ಆಪರೇಷನ್ ಫ್ಲಡ್: ಸಹಕಾರಿ ತತ್ವದಲ್ಲಿ ದೇಶದಲ್ಲಿ ಕ್ಷೀರಕ್ರಾಂತಿ
ನಂದಿನಿ - ಅಮುಲ್ ವ್ಹೈಟ್ ವಾರ್

ಆಪರೇಷನ್ ಫ್ಲಡ್ ಯೋಜನೆ ಇಡೀ ವಿಶ್ವದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಯಶಸ್ವೀ ಡೇರಿ ಅಭಿವೃದ್ಧಿ ಯೋಜನೆ ಎನಿಸಿಕೊಂಡಿತು. ಭಾರತದ ದೃಷ್ಟಿಯಲ್ಲಿ ಅದು ಅತ್ಯಂತ ಯಶಸ್ವೀ ಗ್ರಾಮೀಣಾಭಿವೃದ್ಧಿ ಯೋಜನೆಯೂ ಆಗಿತ್ತು. ಅದು ಭಾರತದ ಕ್ಷೀರಕ್ರಾಂತಿ ಎಂದೂ ಎನಿಸಿಕೊಂಡು, ಹಾಲು ಉತ್ಪಾದನೆಯಲ್ಲಿ ಕೊರತೆ ಕಾಣುತ್ತಿದ್ದ ಭಾರತ ವಿಶ್ವದಲ್ಲೇ ಅತಿಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ ಎನಿಸಿಕೊಂಡಿತು. ಅದು ಸಾಧ್ಯವಾದದ್ದು ಸಾಹುಕಾರಿ ಯತ್ನದಿಂದಲ್ಲ, ನಮ್ಮ ರೈತರ ಸಹಕಾರಿ ಪರಿಶ್ರಮದಿಂದ.
ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯಾನಂತರದ ಮೊದಲೆರಡು ದಶಕಗಳಲ್ಲಿ, ದೇಶದಲ್ಲಿ ಹಾಲಿಗೆ ತೀವ್ರ ಬರವಿತ್ತು. ಹಳ್ಳಿಗಳಲ್ಲಿ ರೈತರು ಹಾಲು ಉತ್ಪಾದಿಸುತ್ತಿದ್ದರಾದರೂ, ಅವರ ಹಾಲಿಗೆ ಸೂಕ್ತ ವಿತರಣಾ ವ್ಯವಸ್ಥೆ ಇರಲಿಲ್ಲ. ನಗರ ಮತ್ತು ಪಟ್ಟಣಗಳಲ್ಲಿಯೂ ಅದೇ ಪರಿಸ್ಥಿತಿ ಇತ್ತು.
ದಿಲ್ಲಿ, ಮುಂಬೈ, ಕೋಲ್ಕತಾ ಹಾಗೂ ಮದ್ರಾಸು ಮಹಾನಗರಗಳಲ್ಲಿ ಮತ್ತು ಇನ್ನಷ್ಟು ದೊಡ್ಡ ನಗರಗಳಲ್ಲಿ ಸ್ಥಳೀಯ ಹಾಲು ಉತ್ಪಾದಕರ ಹೊರತಾಗಿ, ಕೆಲವು ಖಾಸಗಿ ಡೇರಿಗಳು ಮತ್ತು ವಿತರಕರು ಹಾಲು ಪೂರೈಸುತ್ತಿದ್ದರು. ಈ ಖಾಸಗಿಯವರ ಹಾಲಿನಲ್ಲಿ ಶೇ. 30ರಷ್ಟು ಗ್ಲಾಕ್ಸೋ, ಬ್ರಿಟಾನಿಯಾ, ಮುಂತಾದ ಕಂಪೆನಿಗಳಿಂದ ಆಮದಾದ ಹಾಲಿನ ಪುಡಿಯಿಂದ ತಯಾರಿಸಿದ ಹಾಲೇ ಇರುತ್ತಿತ್ತು. ಬ್ರಿಟಿಷ್ ಸರಕಾರ 1912ರಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ಅವಕಾಶ ಕೊಡುವ ಮೊದಲು, ಹಾಲು ಉತ್ಪಾದಕರು ಸಂಘಟಿತರಾಗಲು ಯಾವ ರೀತಿಯಲ್ಲೂ ಉತ್ತೇಜನವಿರಲಿಲ್ಲ.
