ಸೇತುವೆಯಿಂದ ಕೆಳಗುರುಳಿದ ಟ್ರ್ಯಾಕ್ಟರ್ ಟ್ರಾಲಿ: 12 ಮಂದಿ ಮೃತ್ಯು

ಮೀರಠ್: ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಮಂದಿಯನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯೊಂದು 20 ಅಡಿ ಆಳದ ಒಣಗಿದ ನದಿಗೆ ಬಿದ್ದು ಸಂಭವಿಸಿದ ದುರಂತದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಉತ್ತರ ಪ್ರದೇಶದ ಶಹಜಹಾನ್‌ಪಿರ ಜಿಲ್ಲೆಯ ತಿಲ್ಹಾರ್ ಪ್ರದೇಶದ ಬೀರಸಿಂಗ್‌ಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಅಜಮತ್‌ಪುರ ಗ್ರಾಮದಲ್ಲಿ ಧಾರ್ಮಿಕ ಆಚರಣೆಯೊಂದಕ್ಕೆ ಗರ್ರಾ ನದಿಯಿಂದ ನೀರು ತರುವ ಸಲುವಾಗಿ ಗ್ರಾಮಸ್ಥರು ತೆರಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ನೀರು ತುಂಬಿಸಿಕೊಂಡ ಬಳಿಕ ಎರಡು ಟ್ರ್ಯಾಕ್ಟರ್ ಟ್ರಾಲಿಗಳು ಪರಸ್ಪರ ಹಿಂದಿಕ್ಕುವ ಪ್ರಯತ್ನದಲ್ಲಿದ್ದಾಗ ಸೇತುವೆಯಲ್ಲಿ ಒಂದು ಟ್ರ್ಯಾಲಿ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಕೆಳಕ್ಕೆ ಬಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
"ದುರಂತದಲ್ಲಿ 12 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೃತಪಟ್ಟವರಲ್ಲಿ ಏಳೂ ಮಂದಿ ಅಪ್ರಾಪ್ತ ವಯಸ್ಸಿನವರು ಸೇರಿದ್ದು, ಎಲ್ಲರೂ 10-15 ವರ್ಷ ವಯಸ್ಸಿನವರು. ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಕೂಡಾ ಜೀವ ಕಳೆದುಕೊಂಡಿದ್ದಾರೆ. 28 ಮಂದಿ ಗಾಯಗೊಂಡಿದ್ದು, ಈ ಪೈಕಿ ಐದು ಮಂದಿಯ ಸ್ಥಿತಿ ಗಂಭೀರವಾಗಿದೆ. ಪ್ರಯಾಣಿಸುತ್ತಿದ್ದ ಎಲ್ಲರೂ ತಿಲ್ಹಾರ್ ಪ್ರದೇಶದ ಸುನೌರ ಗ್ರಾಮದವರು" ಎಂದು ಎಸ್‌ಎಸ್‌ಪಿ ಎಸ್.ಆನಂದ್ ಹೇಳಿದ್ದಾರೆ.
"ನಮ್ಮ ಇಡೀ ಗ್ರಾಮ ಶೋಕಾಚರಣೆಯಲ್ಲಿದೆ. ಉಳಿದುಕೊಂಡಿರುವ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗಾಗಿ ನಾವು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ" ಎಂದು ಗ್ರಾಮದ ಕಿಶನ್ ಸಿಂಗ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಶೋಕ ವ್ಯಕ್ತಪಡಿಸಿದ್ದು, ಪಿಎಂಓ ಕಚೇರಿ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.







