ ದರ ಕಾಣಿಸಿಕೊಳ್ಳಲು ಆದಿ ಕರ್ನಾಟಕದ ಮಾದಿಗರು ಕೊಂಚ ಮೂಲ ಜಾತಿಯತ್ತ ವಾಲಿರುವುದರ ಸಂಕೇತವೆಂದು ಹೇಳಿದೆ. ಈ ಪ್ರಕ್ರಿಯೆ ರಾಜ್ಯಾದ್ಯಂತ ಸಂಪೂರ್ಣವಾಗಿ ಕಂಡುಬಂದಿಲ್ಲ. ಈ ಜನಗಣತಿಯಲ್ಲಿ ಮಾದಿಗರೆಂದು ಗುರುತಿಸಿಕೊಳ್ಳುವವರು 13.06 ಲಕ್ಷದಷ್ಟಿದ್ದರು; 2011 ವೇಳೆಗೆ 3.52 ಲಕ್ಷ ಜನರ ಇಳಿಮುಖವಾಯಿತು. ಇವರ ಮೇಲೆ ನಡೆದ ಸಂಖ್ಯಾ ಇಳಿಕೆಯಾಟ ಪ್ರಯೋಗ ಬೆಳಕಿಗೆ ಬಂದಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಭಾಗಗಳಲ್ಲಿ ಮಾದಿಗರು ಸಾರ್ವತ್ರಿಕವಾಗಿ ಆದಿ ಕರ್ನಾಟಕರಾದರೆ; ಹೊಲೆಯರು ಆದಿ ದ್ರಾವಿಡರಾಗುತ್ತಾರೆ, ಬೆಂಗಳೂರು, ಹಾಸನ, ಶಿವಮೊಗ್ಗ, ಕೋಲಾರ, ಮೈಸೂರು ಮತ್ತು ಚಾಮರಾಜನಗರ ಪ್ರದೇಶಗಳಲ್ಲಿ ಮಾದಿಗರು ಸಹ ಸಮ್ಮಿಶ್ರ ರೂಪದಲ್ಲಿ ಆದಿಕರ್ನಾಟಕ ಮತ್ತು ಆದಿ ದ್ರಾವಿಡರಾಗುತ್ತಾರೆ. ಆದರೆ, ರಾಜ್ಯ ಸರಕಾರ ಹೊರಡಿಸಿರುವ ವಿಂಗಡಣಾ ಆದೇಶದಲ್ಲಿ ಇಂತಹ ಸಾಮಾಜಿಕ ಬಿಕ್ಕಟ್ಟುಗಳಿಗೆ ಪರಹಾರಗಳಿಲ್ಲ. ಶೇ.1 ಮೀಸಲಾತಿಗೆ ಸೇರಿಸಿರುವ 85 ಉಪಜಾತಿಗಳೆಲ್ಲವೂ ತಮ್ಮ ಮೂಲ ಪ್ರಧಾನ ಜಾತಿಗಳಿಂದ ತಬ್ಬಲಿಗಳಾದ ‘ಅಲೆಮಾರಿ’ ಎಂಬ ಅಸಾಂವಿಧಾನಿಕ ಬಿನ್ನಾಣದ ಬೆಡಗಿಗೆ ಬಲಿಯಾಗಿವೆ.
ಅವುಗಳಿಗೆ ನೀಡಿರುವ ಮೀಸಲಾತಿ ದೊಡ್ಡ ಹಂಡೆಯ ನೀರಿಗೆ ಬೆಲ್ಲದಚ್ಚೊಂದನ್ನು ಮುಳುಗಿಸಿದಂತಿದೆೆ. ಉದಾಹರಣೆಗೆ ಚಂಬಾರರಾದ (ಮರಾಠಿ ಮೂಲ) ಮಾಂಗ್, ಮಾತಂಗ, ಮಾಂಗ್ ಗರೋಡಿ, ತ್ರಿಮತಸ್ಥ ಡೋಹಾರ ಮತ್ತು ಮೋಚಿಗಳನ್ನು ಛೇದಿಸಿ ಬಿಡಲಾಗಿದೆ. ಅದರ ಲಿಂಗಾಯತ ಪಂಥಾನುಯಾಯಿ ಲಿಂಗದೇರ್ ಉಪಜಾತಿಯನ್ನು (ಕಾಂದೇಶನಿಂದ ಬೆಳಗಾವಿ ತನಕ ಇರುವವರು) ಅಲೆಮಾರಿ ಎಂದು ಗುರುತು ಮಾಡಿರುವ ತಜ್ಞರಿಗೆ ಯಾವ ಶಹಭಾಷ್‌ಗಿರಿ ನೀಡಬೇಕೋ ತಿಳಿಯದು. ಆಂಧ್ರ ಮಾಲರನ್ನು (20 ಸಾವಿರ) ಮತ್ತು ಮೊಗೇರ್ (83 ಸಾವಿರದಷ್ಟಿರುವ ಕೃಷಿ ಜೀತದಾಳುಗಳಾಗಿದ್ದವರು; ಮೊಲ ಬೇಟೆ ಆಡುವವರು) ಸಮಾಜಗಳನ್ನು ಅಲೆಮಾರಿ ಅನ್ನುವುದೇ ವಿತಂಡವಾದ. ಕೊಡಗಿನ ಪಾಲೆಗಳು ಮೂಲತಃ ಚರ್ಮಕಾರರು (1961) ಇವರನ್ನು ಒಂದರ ಮೀಸಲಾತಿಗೆ ಸೇರಿಸಲಾಗಿದೆ. ಇಂತಹ ಹತ್ತಾರು ತಕರಾರು ಮತ್ತು ಅಸಂಬದ್ಧತೆಗಳು ಒಳ ಮೀಸಲಾತಿ ವಿಂಗಡಣೆಯ ಆದೇಶದಲ್ಲಿ ಮೇಳೈಸಿವೆ. ಬಿಜೆಪಿ ಸರಕಾರ ಒಳ ಮೀಸಲಾತಿ ಜಾರಿಯ ಲಾಭ ಪಡೆಯಲು ಮೂಗಿಗೆ ತುಪ್ಪಹಚ್ಚುವ ಬದಲು ನೆತ್ತಿಗಚ್ಚುವ ಪ್ರಕ್ರಿಯೆಯಲ್ಲಿ ಹೊಲೆಯ-ಮಾದಿಗ ಉಪ ಸಮುದಾಯಗಳನ್ನು ಸಂಪೂರ್ಣವಾಗಿ ತುಳಿದು ಮೂಲೆ ಗುಂಪು ಮಾಡಲಾಗಿದೆ.
ಸದಾಶಿವ ಆಯೋಗದ ಸಲಹೆ ಸೂಚನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಸರಕಾರ, ಯಾವುದೇ ನಿರ್ದಿಷ್ಟವಾದ ದತ್ತಾಂಶಗಳ ಆಧಾರವಿಲ್ಲದೆ ಮಾಡಿರುವ ಹಂಚಿಕೆ ತತ್ವಗಳನ್ನು ಮಾದಿಗರು ಅಥವಾ ಹೊಲೆಯರು ಸ್ವಾಗತಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅನೇಕ ಮಾದಿಗ ಪ್ರಜ್ಞಾವಂತ ಹೋರಾಟಗಾರರು ಇದೊಂದು ಸಂಚಿನ ರಾಜಕಾರಣದ ಕಾರ್ಯಕ್ರಮವೆಂದು ದಾಖಲೆಗಳ ಆಧಾರದ ಮೇಲೆ ಟೀಕೆ-ಟಿಪ್ಪಣಿ ನೀಡುತ್ತಿದ್ದಾರೆ. ಒಳ ಮೀಸಲಾತಿ ಹೋರಾಟ ಜೀವಂತವಾಗಿರುವುದು ಇವರ ಶ್ರಮಗಳಿಂದ ಎಂದರೆ ತಪ್ಪಾಗದು. ಇಂತಹ ತೊಳಲಾಟದ ನಡುವೆ ಮೀಸಲಾತಿ ಏರಿಕೆ ಮತ್ತು ಅದರ ಸಮತೂಕದ ಹಂಚಿಕೆಯ ಬೇಡಿಕೆಗಳನ್ನು ಸಂವಿಧಾನ ಹೇಗೆ ಸ್ವೀಕರಿಸುತ್ತದೆ ಎಂದು ಕಾದು ನೊಡಬೇಕಿದೆ. ಚುನಾವಣೆಯಲ್ಲಿ ಭಾಜಪಕ್ಕೆ ಏರುಪೇರಾದರೆ ಮರುದಿನವೇ ನೀವ್ಯಾರೂ ನಾವ್ಯಾರೋ ಎಂಬಂತಾದರೆ ಮಾದಿಗರು ಮತ್ತೆ ಬೀದಿಯಲ್ಲಿ ನಿಲ್ಲಬೇಕಾಗುತ್ತದೆ. ಈಗಾಗಲೇ ಈ ಸಮಾಜ ಅತ್ತ ಬೆಂಕಿ ಇತ್ತ ಪುಲಿ ಎಂಬಂತಾಗಿದೆ.