ಮೊದಲ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿ ಹೈನು ಅಭಿವೃದ್ಧಿ ಕಾರ್ಯಗಳನ್ನು ಸ್ವಲ್ಪಮಟ್ಟಿಗೆ ಹಮ್ಮಿಕೊಳ್ಳಲಾಗಿತ್ತು. ಕೆಲವು ರಾಜ್ಯಗಳೂ ತಮ್ಮ ಕೃಷಿ, ಹೈನು ಇಲಾಖೆಗಳ ಮೂಲಕ ಡೇರಿ ಸ್ಥಾಪಿಸುವುದು, ನಗರ ಪ್ರದೇಶಗಳಲ್ಲಿ ಪಶುಸಂಗೋಪನಾ ಕಾಲನಿಗಳನ್ನು ನಿರ್ಮಿಸಲು ಉತ್ತೇಜಿಸುವುದು, ಹೀಗೆ ಹಲವು ಕಾರ್ಯಕ್ರಮಗಳೂ ನಡೆದಿದ್ದವು. ಆದರೂ ಆ ಯೋಜನೆಗಳು ನಿರೀಕ್ಷಿತ ಫಲಿತಾಂಶಗಳನ್ನು ನೀಡಿರಲಿಲ್ಲ. ಅದಕ್ಕೆ ಮುಖ್ಯ ಕಾರಣ, ಆ ಯೋಜನೆಗಳು ಸರಕಾರಗಳೇ ಹಮ್ಮಿಕೊಂಡ ಯೋಜನೆಗಳಾಗಿದ್ದವು. ಅವನ್ನು ಸರಕಾರದ ಅಧಿಕಾರಿಗಳೇ ನಿರ್ವಹಣೆ ಮಾಡುತ್ತಿದ್ದರು.
1946ರಲ್ಲಿ ಆರಂಭಗೊಂಡ ಆನಂದ್ನ ಕೈರಾ ಸಹಕಾರಿ ಹಾಲು ಉತ್ಪಾದಕರ ಸಂಘ ಹಲವಾರು ತೊಡಕುಗಳನ್ನು ನಿವಾರಿಸಿಕೊಳ್ಳುತ್ತ ಯಶಸ್ವಿಯಾಗುತ್ತಾ ಸಾಗಿತ್ತು. 1960ರ ಹೊತ್ತಿಗೆ ಅದರ ಖ್ಯಾತಿ ಗುಜರಾತಿನಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಿಗೂ ಹಬ್ಬತೊಡಗಿತು. ಅದೇ ಸಹಕಾರಿ ಮಾದರಿಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದ ರೈತ ಗ್ರಾಮಗಳು ಉತ್ಪಾದಕರ ಸಂಘಗಳನ್ನು ಸ್ಥಾಪಿಸಿಕೊಳ್ಳತೊಡಗಿದವು. ಮುಂದೆ 1973ರಲ್ಲಿ ಗುಜರಾತಿನ ಎಲ್ಲ ಗ್ರಾಮ ಸಹಕಾರಿ ಸಂಘಗಳೂ ಒಗ್ಗೂಡಿ, ಗುಜರಾತ್ ಕೋ-ಅಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಮ್ಎಮ್ಎಫ್) ಎನ್ನುವ ಒಕ್ಕೂಟ ರಚಿಸಿಕೊಂಡು ಅಮುಲ್ ಬ್ರಾಂಡಿನಲ್ಲಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡತೊಡಗಿದವು.
