ಉತ್ತರ ಪ್ರದೇಶದಲ್ಲಿ ಸಿಎಂ ಆದಿತ್ಯನಾಥ್ ಅವರ ಜಾತಿಗೆ ಸೇರಿದ ಕ್ರಿಮಿನಲ್ ಗಳು ಸುರಕ್ಷಿತರು: ಎಸ್ಪಿ ಆರೋಪ

ಹೊಸದಿಲ್ಲಿ: ರಜಪೂತ ಸಮುದಾಯದ 'ಬಲಾಢ್ಯರ' ಪಟ್ಟಿಯೊಂದನ್ನು ಬಿಡುಗಡೆ ಮಾಡಿರುವ ಸಮಾಜವಾದಿ ಪಾರ್ಟಿ (ಎಸ್ಪಿ)ಯು, ಅವರೆಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಜಾತಿಗೆ ಸೇರಿರುವುದರಿಂದ ಸುರಕ್ಷಿತರಾಗಿದ್ದಾರೆ ಮತ್ತು ಈಗಲೂ ಅಪರಾಧಗಳನ್ನು ಎಸಗುತ್ತಿದ್ದಾರೆ ಎಂದು ಹೇಳಿದೆ.
ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್, ಶಾಸಕ ರಘುರಾಜ ಪ್ರತಾಪ ಸಿಂಗ್ ಅಲಿಯಾಸ್ ರಾಜಾ ಭೈಯ್ಯಾ, ಮಾಜಿ ಶಾಸಕ ಬ್ರಜೇಶ್ ಸಿಂಗ್, ಮಾಜಿ ಸಂಸದ ಧರಂಜಯ ಸಿಂಗ್ ಮತ್ತು ಹಾಲಿ ಸಂಸದ ಬೃಜ್ಭೂಷಣ ಸಿಂಗ್ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ರಜಪೂತ ನಾಯಕರ ಹೆಸರುಗಳನ್ನು ಎಸ್ಪಿ ಟ್ವೀಟಿಸಿದೆ.
ಇವರೆಲ್ಲ ಆದಿತ್ಯನಾಥ್ ಪಾಲಿಗೆ ವಿಶೇಷವಾಗಿದ್ದಾರೆಯೇ? ವಾಸ್ತವದಲ್ಲಿ ಇವರೆಲ್ಲರೂ ಆದಿತ್ಯನಾಥ್ ಜಾತಿಗೆ ಸೇರಿದ್ದಾರೆ, ಹೀಗಾಗಿ ಈಗಲೂ ಸುರಕ್ಷಿತರಾಗಿದ್ದು,ಅಪರಾಧಗಳನ್ನು ಎಸಗುತ್ತಿದ್ದಾರೆ, ಗ್ಯಾಂಗ್ ಗಳನ್ನು ಹೊಂದಿದ್ದಾರೆ ಹಾಗೂ ಕೊಲೆ, ಅತ್ಯಾಚಾರ, ಲೂಟಿ, ದರೋಡೆ ಮತ್ತು ಹಫ್ತಾ ವಸೂಲಿಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಎಸ್ಪಿಯ ಮಾಧ್ಯಮ ಘಟಕವು ಟ್ವೀಟ್ ನಲ್ಲಿ ಹೇಳಿದೆ.
ಈ ಟ್ವೀಟ್ ಉತ್ತರ ಪ್ರದೇಶ ಬಿಜೆಪಿ ಘಟಕದ ಟ್ವೀಟ್ಗೆ ಪ್ರತಿಕ್ರಿಯೆಯಾಗಿದೆ.
ನಕಲಿ ಎನ್ಕೌಂಟರ್ಗಳನ್ನು ನಡೆಸುವ ಮೂಲಕ ಬಿಜೆಪಿ ಸರಕಾರವು ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಬಿಜೆಪಿ ಎಂದಿಗೂ ನ್ಯಾಯಾಲಯವನ್ನು ನಂಬುವುದಿಲ್ಲ. ಇಂದಿನ ಮತ್ತು ಇತ್ತೀಚಿನ ಎನ್ಕೌಂಟರ್ಗಳ ಬಗ್ಗೆ ಕೂಲಂಕಶ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರನ್ನು ಬಿಡಬಾರದು. ಯಾವುದು ಸರಿ ಅಥವಾ ತಪ್ಪು ಎನ್ನುವುದನ್ನು ನಿರ್ಧರಿಸುವ ಹಕ್ಕು ಅಧಿಕಾರಕ್ಕೆ ಇಲ್ಲ ಎಂದು ಎಸ್ಪಿ ವರಿಷ್ಠ ಅಖಿಲೇಶ ಸಿಂಗ್ ಅವರು ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಪುತ್ರನ ಎನ್ಕೌಂಟರ್ಗೆ ಪ್ರತಿಕ್ರಿಯಿಸಿ ಟ್ವೀಟಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ, ತುಷ್ಟೀಕರಣದ ರಾಜಕೀಯದಿಂದ ಕುರುಡಾಗಿರುವ ಅಖಿಲೇಶರಿಗೆ ಕ್ರಿಮಿನಲ್ಗಳ ಎನ್ಕೌಂಟರ್ನಿಂದ ತೀವ್ರ ನೋವಾಗಿದೆ. ಅಖಿಲೇಶ್ ಅವರ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದಾರೆ. ಅವರು ಈ ಕ್ರಿಮಿನಲ್ಗಳನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದರು. ಬಿಜೆಪಿ ಸರಕಾರವು ಅವರನ್ನು ನಾಶ ಮಾಡುತ್ತಿದೆ ಎಂದು ಟ್ವೀಟಿಸಿತ್ತು.
‘2005ರಲ್ಲಿ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ ಪಾಲ್ರನ್ನು ಬಿಜೆಪಿಯವರೇ ಕೊಲೆ ಮಾಡಿದ್ದಾರೆ. ಈ ಕೊಲೆಯ ನೆಪದಲ್ಲಿ ಈಗ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತಗಳ ಧ್ರುವೀಕರಣಕ್ಕೆ ಮತ್ತು ಕೋಮು ಉನ್ಮಾದವನ್ನು ಕೆರಳಿಸಲು ಬಿಜೆಪಿಗೆ ತಕ್ಷಣದ ಅವಕಾಶ ದೊರಕಿರಬಹುದು. ಆದರೆ ಯಾವುದೇ ಬಿಜೆಪಿ ನಾಯಕ,ಅವರು ಎಷ್ಟೇ ದೊಡ್ಡವರಾಗಿರಲಿ,ಅವರನ್ನು ಬಿಡುವುದಿಲ್ಲ ’ ಎಂದೂ ಎಸ್ಪಿ ಮಾಧ್ಯಮ ಘಟಕವು ಟ್ವೀಟಿಸಿದೆ.