ಕರ್ನಾಟಕ ಸರಕಾರ ಸದಾಶಿವ ಆಯೋಗ ಒಪ್ಪಿಲ್ಲವೆಂದ ಮೇಲೆ ಶೇ 17.ರಷ್ಟು ಮೀಸಲಾತಿ ಹಂಚಿಕೆ ಮಾಡಲು ಅನುಸರಿಸಿದ ವೈಜ್ಞಾನಿಕ ಮಾನದಂಡಗಳನ್ನು ಸರಕಾರ ಎಲ್ಲಿಯೂ ವಿವರಿಸಿಲ್ಲ.
ರಾಷ್ಟ್ರೀಯ ಪರಿಶಿಷ್ಟ ಜಾತಿ ಅಯೋಗ ಈ ಹಿಂದೆ ಆಂಧ್ರಪ್ರದೇಶದ ಪ್ರಸ್ತಾವನೆ ತಿರಸ್ಕರಿಸುವಾಗ ಎತ್ತಿರುವ ಗಂಭೀರ ಪ್ರಶ್ನೆಗಳು ಕರ್ನಾಟಕ ಸಂದರ್ಭದಲ್ಲಿಯೂ ಮಾಡದೆ ಇರದು. ಈ ಅಂಶವನ್ನು ಸದಾಶಿವ ಆಯೋಗ ಉಲ್ಲೇಖಿಸಿದೆ. ಏಕೆಂದರೆ, ಸದಾಶಿವ ಆಯೋಗ ಸ್ಥಾಪಿತ ಕಾನೂನುಗಳಡಿ ಮೀಸಲಾತಿ ಹಂಚಿಕೆಯನ್ನು ನಿರ್ವಹಿಸಿದೆ; ನಾಗಮೋಹನ ದಾಸ್ ಆಯೋಗ ಸಹ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಿದ್ದರೂ ಅದರ ಸೈದ್ಧಾಂತಿಕ ನಿಲುವಿನಲ್ಲಿ ಮೀಸಲಾತಿ ಹಂಚಿಕೆ ವ್ಯಾಪ್ತಿ ಸೇರಿಲ್ಲ. ತತ್ಸಂಬಂಧವಾಗಿ ಸಚಿವ ಸಂಪುಟದ ಉಪ ಸಮಿತಿಯ ನಡಾವಳಿ ಕಂಡಿಕೆ 3ರಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಬೆಂಬಲಿಸುವ ದತ್ತಾಂಶಗಳನ್ನು ಎಲ್ಲಿಯೂ ಸರಕಾರ ಸ್ಪಷ್ಟವಾಗಿ ಮಂಡಿಸಿಲ್ಲ. ಸದಾಶಿವ ಆಯೋಗ ಇನ್ನು ಮುಂದೆ ಬೇಡದ ಅನಗತ್ಯ ವಿಚಾರ, ಆದುದರಿಂದ ಸದರಿ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇನ್ನು ಮುಂದೆ ಸದಾಶಿವ ಆಯೋಗದ ಬಗ್ಗೆ ಮಾದಿಗರು ಅಪ್ಪಿತಪ್ಪಿಯೂ ಬಾಯಿಬಿಡದಂತೆ ಅಥವಾ ಅರ್ಜಿ ಹಿಡಿದು ಸರಕಾರದ ಜನ ಪ್ರತಿನಿಧಿಗಳ ಮುಂದೆ ನಿಲ್ಲದಂತೆ ಮಾಡಿದೆ ಭಾಜಪ ಸರಕಾರದ ಚಮತ್ಕಾರದ ನಿರ್ಧಾರಗಳು. ಇದು ಸಂಘ ಪರಿವಾರದ ಜಾಣ್ಮೆಯ ನಡೆಯಾಗಿದ್ದರೂ ಅದರ ಪರಿತಾಪ ಮುಂದೆ ಅದನ್ನೇ ಸುಡದೆ ಬಿಡದು. ಇದನ್ನು ಯಾರಾದರೂ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದರೆ ಹಂಚಿಕೆಯ ಸೂತ್ರ ಹೇಗಾಯಿತೆಂದು ಸರಕಾರ ಹೇಳಬೇಕಾಗುತ್ತದೆ. ಆಗ ಅದರ ನೈಜ ಬಣ್ಣ ಬಯಲಾಗುತ್ತದೆ. ಬಹುಶಃ ಅದರ ಮುಖೇನ ಉದ್ಭವವಾಗುವ ಕಾನೂನು ಸಮಸ್ಯೆಗಳಿಗೆ ಸಚಿವ ಸಂಪುಟದ ಉಪ ಸಮಿತಿಯ ನಿರ್ಧಾರಗಳಿಂದ ಪರಿಹಾರ ಸಿಗುವುದಂತೂ ದುರ್ಲಭ. ಹರಿಯುವ ನದಿಯ ಮೇಲೆ ಹಲವು ಬಣ್ಣಗಳನ್ನು ಸುರಿದರೆ ಅದು ನಿಧಾನವಾಗಿ ನೀರಲ್ಲಿ ನೀರಾದಂತೆ ಪ್ರಸ್ತುತ ಹಂಚಿಕೆಯ ಸೂತ್ರವೂ ಅಳಿಯದೆ ಇರದು. ಬಿಜೆಪಿಯ ಮೀಸಲಾತಿ ನಡೆ ದ್ವಿಮುಖ ನೀತಿಯನ್ನು ಒಳಗೊಂಡಿದೆ.