ಕರ್ನಾಟಕದ ಮಟ್ಟಿಗೆ ಒಂದು ಆಶ್ಚರ್ಯಕರ ಸಂಗತಿ ಇದೆ. 1960ಕ್ಕೆ ಮುಂಚೆಯೇ, ಅಂದರೆ 1955ರಲ್ಲಿ ಕುಶಾಲನಗರದ ಹೊರ ವಲಯದಲ್ಲಿರುವ ಕೂಡಿಗೆ ಗ್ರಾಮದಲ್ಲಿ ಒಂದು ಹಾಲು ಉತ್ಪಾದಕರ ಸಂಘ ಸಹಕಾರಿ ತತ್ವದಲ್ಲೇ ಆರಂಭವಾಗಿತ್ತು. ಆನಂದ್ನ ಸಹಕಾರಿಯ ಬಗ್ಗೆ ಆ ಹಳ್ಳಿಯ ಯಾರಿಗಾದರೂ ತಿಳಿದುಬಂದು ಅದೇ ರೀತಿಯಲ್ಲಿ ಸಂಘವನ್ನು ಹುಟ್ಟುಹಾಕಿದರೋ ಅಥವಾ ಹಳ್ಳಿಯ ಹಾಲು ಉತ್ಪಾದಕರು ತಾವೇ ಸ್ವಯಂಪ್ರೇರಿತರಾಗಿ ಸಂಘಟಿತರಾದರೋ ಯಾರಿಗೂ ನಿಖರವಾಗಿ ತಿಳಿಯದು. ಆದರೆ, ಅದೇ ಕರ್ನಾಟಕದಲ್ಲಿ ಆರಂಭವಾದ ಮೊತ್ತಮೊದಲ ಸಹಕಾರಿ ಹಾಲು ಉತ್ಪಾದಕರ ಸಂಘ ಎಂದು ಇಂದಿಗೂ ದಾಖಲೆಯಲ್ಲಿದೆ.
ಆನಂತರ ದೇಶದಲ್ಲಿ ಡೇರಿ ಅಭಿವೃದ್ಧಿಗೆಂದು ವಿಶ್ವಬ್ಯಾಂಕ್ ನೆರವು ನೀಡಲು ಮುಂದೆ ಬಂದಾಗ, 1975ರಲ್ಲಿ ಕರ್ನಾಟಕ ಡೇರಿ ಅಭಿವೃದ್ಧಿ ನಿಗಮ (ಕೆಡಿಡಿಸಿ) ಸ್ಥಾಪನೆಯಾಯಿತು. ಕೆಡಿಡಿಸಿ ಸ್ಥಾಪನೆಗೆ ಮುಂಚೆಯೇ ಮಂಡ್ಯ, ಹಾಸನ, ಮೈಸೂರು, ತುಮಕೂರು, ಮೊದಲಾದ ಜಿಲ್ಲೆಗಳ ಹಲವಾರು ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಅಸ್ತಿತ್ವದಲ್ಲಿದ್ದವು. ಕೆಡಿಡಿಸಿ ವಿಶ್ವಬ್ಯಾಂಕ್ ನೆರವಿನಡಿಯಲ್ಲಿ ದಕ್ಷಿಣ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮೊದಲ ಹಂತದ ಹೈನು ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಈ ಸಹಕಾರಿ ಸಂಘಗಳು ಕೆಡಿಡಿಸಿ ಯೋಜನೆಯಲ್ಲಿ ಸೇರಿಹೋದವು. ಯೋಜನೆ ಇತರ ಜಿಲ್ಲೆಗಳಿಗೂ ವಿಸ್ತರಣೆ ಆಗುತ್ತಾ ಹೋದಂತೆ, ಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘಗಳೂ ಹೆಚ್ಚೆಚ್ಚು ಹುಟ್ಟಿಕೊಂಡಂತೆ, ಜಿಲ್ಲಾ ಮಿಲ್ಕ್ ಯೂನಿಯನ್ಗಳೂ ಸ್ಥಾಪಿತವಾದವು. 