ಮಾಜಿ ಸಂಸದ ಅತಿಕ್ ಅಹ್ಮದ್, ಸಹೋದರನ ಹತ್ಯೆ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಸಿಎಂ ಆದಿತ್ಯನಾಥ್

ಲಕ್ನೊ: ಪ್ರಯಾಗ್‌ರಾಜ್‌ನಲ್ಲಿ ಶನಿವಾರ ರಾತ್ರಿ ನಡೆದ ಗ್ಯಾಂಗ್‌ಸ್ಟರ್-ರಾಜಕಾರಣಿ ಅತಿಕ್ ಅಹ್ಮದ್ ಹಾಗೂ ಆತನ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಅವರ ಹತ್ಯೆಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಶನಿವಾರ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಅಹ್ಮದ್ (60 ವರ್ಷ) ಹಾಗೂ ಆತನ ಸಹೋದರನನ್ನು ಶನಿವಾರ ರಾತ್ರಿ ಪೊಲೀಸ್ ಸಿಬ್ಬಂದಿ ತಪಾಸಣೆಗಾಗಿ ಪ್ರಯಾಗರಾಜ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಸಂವಾದದ ವೇಳೆಯೇ ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಸಾಯಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಜೈಲಿನಲ್ಲಿದ್ದ ಸಹೋದರರು, ರಾತ್ರಿ 10 ಗಂಟೆಯ ಸುಮಾರಿಗೆ ಕೈಕೋಳದಲ್ಲಿದ್ದಾಗಲೇ ಹತ್ಯೆಗೀಡಾಗಿರುವ ಭಯಾನಕ ದೃಶ್ಯಗಳು ಸಾಮಾಜಿಕ ಮಾಧ್ಯಮ ಹಾಗೂ ದೂರದರ್ಶನ ಚಾನೆಲ್‌ಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ.
"ಅಹ್ಮದ್ ಹಾಗೂ ಅಶ್ರಫ್ ಹತ್ಯೆಯ ತನಿಖೆಗಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಮೂರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದ್ದಾರೆ" ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಹೇಳಿದರು.
ಮೂವರು ದಾಳಿಕೋರರನ್ನು ಸ್ಥಳದಿಂದ ಬಂಧಿಸಲಾಗಿದ್ದು, ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಯಾಗ್‌ರಾಜ್ ಘಟನೆಯ ನಂತರ, ಮುಖ್ಯಮಂತ್ರಿ ಲಕ್ನೋದಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದರು ಹಾಗೂ ತನಿಖೆಗೆ ಆದೇಶಿಸಿದ್ದಾರೆ ಎಂದು ಕುಮಾರ್ ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ ನಿರ್ದೇಶಕ ಶಿಶಿರ್ ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ರಮಿತ್ ಶರ್ಮಾ, "ಘಟನೆಯ ನಂತರ ತಕ್ಷಣವೇ ಬಂಧಿಸಲಾದ ಮೂವರು ದಾಳಿಕೋರರು ಅಹ್ಮದ್ ಮತ್ತು ಅಶ್ರಫ್ ಅವರನ್ನು ಮಾತನಾಡಿಸಲು ಪ್ರಯತ್ನಿಸುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಗುಂಪಿನೊಳಗೆ ಸೇರಿಕೊಂಡಿದ್ದರು'' ಎಂದು ಹೇಳಿದರು.







