''ನಹಿ ಲೇ ಗಯೇ ತೋ...": ಗುಂಡೇಟಿಗೂ ಮುಂಚೆ ಅತೀಕ್ ಅಹ್ಮದ್ ಕೊನೆಯ ಮಾತು

ಪ್ರಯಾಗ್‌ರಾಜ್: ಆಘಾತಕಾರಿ ಘಟನೆಯೊಂದರಲ್ಲಿ ರಾಜಕಾರಣಿ ಹಾಗೂ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ನನ್ನು ಶನಿವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.
ಹತ್ಯೆಗೆ ಕೆಲವೇ ಕ್ಷಣಗಳ ಮೊದಲು ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಾದ ಇಬ್ಬರೂ ಕ್ರಿಮಿನಲ್‌ಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು ಹಾಗೂ ಅವರ ಕೊಲೆ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದೆ.
"ನಹೀ ಲೇ ಗಯೇ ತೊ ನಹಿ ಗಯೇ (ಅವರು ನಮ್ಮನ್ನು ಕರೆದುಕೊಂಡು ಹೋಗಲಿಲ್ಲ, ಆದ್ದರಿಂದ ನಾವು ಹೋಗಲಿಲ್ಲ)" ಎನ್ನುವುದು ಹತ್ಯೆಯಾಗುವ ಮೊದಲು ಅತಿಕ್ ಅಹ್ಮದ್ ಆಡಿರುವ ಕೊನೆಯ ಮಾತುಗಳಾಗಿದ್ದವು.
ತಮ್ಮ ಮಗ ಅಸದ್ ಅಂತ್ಯಕ್ರಿಯೆಗೆ ಕರೆದೊಯ್ಯದೆ ಇರುವ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳಿದಾಗ ಅತಿಕ್ ಉತ್ತರಿಸುತ್ತಿದ್ದ.
"ಮೈನ್ ಬಾತ್ ಯೇ ಹೈ ಕಿ ಗುಡ್ಡು ಮುಸ್ಲಿಂ.... (ವಿಷಯ ಏನೆಂದರೆ ಆ ಗುಡ್ಡು ಮುಸ್ಲಿಂ...) ಎನ್ನುವುದು ಅತಿಕ್ ಸಹೋದರ ಅಶ್ರಫ್ ಅವರ ಕೊನೆಯ ಮಾತುಗಳಾಗಿದ್ದವು.
ದೃಶ್ಯಾವಳಿಗಳ ಪ್ರಕಾರ, ಇಬ್ಬರಿಗೂ ಕೈಕೋಳ ಹಾಕಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿತ್ತು. ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ಮಾಧ್ಯಮದವರು ಸುತ್ತುವರಿದು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅತೀಕ್‌ನ ತಲೆಗೆ ಹಿಂದಿನಿಂದ ಗುಂಡು ಹಾರಿಸಲಾಯಿತು. ಅಶ್ರಫ್ ಮೇಲೂ ಗುಂಡು ಹಾರಿಸಿದ್ದರು.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅತಿಕ್ ಅಹ್ಮದ್ ಪುತ್ರ ಅಸದ್ ಹತ್ಯೆಯಾದ ಕೆಲವೇ ದಿನಗಳಲ್ಲಿ ಅತಿಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಗ್‌ರಾಜ್‌ಗೆ ಕರೆದೊಯ್ಯುವಾಗ ಶನಿವಾರ ಹತ್ಯೆಗೈಯ್ಯಲಾಗಿದೆ.
ಅತಿಕ್ ಅಹ್ಮದ್ 2005 ರ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ.