1984ರಲ್ಲಿ ಕೆಡಿಡಿಸಿಯನ್ನು ಸಂಪೂರ್ಣ ರೈತರೇ ನಿರ್ವಹಿಸುವ, ಸದೃಢ ಸಹಕಾರಿ ವ್ಯವಸ್ಥೆ ಇರುವ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿಯನ್ನಾಗಿ (ಕಹಾಮ, ಕೆಎಮ್ಎಫ್) ಪರಿವರ್ತಿಸಲಾಯಿತು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಂಕಲ್ಪದಿಂದ ನ್ಯಾಷನಲ್ ಡೇರಿ ಡೆವಲಪ್ಮೆಂಟ್ ಬೋರ್ಡ್ (ಎನ್ಡಿಡಿಬಿ) 1965ರಲ್ಲಿ ಸ್ಥಾಪನೆಯಾಯಿತಾದರೂ, ಆ ಸಂಸ್ಥೆಯ ಮೂಲಕ ಆಪರೇಷನ್ ಫ್ಲಡ್ ಯೋಜನೆ ಆರಂಭವಾಗಿದ್ದು 1970ರಲ್ಲಿ. ಆಪರೇಷನ್ ಫ್ಲಡ್ಗಾಗಿ ಹಣ ದೊರಕಿಸಿಕೊಳ್ಳಲು ಆದ ವಿಳಂಬವೇ ಅದಕ್ಕೆ ಮುಖ್ಯ ಕಾರಣವಾಗಿತ್ತು. ವಿಶ್ವಸಂಸ್ಥೆಯ ಮತ್ತು ಯೂರೋಪಿಯನ್ ಇಕನಾಮಿಕ್ ಕಮ್ಯೂನಿಟಿಯ (ಇಇಸಿ) ವರ್ಲ್ಡ್ ಫುಡ್ ಪ್ರೋಗ್ರಾಮ್ ಅಡಿಯಲ್ಲಿ ನೆರವು ಕೋರುವ ವಿಸ್ತೃತ ಪ್ರಸ್ತಾವವನ್ನು ಎನ್ಡಿಡಿಬಿ ತಯಾರಿಸಿ ಭಾರತ ಸರಕಾರಕ್ಕೆ ಕಳಿಸಿಕೊಟ್ಟು ವರ್ಷವಾಗುತ್ತಾ ಬಂದಿದ್ದರೂ, ದಿಲ್ಲಿಯ ಉನ್ನತ ಅಧಿಕಾರಿಗಳು ಅದನ್ನು ಕುರ್ಚಿಯ ಕೆಳಗೆ ಹಾಕಿಕೊಂಡು ಕುಳಿತಿದ್ದರು. ಎನ್ಡಿಡಿಬಿ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರ ಸತತ ಪ್ರಯತ್ನದಿಂದ ಕೊನೆಗೂ ಪ್ರಸ್ತಾವ ವಿಶ್ವಸಂಸ್ಥೆಯನ್ನು ತಲುಪಿತು.
ವಿಶ್ವಸಂಸ್ಥೆಯ ರೋಮ್ ಕಚೇರಿಯಲ್ಲಿ ಆ ಪ್ರಸ್ತಾವದ ಚರ್ಚೆ ಆಗುತ್ತಿರುವಾಗಲೂ, ಆ ಎರಡು ಸಂಸ್ಥೆಗಳು ನೆರವು ನೀಡಲು ಒಪ್ಪಿಗೆ ಸೂಚಿಸುವ ಸನ್ನಿವೇಶದಲ್ಲಿಯೂ, ನೆರವನ್ನು ಪಡೆಯುವಾಗ ಬಹಳ ಜಾಗರೂಕವಾಗಿರಬೇಕೆಂದು ಅಂದಿನ ಭಾರತದ ಆರ್ಥಿಕ ನೀತಿ ತನ್ನನ್ನು ತಾನು ಎಚ್ಚರಿಸಿಕೊಳ್ಳುತ್ತಲೇ ಇತ್ತು. ವಿಶ್ವಸಂಸ್ಥೆಯು ಆರ್ಥಿಕ ನೆರವು ನೀಡಿದರೆ, ಇಇಸಿ ತನ್ನ ದೇಶಗಳಲ್ಲಿನ ಹೆಚ್ಚುವರಿ ಹಾಲು ಉತ್ಪನ್ನಗಳನ್ನು ಭಾರತಕ್ಕೆ ದಾನವಾಗಿ ನೀಡುವುದೆಂದಿತ್ತು.
