ಜೀವಬೆದರಿಕೆ ಹಿನ್ನಲೆ ಕೋರ್ಟ್ ಮೊರೆ ಹೋಗಿದ್ದ ಅತೀಕ್ ಮನವಿಯನ್ನು ತಳ್ಳಿಹಾಕಿದ್ದ ಸುಪ್ರೀಂಕೋರ್ಟ್

ಲಕ್ನೋ: ಉತ್ತರ ಪ್ರದೇಶದ (Uttar Pradesh) ಮಾಜಿ ಸಂಸದ ಹಾಗೂ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ (Atiq Ahmed) ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ರನ್ನು ದುಷ್ಕರ್ಮಿಗಳು ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಹತ್ಯೆಗೂ ಸರಿ ಸುಮಾರು ಎರಡು ವಾರಗಳ ಮೊದಲೇ ಅತೀಕ್ ಸಹೋದರ ಅಶ್ರಫ್, ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿದ್ದರು. ಅಧಿಕಾರಿಯಿಂದ ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದ ಅಶ್ರಫ್, ಎರಡು ವಾರಗಳಲ್ಲಿ ಜೈಲಿನಿಂದ ಹೊರ ತಂದು ತಮ್ಮನ್ನು ಕೊಲ್ಲುವುದಾಗಿ ಅಧಿಕಾರಿಯೊಬ್ಬರು ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದರು.
ಈ ಬಗ್ಗೆ, ಮಾರ್ಚ್ 29 ರಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದಾಗಿ ಸರಿ ಸುಮಾರು ಎರಡು ವಾರಗಳ ಬಳಿಕ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್ ಅವರ ಹತ್ಯೆಯಾಗಿದೆ.
“ತನಗೆ ಬೆದರಿಕೆ ಹಾಕಿದ್ದ ಹಿರಿಯ ಅಧಿಕಾರಿ ಹೆಸರನ್ನು ಮುಖ್ಯಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅಲಹಾಬಾದ್ ಮುಖ್ಯ ನ್ಯಾಯಮೂರ್ತಿಗೆ ಬಹಿರಂಗಪಡಿಸಲಾಗುವುದು” ಎಂದು ಅತೀಕ್ ಅಹ್ಮದ್ ಹೇಳಿದ್ದರು.
ಅದಾಗ್ಯೂ, ಅತೀಕ್ ಅಹ್ಮದ್ ಅವರು ಉತ್ತರ ಪ್ರದೇಶ ಪೊಲೀಸರ ಕಸ್ಟಡಿಯಲ್ಲಿ ರಕ್ಷಣೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಜಸ್ಟಿಸ್ ಅಜಯ್ ರಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ರಕ್ಷಣೆ ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಲು ಅತೀಕ್ ಅವರಿಗೆ ಸ್ವಾತಂತ್ರ್ಯವನ್ನು ನೀಡಿತ್ತು. ಆದರೆ, ಅಹ್ಮದ್ ಅವರ ವಕೀಲರ ತೀವ್ರ ಮನವಿಯ ಹೊರತಾಗಿಯೂ ಅತೀಕ್ ಜೀವಕ್ಕೆ ಬೆದರಿಕೆ ಇದೆ ಎಂದು ದಾಖಲಿಸಲು ನ್ಯಾಯಾಲಯವು ನಿರಾಕರಿಸಿತ್ತು. ಅವರು ನ್ಯಾಯಾಂಗ ಬಂಧನದಲ್ಲಿರುವುದರಿಂದ, ಅವರಿಗೆ ಜೀವ ಬೆದರಿಕೆಯಿದ್ದಲ್ಲಿ ಉತ್ತರ ಪ್ರದೇಶ ಸರ್ಕಾರವು ಅವರ ರಕ್ಷಣೆಯನ್ನು ನೋಡಿಕೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿತ್ತು.