ಕಾಂಗ್ರೆಸ್ ನತ್ತ ಜಗದೀಶ್ ಶೆಟ್ಟರ್ ಚಿತ್ತ ?

ಹುಬ್ಬಳ್ಳಿ, ಎ.16: ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಜಗದೀಶ ಶೆಟ್ಟರ್ ಪಕ್ಷದ ವಿರುದ್ಧ ಬಂಡಾಯ ಸಾರಿದ್ದು, ಕಾಂಗ್ರೆಸ್ ಸೇರುವುದು ಖಚಿತ ಎನ್ನಲಾಗುತ್ತಿದೆ.
ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ಶಿರಸಿಗೆ ತೆರಳಿ ಸ್ಪೀಕರ್ ರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲಿಂದ ಹುಬ್ಬಳ್ಳಿಗೆ ವಾಪಸ್ಸಾಗುತ್ತಿರುವ ಶೆಟ್ಟರ್ ಅವರನ್ನು, ಇಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಧಾರವಾಡದ ಹಿರಿಯ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಅವರಿಗೆ, ಶೆಟ್ಟರ್ ಅವರನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕಳಿಸಿ ಕೊಡುವ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಶೆಟ್ಟರ್ ಜೊತೆ, ಸೆಂಟ್ರಲ್ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ರಜತ ಉಳ್ಳಾಗಡ್ಡಿಮಠ ಅವರನ್ನು ಸಹ ಬೆಂಗಳೂರಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
'ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಖಚಿತ. ನಮ್ಮ ನಾಯಕರು ಎಲ್ಲ ರೀತಿಯ ಮಾತುಕತೆ ನಡೆಸಿದ್ದಾರೆ' ಎಂದು ಕೆಪಿಸಿಸಿ ಸದಸ್ಯರಾಗಿರುವ ರಾಬರ್ಟ್ ದದ್ದಾಪುರಿ ಮಾಧ್ಯಮದವರಿಗೆ ತಿಳಿಸಿದ್ದಾರೆ.