ಆ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಿ, ಅದರಿಂದ ಬಂದ ಹಣವನ್ನು ಆಪರೇಷನ್ ಫ್ಲಡ್ ಯೋಜನೆಗೆ ವಿನಿಯೋಗಿಸಿಕೊಳ್ಳಬೇಕಿತ್ತು. ಆ ಉತ್ಪನ್ನಗಳನ್ನು ಪಡೆದು, ದೇಶದಲ್ಲಿ ಮಾರುವುದರ ದೀರ್ಘಕಾಲೀನ ಪರಿಣಾಮ ಏನಾಗಬಹುದೆಂದು ಭಾರತಕ್ಕೆ ತಿಳಿದೇ ಇತ್ತು. ಆ ಉತ್ಪನ್ನಗಳಿಗೆ ಭಾರತದ ಗ್ರಾಹಕರು ಒಗ್ಗಿ, ನಾಳೆ ಅವನ್ನೇ ಕೇಳುವ ಸನ್ನಿವೇಶ ಸೃಷ್ಟಿಯಾದರೆ, ದೇಶದ ಡೇರಿ ಅಭಿವೃದ್ಧಿ ಕಾರ್ಯಕ್ರಮ ಹೀನಾಯ ಸೋಲು ಅನುಭವಿಸುವುದು ಖಚಿತವಾಗಿತ್ತು. ಸಹಕಾರಿ ತತ್ವದಡಿಯಲ್ಲಿಯೇ ನಮ್ಮ ಗ್ರಾಮೀಣ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಆಗಬೇಕು ಎನ್ನುವ ನೀತಿಗೆ ದೊಡ್ಡ ಹಿನ್ನಡೆ ಉಂಟಾಗುತ್ತಿತ್ತು. ಎಲ್ಲಕ್ಕಿಂತ ಮೇಲಾಗಿ, ಗ್ರಾಮೀಣರು ಆವರೆಗೆ ಇದ್ದಂತಹ ದಯನೀಯ ಬಡತನದ ಪರಿಸ್ಥಿತಿಯಲ್ಲೇ ಮುಂದುವರಿಯವ ಸಾಧ್ಯತೆಯಿತ್ತು.
ಎರಡು ದಶಕಗಳ ಹಿಂದಷ್ಟೇ ಸ್ವಾತಂತ್ರ್ಯ ಪಡೆದು ಔನ್ನತ್ಯ ಬಯಸುತ್ತಿದ್ದ ಭಾರತಕ್ಕೆ ಅದು ಅತ್ಯಂತ ತುಟ್ಟಿ ಆಯ್ಕೆ ಎನಿಸುತ್ತಿತ್ತು. ಅದಾಗಬಾರದು, ಆದರೆ ಇಇಸಿ ದಾನವಾಗಿ ನೀಡುವ ಆ ಉತ್ಪನ್ನಗಳನ್ನು ತಿರಸ್ಕರಿಸಿದರೆ ಯೋಜನೆ ತೆವಳುತ್ತದೆ ಎನ್ನುವ ಸಂದಿಗ್ಧವೂ ಇತ್ತು. ಇಂತಹ ಇಕ್ಕಟ್ಟಿನಲ್ಲೂ ಅಂದು ಭಾರತ ದೃಢತೆಯನ್ನೇ ಪ್ರದರ್ಶಿಸಿ,‘‘ನಾವು ನಿಮ್ಮಿಂದ ನೆರವು ಬೇಡುತ್ತಿರುವುದು ನಿಮ್ಮ ಕಂಪೆನಿಗಳನ್ನು ದೇಶದೊಳಕ್ಕೆ ಬಿಟ್ಟುಕೊಂಡು ಬೆಳೆಸುವುದಕ್ಕಲ್ಲ, ಬದಲಿಗೆ ನಮ್ಮ ಗ್ರಾಮೀಣರ ಅಭಿವೃದ್ಧಿಯನ್ನು ಕೈಗೊಳ್ಳುವುದಕ್ಕೆ. ಯಾವ ಕಾರಣಕ್ಕೂ ನೀವು