ಮತ್ತೊಂದು ಕಡೆ ಹಿಂದುಳಿದ ವರ್ಗಗಳ ಒಳ ಮೀಸಲಾತಿಯಲ್ಲಿ ಮುಮ್ಮುಖ ಲನೆಯ ಬದಲು ಹಿಮ್ಮುಖ ನೆಗತವನ್ನು ಸರಕಾರ ಮಾಡಿದೆ. ಇತ್ತೀಚೆಗೆ ಕೇಂದ್ರ ಸರಕಾರ ಇಡಬ್ಲೂಎಸ್. ಸಮುದಾಯಗಳಿಗೆ ಪ್ರಮಾಣ ಪತ್ರ ನಮೂನೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಪರಿಶಿಷ್ಟರು ಮತ್ತು ಹಿಂದುಳಿದವರು ಈ ಮೀಸಲಾತಿಗೆ ಅರ್ಹರಲ್ಲವೆಂದು ಷರಾ ಬರೆದಿದೆ. ಅಂದಮೇಲೆ ಒಂದು ಹಿಂದುಳಿದ ವರ್ಗದ ಸಾಮಾಜಿಕ ಹಿನ್ನೆಲೆಯಿಂದ ಮೀಸಲಾತಿ ಪಡೆದಿದ್ದ ಮುಸ್ಲಿಮರು ಆರ್ಥಿಕವಾಗಿ ಕೊಂಚ ಹಿಂದುಳಿದು ಸಾಮಾಜಿಕವಾಗಿ ಉನ್ನತಿ ಗಳಿಸಿದ ಸಮುದಾಯಗಳ ಜೊತೆ ಸ್ಪರ್ಧಿಸಲು ಸಾಧ್ಯವೇ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ ಮಾನದಂಡಗಳು ವಿಭಿನ್ನವಾದವು. ಇದೊಂದು ಹಳೆಯ ಮದ್ಯದ ಬಾಟಲಿಗೆ ಸುಂದರ ಚೀಟಿ ಇಟ್ಟಿರುವುದನ್ನು ಚಾರಿತ್ರಿಕ ನಿರ್ಧಾರ ಎಂದರೆ ಗುಮಾನಿಬರುತ್ತದೆ. ಈಗಾಗಲೇ ಒಕ್ಕಲಿಗ ಮತ್ತು ಪಂಚಮಶಾಲಿ ಪ್ರಜ್ಞಾವಂತರು ಇನ್ನೂಬ್ಬರ ಅನ್ನ ಕಿತ್ತು ನಮಗೆ ನೀಡಬೇಕಾದ ಅನಿವಾರ್ಯತೆಗಳಿಲ್ಲವೆಂದು ತಿರಸ್ಕರಿಸಿದ್ದಾರೆ. ಭಾಜಪಕ್ಕೆ ನಿಜವಾಗಿಯೂ ಮೀಸಲಾತಿ ಒಂದು ರಾಷ್ಟ್ರೀಯ ಪರಿವರ್ತನಾ ಸಾಮಾಜಿಕ ಕಾರ್ಯಸೂಚಿ ಎಂದು ದೃಢವಾಗಿದ್ದರೆ, ಅದು ಸುಪ್ರೀಮ್ ಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ವಿಧಿಸಿರುವ 50:50 ಮೀಸಲಾತಿ ಅನುಪಾತ ಸಡಿಲಿಸಲು ಸಾರ್ವಜನಿಕ ಪ್ರಾತಿನಿಧ್ಯ ಅವಕಾಶಗಳನ್ನು ಜಾತಿವಾರು ಪ್ರಜಾ ಸಂಖ್ಯೆಗೆ ಅನುಗುಣವಾಗಿ ವಿಸ್ತರಿಸುವ ರಾಷ್ಟ್ರೀಯ ಕಾಯ್ದೆ ಜಾರಿಗೆ ತಂದು ಅದನ್ನು ಸಂವಿಧಾನದಲ್ಲಿ ಸೇರಿಸಿದರೆ, ರಾಜ್ಯಗಳು ಎಲ್ಲಾ ಬಗೆಯ ಮೀಸಲಾತಿ ಹೆಚ್ಚಳ ಮಾಡಲು ಪರದಾಡುವ ಸ್ಥಿತಿ ಇರುವುದಿಲ್ಲ.







