ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಯಲ್ಲಿ 'ಡಿ.ಎನ್.ಎ.' ಕೆಲಸ ಮಾಡುತ್ತಿರುವುದು ಸ್ಪಷ್ಟ: ಕುಮಾರಸ್ವಾಮಿ

ಬೆಳ್ತಂಗಡಿ, ಎ.16: ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ಆ ಪಕ್ಷದ ಆಂತರಿಕ ಬೆಳವಣಿಗೆ. ಅವರಂತಹ ನಾಯಕರೇ ಇಂತಹ ತೀರ್ಮಾನ ಮಾಡಬೇಕಾದರೆ ಹಿಂದೆ ತಾನು ಹೇಳಿದ್ದ ಡಿ.ಎನ್.ಎ. ಬಿಜೆಪಿಯಲ್ಲಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಈಗಿನ ಬೆಳವಣಿಗೆ ನೋಡಿದರೆ ತಾನು ಹಿಂದೆ ಬಿಜೆಪಿಯಲ್ಲಿ ಇದೆ ಎಂದು ಹೇಳಿದ್ದ ಒಂದು ಡಿ.ಎನ್.ಎ. ಈಗ ಅಲ್ಲಿಯ ಚಟುವಟಿಕೆಗೆ ಪೂರಕವಾಗಿದೆ ಎಂದರು.
ಜಗದೀಶ್ ಶೆಟ್ಟರ್ ತನ್ನನ್ನು ಸಂಪರ್ಕಿಸಿಲ್ಲ. ಅಂತಹ ದೊಡ್ಡ ನಾಯಕರುಗಳ ಅವಶ್ಯಕತೆಯಿಲ್ಲ. ಅಂತಹ ನಿರೀಕ್ಷೆ ಇಟ್ಟುಕೊಂಡಿಲ್ಲ. ನಮ್ಮದು ಸಣ್ಣ ಪಕ್ಷ, ಸಣ್ಣ ನಾಯಕರು ಬಂದರೆ ಸ್ವೀಕರಿಸುತ್ತೇವೆ. ಅವರು ಕಾಂಗ್ರೆಸ್ ಸೇರುವ ವಿಚಾರ ನಮಗೆ ತಿಳಿದಿಲ್ಲ, ಅದು ಅವರಿಗೆ ಬಿಟ್ಟ ವಿಚಾರ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ:
ಇಂದು ಮುಂಜಾನೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ, ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಡಾ.ಹೆಗ್ಗಡೆಯವರು ಮಾಜಿ ಮುಖ್ಯಮಂತ್ರಿಗಳನ್ನು ಕ್ಷೇತ್ರದ ಪರವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಬೊಮ್ಮನಹಳ್ಳಿ ಕ್ಷೇತ್ರದ ನಾರಾಯಣ ರಾಜು, ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೇಗೌಡ, ರಾಜ್ಯ ವಕ್ತಾರ ಹಾಗೂ ಮಾದ್ಯಮ ಸಂಚಾಲಕ ಎಂ.ಬಿ.ಸದಾಶಿವ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್, ತಾಲೂಕು ನಿಯೋಜಿತ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ಪ್ರಮುಖರಾದ ಎಚ್.ಎನ್. ನಾಗರಾಜ್, ರಾಮ ಆಚಾರಿ, ಶಾಹಿದ್ ಪಾದೆ ಉಪಸ್ಥಿತರಿದ್ದರು.