ದಾನ ನೀಡುವ ಉತ್ಪನ್ನಗಳನ್ನು ನಮ್ಮ ದೇಶದ ಉತ್ಪನ್ನಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರುವುದಿಲ್ಲ. ಈ ಸ್ಪಷ್ಟತೆಯಿಂದಲೇ ನಾವು ನಿಮ್ಮಿಂದ ನೆರವು ಪಡೆಯುತ್ತೇವೆ ಮತ್ತು ಅದೇ ಸ್ಪಷ್ಟತೆಯಿಂದಲೇ ನೀವು ನೆರವು ನೀಡಿ. ನಿಮ್ಮ ನೆರವಿನಿಂದ ನಮ್ಮ ದೇಶವನ್ನು ನಿಮ್ಮ ಘನತೆಯ ಮಟ್ಟಕ್ಕೆ ನಿಲ್ಲಿಸಿಕೊಳ್ಳಿ.’’ ಎಂದು ಹೇಳಿತು. ಇಇಸಿ ಮರುಮಾತಿಲ್ಲದೇ ಒಪ್ಪಿಕೊಂಡಿತು.
ಅಂದಿನ ಮುತ್ಸದ್ದಿಗಳ ಅಂತಹ ಶ್ರೇಷ್ಠ ಕಲ್ಯಾಣರಾಜ್ಯ ಪರಿಕಲ್ಪನೆಯಿಂದ ಇಂದಿನ ಬಂಡವಾಳ ನಿರ್ದೇಶಿತ ರಾಜಕಾರಣಕ್ಕೆ ದೇಶವು ಜಾರಿರುವುದನ್ನು ಕಂಡಾಗ ಅಚ್ಚರಿಯೂ, ದಿಗ್ಭ್ರಮೆಯೂ, ಖೇದವೂ ಒಟ್ಟೊಟ್ಟಿಗೇ ಆಗುತ್ತದೆ.
1970ರಲ್ಲಿ ಆರಂಭಗೊಂಡ ಆಪರೇಷನ್ ಫ್ಲಡ್ ಯೋಜನೆ 1996ರವರೆಗೆ ಮೂರು ಹಂತಗಳಲ್ಲಿ ಅನುಷ್ಠಾನವಾಯಿತು. ಆ ಯೋಜನೆ ಇಡೀ ವಿಶ್ವದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಯಶಸ್ವೀ ಡೇರಿ ಅಭಿವೃದ್ಧಿ ಯೋಜನೆ ಎನಿಸಿಕೊಂಡಿತು. ಭಾರತದ ದೃಷ್ಟಿಯಲ್ಲಿ ಅದು ಅತ್ಯಂತ ಯಶಸ್ವೀ ಗ್ರಾಮೀಣಾಭಿವೃದ್ಧಿ ಯೋಜನೆಯೂ ಆಗಿತ್ತು. ಅದು ಭಾರತದ ಕ್ಷೀರಕ್ರಾಂತಿ ಎಂದೂ ಎನಿಸಿಕೊಂಡು, ಹಾಲು ಉತ್ಪಾದನೆಯಲ್ಲಿ ಕೊರತೆ ಕಾಣುತ್ತಿದ್ದ ಭಾರತ ವಿಶ್ವದಲ್ಲೇ ಅತಿಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ ಎನಿಸಿಕೊಂಡಿತು. ಅದು ಸಾಧ್ಯವಾದದ್ದು ಸಾಹುಕಾರಿ ಯತ್ನದಿಂದಲ್ಲ, ನಮ್ಮ ರೈತರ ಸಹಕಾರಿ ಪರಿಶ್ರಮದಿಂದ.
(ನಾಳೆ: ಆಪರೇಷನ್ ಫ್ಲಡ್ನಿಂದಾದ ಗಣನೀಯ ಸಾಧನೆಗಳು)







