ಸುಡಾನ್‌ನಲ್ಲಿ ಸೇನೆ- ಅರೆಸೇನೆ ಪಡೆಗಳ ಮಧ್ಯೆ ಸಂಘರ್ಷ: 56 ಮಂದಿ ಮೃತ್ಯು

ಸುಡಾನ್: ಸುಡಾನ್ ಸೇನೆ ಮತ್ತು ಪ್ರಬಲ ಅರೆಮಿಲಿಟರಿ ಪಡೆ ನಡುವೆ ಶುಕ್ರವಾರ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ. ಇದು ಸುಡಾನ್ ದೇಶ ಪ್ರಜಾಪ್ರಭುತ್ವಕ್ಕೆ ಮರಳುವ ಪ್ರಯತ್ನಕ್ಕೆ ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದ್ದು, ವಿಸ್ತೃತ ಸಂಘರ್ಷಕ್ಕೆ ನಾಂದಿಯಾಗುವ ಸಾಧ್ಯತೆ ಇದೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯರ ಸಂಘ ಪ್ರಕಟಿಸಿದೆ.
ಸಶಸ್ತ್ರ ಪಡೆಗಳು ಮತ್ತು ಕ್ಷಿಪ್ರ ಬೆಂಬಲ ಪಡೆಗಳ ಗುಂಪಿನ ನಡುವೆ ಹಲವು ದಿನಗಳಿಂದ ನಡೆಯುತ್ತಿರುವ ಸಂಘರ್ಷ ಇದೀಗ ತಾರಕಕ್ಕೇರಿದೆ. 2021ರ ಸೇನಾ ಕ್ಷಿಪ್ರಕ್ರಾಂತಿಯ ಬಳಿಕ ದೇಶವನ್ನು ಪ್ರಜಾಪ್ರಭುತ್ವಕ್ಕೆ ಮರಳುವಂತೆ ಮಾಡುವ ಪ್ರಕ್ರಿಯೆ ವಿಳಂಬಕ್ಕೆ ಇದು ಕಾರಣವಾಗಿತ್ತು.
ಭೀಕರ ಕಾಳಗದ ಬಳಿಕ ಮಿಲಿಟರಿ, ಆರ್‌ಎಸ್‌ಎಫ್ ಜತೆಗೆ ಸಂಧಾನ ಮಾತುಕತೆಯನ್ನು ತಳ್ಳಿಹಾಕಿದೆ. ಕ್ರಾಂತಿಕಾರಿ ಗುಂಪುಗಳನ್ನು ಮಟ್ಟಹಾಕುವುದಾಗಿ ಸೇನೆ ಪ್ರಕಟಿಸಿದೆ. 2021ರ ಕ್ಷಿಪ್ರಕ್ರಾಂತಿಯನ್ನು ಜಂಟಿಯಾಗಿ ಸಂಘಟಿಸಿದ್ದ ಉಭಯ ಸಂಘಟನೆಗಳ ನಡುವೆ ಸಂಘರ್ಷ ಮುಂದುವರಿಯುವ ಸಾಧ್ಯತೆ ಇದೆ.
ಸುಮಾರು ಆರು ಮಂದಿ ರಾಜಧಾನಿ ಖರ್ಟೂಮ್ ಮತ್ತು ಒಮ್‌ಡೂರ್‌ಮನ್‌ನಲ್ಲಿ ಮೃತಪಟ್ಟಿದ್ದು, ನೈಲಾ ನಗರದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದು, 58 ಮಂದಿ ಗಾಯಗೊಂಡಿದ್ದಾರೆ.