ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ, ಎ.15: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಪಕ್ಷೇತರನಾಗಿ ಸ್ಪರ್ಧಿಸಬೇಕೋ ಅಥವಾ ಬೇರೆ ನಿರ್ಧಾರ ಕೈಗೊಳ್ಳಬೇಕೋ ಎಂಬುದರ ಕುರಿತು ಕಾರ್ಯಕರ್ತರ ಅಭಿಪ್ರಾಯ ಪಡೆದು ನಾಳೆ ತೀರ್ಮಾನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶನಿವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರವಿವಾರ ಶಿರಸಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
'ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲದಿದ್ದರೂ, ನನಗೆ ಟಿಕೆಟ್ ಸಿಕ್ಕಿಲ್ಲ. ಚುನಾವಣೆಗೆ ಸ್ಪರ್ಧಿಸುವ ಮೂಲಕ ತಕ್ಕ ತೀರುಗೇಟು ನೀಡುತ್ತೇನೆ. ಮುಂದೆ ಹಲವಾರು ವಿಷಯಗಳನ್ನು ಬಹಿರಂಗಪಡಿಸುತ್ತೇನೆ' ಎಂದು ತಿಳಿಸಿದರು.
'ಕೆಲವರಿಂದ ಪಕ್ಷ ಹಾಳಾಗುತ್ತಿದ್ದು, ಇದರಿಂದ, ಬಹಳ ಬೇಸರಗೊಂಡಿದ್ದೇನೆ. ನನ್ನ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತರ ನಡೆಯುತ್ತಿದೆ' ಎಂದು ತಿಳಿಸಿದರು.





